
ನವದೆಹಲಿ(ಜ.05): ಕೇಂದ್ರ ಸರ್ಕಾರ ಕರ್ನಾಟಕ ಮೇಲೆ ಮತ್ತೊಮ್ಮೆ ಮಲತಾಯಿ ಧೋರಣೆ ತಾಳಿದೆ. ಭೀಕರ ಬರಗಾಲದಿಂದ ತತ್ತರಿಸಿ ಹೋಗಿರುವ ರಾಜ್ಯಕ್ಕೆ ಅಲ್ಪ ಪರಿಹಾರ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.
ರಾಜ್ಯದಲ್ಲಿನ ಬರಗಾಲಕ್ಕೆ ಸಂಬಂಧಪಟ್ಟಂತೆ ಇತ್ತೀಚೆಗೆ ರಾಜ್ಯದ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ನೇತೃತ್ವದ ನಿಯೋಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಬರಪೀಡಿತ ಪ್ರದೇಶಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ 4,702 ಕೋಟಿ ಅನುದಾನ ಬಿಡುಗಡೆಗೆ ಮನವಿ ಮಾಡಿದ್ದರು. ಅದರಂತೆ ಕರ್ನಾಟಕ ಹಾಗೂ ಉತ್ತರಾಖಂಡದಲ್ಲಿ ಸಂಭವಿಸಿದ್ದ ಭೀಕರ ಬರ ಹಾಗೂ ಪ್ರವಾಹ ಕುರಿತಂತೆ ಆಂತರಿಕ ಸಚಿವಾಲಯದ ತಂಡ ಸಲ್ಲಿಸಿದ್ದ ವರದಿಯನ್ನು ಇಂದು ಪರಿಶೀಲನೆ ನಡೆಸಿರುವ ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಪಡೆ ನಿಧಿ ಹಾಗೂ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ರಾಜ್ಯಕ್ಕೆ 1.782 ಹಣವನ್ನು ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಿದೆ.
ದೆಹಲಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಕರ್ನಾಟಕಕ್ಕೆ 1,782 ಕೋಟಿ ಬರ ಪರಿಹಾರ ಹಣ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ರಾಜ್ಯ ಕೇಳಿದ ಅರ್ಧದಷ್ಟು ಪರಿಹಾರ ಅಂದರೆ 1782 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡುವುದಾಗಿ ಕೇಂದ್ರ ಘೋಷಿಸಿದೆ. ಇದು ಮೂಗಿಗೆ ಕೇವಲ ತುಪ್ಪ ಸವರಿದಂತಾಗಿದೆ. ರಾಜ್ಯದಲ್ಲಿ ಮುಂಗಾರು ಮಳೆ ಸಂಪೂರ್ಣ ವಿಫಲವಾದ ಹಿನ್ನಲೆಯಲ್ಲಿ ರೂ. 14,471 ಕೋಟಿ ಮೌಲ್ಯದ ಕೃಷಿ ಹಾಗೂ ರೂ.1164 ಕೋಟಿ ಮೌಲ್ಯದ ತೋಟಗಾರಿಕಾ ಬೆಳೆಯೂ ಸೇರಿದಂತೆ ರೂ. 15, 636 ಕೋಟಿ ನಷ್ಟ ಉಂಟಾಗಿ ರೈತರು ಕಂಗಾಲಾಗಿದ್ದಾರೆ.
ಈ ಹಿನ್ನಲೆಯಲ್ಲಿ ಬರ ಪರಿಹಾರ ನಿಧಿಯ ನಿಯಮಾವಳಿಯ ಪ್ರಕಾರ ರು. 3,830 ಕೋಟಿ ಹಣವನ್ನು ತುರ್ತಾಗಿ ಬಿಡುಗಡೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಈ ಹಿಂದೆ ಮನವಿ ಮಾಡಿಕೊಂಡಿತ್ತು. ಆದರೆ, ಕೇಂದ್ರ ಕೇವಲ 1,782.44 ಕೋಟಿಯನ್ನಷ್ಟೇ ಪರಿಹಾರ ಧನವಾಗಿ ಬಿಡುಗಡೆ ಮಾಡಿದೆ.
ಉಳಿದ ರಾಜ್ಯಗಳಿಗೆ ಕೊಟ್ಟ ಪರಿಹಾರ
ಮಹಾರಾಷ್ಟ್ರ: 3100 ಕೋಟಿ ರೂ.
ಮಧ್ಯ ಪ್ರದೇಶ:2022 ಕೋಟಿ ರೂ.
ಸಣ್ಣ ರಾಜ್ಯ ಛತ್ತೀಸ್'ಗಡಕ್ಕೆ 1672 ಕೋಟಿ ರೂ.
ಕರ್ನಾಟಕ:1782 ಕೋಟಿ ರೂ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.