
ಖರಗ್'ಪುರ(ಜ.05): ಭಾರತ ಪ್ರವಾಸದಲ್ಲಿರುವ ಗೂಗಲ್ ಸಿಇಒ ಸುಂದರ್ ಪಿಚೈ ಇಂದು ತಾವು ವಿದ್ಯಾಭ್ಯಾಸ ಪಡೆದ ಐಐಟಿ ಖರಗ್'ಪುರ ಕ್ಯಾಂಪಸ್‌ಗೆ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಈ ವೇಳೆ ತಮ್ಮ ಐಐಟಿ ದಿನಗಳನ್ನು ಸ್ಮರಿಸಿಕೊಂಡ ಅವರು, ‘‘ಚೆನ್ನೈನಲ್ಲಿ ಶಾಲಾ ಶಿಕ್ಷಣ ಪಡೆದಿದ್ದರಿಂದ ತಮಗೆ ಹಿಂದಿ ಸರಿಯಾಗಿ ಬರುತ್ತಿರಲಿಲ್ಲ. ಐಐಟಿಯಲ್ಲಿ ಅದೊಂದು ನ್ಯೂನತೆ ಎಂದು ಅಲ್ಲಿ ಸೇರ್ಪಡೆಗೊಂಡ ನಂತರ ತಿಳಿಯಿತು. ‘ಅಬೇ ಸಾಲೆ’ ಎಂದು ಜನರು ಕರೆಯುತ್ತಿದ್ದರೂ, ತಮ್ನನ್ನು ಕುಚೋದ್ಯ ಮಾಡಲಾಗುತ್ತಿದೆ ಎಂಬ ಅರಿವು ತಮಗಿರಲಿಲ್ಲ,’’ ಎಂದಿದ್ದಾರೆ.
ಜತೆಗೆ, ಐಐಟಿಗೆ ಬಂದ ನಂತರವೇ ತಾವು ಮೊದಲ ಬಾರಿ ಕಂಪ್ಯೂಟರ್ ನೋಡಿದ್ದಾಗಿ ಅವರು ಮತ್ತೊಂದು ಸತ್ಯವನ್ನು ವಿದ್ಯಾರ್ಥಿಗಳ ಮುಂದೆ ಬಿಚ್ಚಿಟ್ಟಿದ್ದಾರೆ. ‘‘ಐಐಟಿಯಲ್ಲಿ ಪ್ರವೇಶ ಪಡೆಯಲು ಕಠಿಣ ಪರಿಶ್ರಮ ಪಡೆಬೇಕಾಗಿತ್ತಾದರೂ, ತರಗತಿಗಳನ್ನು ತಪ್ಪಿಸಿಕೊಳ್ಳುತ್ತಿದ್ದೆ. ಅದು ಕಾಲೇಜು ದಿನಗಳ ಸಂಪ್ರದಾಯ,’’ ಎಂದು ಪಿಚೈ ಪ್ರತಿಪಾದಿಸಿದ್ದಾರೆ.
ತರಗತಿಗೆ ಬಂಕ್:
‘‘ನಾನು ರಾತ್ರಿ ತಡವಾಗಿ ಮಲಗುತ್ತಿದ್ದೆ ಮತ್ತು ಬೆಳಗ್ಗಿನ ತರಗತಿಗಳನ್ನು ತಪ್ಪಿಸಿಕೊಳ್ಳುತ್ತಿದ್ದೆ. ಶೈಕ್ಷಣಿಕ ನಿಯಮಗಳು ಹೇಗಿರುತ್ತವೆಯೋ, ಅದೇ ಅತ್ಯಂತ ಮುಖ್ಯವಾಗುವುದಿಲ್ಲ. ಸವಾಲುಗಳನ್ನು ಸ್ವೀಕರಿಸಲು ಶಿಕ್ಷಣ ಉತ್ತೇಜಿಸಬೇಕು’’ ಎಂದು ಪಿಚೈ ನುಡಿದಿದ್ದಾರೆ. ಜಾಗತಿಕ ಖ್ಯಾತಿಯ ಟೆಕ್ ಟೈಟಾನ್ ಪಿಚೈ ಅವರನ್ನು ನೋಡಲು ವಿದ್ಯಾರ್ಥಿಗಳು ಕಿಕ್ಕಿರಿದು ನೆರೆದಿದ್ದರು. ಕೊನೆಯ ಸಾಲುಗಳಲ್ಲಿ ವಿದ್ಯಾರ್ಥಿಗಳು ಬೆಂಚುಗಳ ಮೇಲೆಯೇ ನಿಂತು ಪಿಚೈ ನುಡಿಗಳನ್ನು ಆಲಿಸಿದರು.
ರೊಮ್ಯಾನ್ಸ್ ಸುಲಭವಿರಲಿಲ್ಲ:
ಕಾಲೇಜು ದಿನಗಳನ್ನು ಸ್ಮರಿಸುತ್ತಾ ಮಾತು ಮುಂದುವರಿಸಿದ ಪಿಚೈ, ತಮ್ಮ ಪತ್ನಿ ಅಂಜಲಿಯನ್ನು ತಾವು ಕ್ಯಾಂಪಸ್'ನಲ್ಲೇ ಭೇಟಿಯಾಗಿದ್ದೆ ಎಂದು ತಿಳಿಸಿದ್ದಾರೆ. ಆದರೆ, ಹುಡುಗಿಯರ ಹಾಸ್ಟೆಲ್ ಒಳಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ, ಹೀಗಾಗಿ ರೊಮ್ಯಾನ್ಸ್ ಅಷ್ಟೊಂದು ಸುಲಭವಾಗಿರಲಿಲ್ಲ. ಹಾಸ್ಟೆಲ್ ಸಮೀಪ ಹೋದರೆ, ‘ಅಂಜಲಿ, ನಿನಗೋಸ್ಕರ ಸುಂದರ್ ಬಂದಿದ್ದಾನೆ’ ಎಂದು ಎಲ್ಲರೂ ಜೋರಾಗಿ ಕೂಗಿ ಹೇಳುತ್ತಿದ್ದರು. ತಮ್ಮಲ್ಲಿ ಮಾತ್ರ ಆಗ ಸ್ಮಾರ್ಟ್‌ಫೋನ್ ಇತ್ತು ಎಂದೂ ಪಿಚೈ ಹೇಳಿದ್ದಾರೆ.
ನೋಟು ಅಮಾನ್ಯ ಒಳ್ಳೆಯದು:
ಇದೇ ವೇಳೆ, ಕೇಂದ್ರ ಸರ್ಕಾರ ಕೈಗೊಂಡಿರುವ ನೋಟು ಅಮಾನ್ಯ ನಿರ್ಧಾರ ದಿಟ್ಟತನದ್ದು ಎಂದು ಪಿಚೈ ಹೇಳಿದ್ದಾರೆ. ‘ಎನ್'ಡಿಟಿವಿ’ಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ. ನೋಟು ಅಮಾನ್ಯ ನಿರ್ಧಾರದಿಂದಾಗಿ ಡಿಜಿಟಲ್ ಬದಲಾವಣೆಯ ತೀವ್ರತೆ ಹೆಚ್ಚಿದೆ ಮತ್ತು ಡಿಜಿಟಲ್ ಪಾವತಿಯನ್ನು ಸುಲಭಗೊಳಿಸುವ ಯುಪಿಐ ವ್ಯವಸ್ಥೆಯ ಸೇವೆಯನ್ನು ಪೂರೈಸುವ ಮೂಲಕ ಗೂಗಲ್ ಭಾರತದ ದಿಟ್ಟ ನಿರ್ಧಾರಕ್ಕೆ ಬೆಂಬಲ ನೀಡಲಿದೆ. ಯುಪಿಐ ಆಧಾರಿತ ಡಿಜಿಟಲ್ ಪಾವತಿ ವ್ಯವಸ್ಥೆ ಭಾರತದಂಥ ದೇಶಕ್ಕೆ ಸೂಕ್ತವಾದುದು, ಈ ವ್ಯವಸ್ಥೆ ಜಾರಿ ಮಾಡಲು ಸರ್ಕಾರದೊಂದಿಗೆ ಪಾಲುದಾರಿಕೆಗೆ ಯತ್ನಿಸುತ್ತಿದ್ದೇವೆ ಎಂದು ಪಿಚೈ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.