ಹೊಸ ಸಂಸದರಿಗೆ ಬಿಜೆಪಿ, ಆರೆಸ್ಸೆಸ್‌ ನೀತಿಪಾಠ

By Web DeskFirst Published Jun 5, 2019, 9:29 AM IST
Highlights

ಹೊಸ ಸಂಸದರಿಗೆ ಬಿಜೆಪಿ, ಆರೆಸ್ಸೆಸ್‌ ನೀತಿಪಾಠ | ಮೋದಿ ಸರ್ಕಾರಕ್ಕೆ ಮುಜುಗರ ತರುವ ಹೇಳಿಕೆ ನೀಡಬೇಡಿ | ಸನ್ಮಾನಗಳಲ್ಲಿ ಕಾಲ ಕಳೆಯದೆ ಕ್ರಿಯಾಶೀಲರಾಗಿ ಕೆಲಸ ಮಾಡಿ
 

ಬೆಂಗಳೂರು (ಜೂ. 05): ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ದಾಖಲೆ ಎಂಬಂತೆ ಬಿಜೆಪಿಯ 25 ಮಂದಿಯನ್ನು ಸಂಸತ್ತಿಗೆ ಆಯ್ಕೆ ಮಾಡಿ ಕಳುಹಿಸಿದ ಬೆನ್ನಲ್ಲೇ ಸಂಘ ಪರಿವಾರ ಮತ್ತು ಪಕ್ಷದ ಹಿರಿಯ ನಾಯಕರು ಅಭಿವೃದ್ಧಿ ಮತ್ತು ನಡವಳಿಕೆ ಕುರಿತು ವಿವರವಾದ ನೀತಿಪಾಠ ಹೇಳಿದ್ದಾರೆ.

ಯಾವುದೇ ಕಾರಣಕ್ಕೂ ಪಕ್ಷ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಯಾವುದೇ ರೀತಿಯಲ್ಲಿ ಮುಜುಗರವಾಗುವಂಥ ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದನ್ನಾಗಲಿ ಅಥವಾ ನಡೆದುಕೊಳ್ಳುವುದಾಗಲಿ ಮಾಡಬೇಡಿ ಎಂದು ನೂತನ ಸಂಸದರಿಗೆ ಸ್ಪಷ್ಟವಾಗಿ ಸೂಚಿಸಲಾಗಿದೆ. ಜೊತೆಗೆ ಸನ್ಮಾನ ಸಮಾರಂಭಗಳಲ್ಲೇ ಹೆಚ್ಚು ಕಾಲ ವ್ಯಯಿಸದೆ ಆರಂಭದಿಂದಲೇ ಕ್ರಿಯಾಶೀಲರಾಗಿ ಎಂಬ ಕಿವಿಮಾತನ್ನೂ ಹೇಳಲಾಗಿದೆ.

ಸದಾಶಿವನಗರದಲ್ಲಿನ ರಾಷ್ಟ್ರೋತ್ಥಾನ ಯೋಗಮಂದಿರದಲ್ಲಿ ಸಂಘ ಪರಿವಾರದ ಹಿರಿಯ ಮುಖಂಡರಾದ ಮುಕುಂದ್‌ ಮತ್ತು ವಿ.ನಾಗರಾಜ್‌ ಅವರ ನೇತೃತ್ವದಲ್ಲಿ ಮಧ್ಯಾಹ್ನದಿಂದ ಸಂಜೆವರೆಗೆ ಸುಮಾರು ನಾಲ್ಕು ಗಂಟೆಗಳ ಕಾಲ ಸುದೀರ್ಘವಾಗಿ ನಡೆದ ಪಕ್ಷದ ನೂತನ ಸಂಸದರ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌, ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಪಕ್ಷದ ಇತರ ಹಿರಿಯ ನಾಯಕರು ಪಾಲ್ಗೊಂಡಿದ್ದರು.

ಜನರು ಈ ಬಾರಿ ಅತೀವ ನಿರೀಕ್ಷೆ ಇಟ್ಟುಕೊಂಡು ಬಿಜೆಪಿಗೆ ಈ ಸಂಖ್ಯೆಯಲ್ಲಿ ಗೆಲುವು ತಂದುಕೊಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೊದಲ ಅವಧಿಯ ಕೇಂದ್ರ ಸರ್ಕಾರದ ಆಡಳಿತವನ್ನು ಮೆಚ್ಚಿಕೊಂಡಿದ್ದಾರೆ. ಆ ಜನರ ವಿಶ್ವಾಸವನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಎಲ್ಲ ಸಂಸದರ ಮೇಲೂ ಇದೆ ಎಂದು ತೀಕ್ಷ$್ಣವಾಗಿ ಎಚ್ಚರಿಸಲಾಗಿದೆ.

- ನಡವಳಿಕೆ, ಅಭಿವೃದ್ಧಿ ಮತ್ತು ಜನಸಂಪರ್ಕ. ಇವು ಮೂರು ಮುಖ್ಯ ಮಂತ್ರಿಗಳಾಗಬೇಕು. ನಿಮ್ಮ ನಡವಳಿಕೆಯನ್ನು ಜನರು ಗಮನಿಸುತ್ತಿರುತ್ತಾರೆ. ಸಾಮಾಜಿಕ ಜಾಲತಾಣ ತುಂಬಾ ಕ್ರಿಯಾಶೀಲವಾಗಿರುವ ಈ ಕಾಲಘಟ್ಟದಲ್ಲಿ ಸಣ್ಣ ಪುಟ್ಟವಿಷಯಗಳಲ್ಲೂ ಅಜಾಗರೂಕತೆ ಅಥವಾ ಅಲಕ್ಷ್ಯ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ಒಂದು ಸಣ್ಣ ತಪ್ಪು ದೊಡ್ಡ ಸುದ್ದಿಯಾಗುತ್ತದೆ ಎಂಬುದನ್ನು ಸದಾಕಾಲ ನೆನಪಿನಲ್ಲಿ ಇಟ್ಟುಕೊಳ್ಳಬೇಕು.

- ನಿಮ್ಮ ಲೋಕಸಭಾ ಕ್ಷೇತ್ರದಲ್ಲಿನ ಸಮಸ್ಯೆಗಳು ಹಾಗೂ ನೆನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಮೊದಲು ಅರಿತುಕೊಳ್ಳಿ. ಒಂದು ಪ್ರಮುಖ ವಿಷಯವನ್ನು ಎತ್ತಿಕೊಂಡು ಅದನ್ನು ಪರಿಹರಿಸುವವರೆಗೆ ವಿಶ್ರಮಿಸದೆ ಪ್ರಯತ್ನಿಸಿ.

- ಜೊತೆಗೆ ರಾಜ್ಯದ ಗಂಭೀರ ಸಮಸ್ಯೆಗಳ ಪಟ್ಟಿಮಾಡಿಕೊಳ್ಳಬೇಕು. ಇದರ ನೇತೃತ್ವವನ್ನು ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ವಹಿಸಿಕೊಳ್ಳಬೇಕು. ತಿಂಗಳಿಗೊಮ್ಮೆ ಬಿಜೆಪಿಯ ಎಲ್ಲ ಸಂಸದರೂ ಸಭೆ ಸೇರಿ ರಾಜ್ಯದ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸಬೇಕು.

ಸಭೆಗೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಸಂಸದರಾದ ರಮೇಶ್‌ ಜಿಗಜಿಣಗಿ, ಅಣ್ಣಾ ಸಾಹೇಬ್‌ ಜೊಲ್ಲೆ ಅವರು ಅನಿವಾರ್ಯ ಕಾರಣಗಳಿಂದಾಗಿ ಹಾಜರಾಗಿರಲಿಲ್ಲ. ಇನ್ನುಳಿದಂತೆ ಪಕ್ಷದ ಎಲ್ಲ ಸಂಸದರೂ ಪಾಲ್ಗೊಂಡಿದ್ದರು.

click me!