ಸಿದ್ಧತೆ ನಡುವೆಯೂ ನಿಲ್ಲದ ಚಿತ್ರೀಕರಣ ವೇಳೆಯ ದುರಂತಗಳು

By Web DeskFirst Published Mar 30, 2019, 10:01 AM IST
Highlights

‘ರಣಂ’ ಚಿತ್ರದ ಚಿತ್ರೀಕರಣದ ವೇಳೆ ಸಂಭವಿಸಿದ ಸಿಲಿಂಡರ್‌ ಸ್ಫೋಟ ಚಿತ್ರರಂಗದಲ್ಲಿ ಮತ್ತೆ ಆತಂಕ ಸೃಷ್ಟಿಸಿದೆ. ಚಿತ್ರೀಕರಣದ ವೇಳೆ ಮುನ್ನೆಚ್ಚರಿಕೆ ತೀರಾ ಅಗತ್ಯ ಎನ್ನುವುದನ್ನು ಈ ಹಿಂದಿನ ಘಟನೆಗಳು ನೆನಪಿಸುತ್ತಲೇ ಬಂದಿವೆ. ಆದರೂ, ಆಗಾಗ ಒಂದಲ್ಲೊಂದು ರೀತಿಯ ಅನಾಹುತಗಳು ಚಿತ್ರೀಕರಣದ ವೇಳೆ ನಡೆಯುತ್ತಲೇ ಇವೆ. ಈಗ ‘ರಣಂ’ ಶೂಟಿಂಗ್ ವೇಳೆ ಅವಘಡವೊಂದು ಸಂಭವಿಸಿದೆ. 
 

ಬೆಂಗಳೂರು :  ಕನ್ನಡ ಚಿತ್ರೋದ್ಯಮ ಮತ್ತೊಮ್ಮೆ ಬೆಚ್ಚಿ ಬಿದ್ದಿದೆ. ‘ಮಾಸ್ತಿ ಗುಡಿ’ಚಿತ್ರದ ಚಿತ್ರೀಕರಣದ ವೇಳೆ ನಡೆದ ಇಬ್ಬರು ಖಳ ನಟರ ದುರಂತ ಅಂತ್ಯದ ನಂತರ ಚಿತ್ರ ನಿರ್ಮಾಪಕರು ಎಚ್ಚೆತ್ತು ಕೊಂಡರೂ, ಚಿತ್ರೀಕರಣದ ವೇಳೆ ಸಂಭವಿಸುತ್ತಿರುವ ಅವಘಡಗಳು ಮಾತ್ರ ನಿಂತಿಲ್ಲ. ಈಗ ‘ರಣಂ’ ಚಿತ್ರದ ಚಿತ್ರೀಕರಣದ ವೇಳೆ ಸಂಭವಿಸಿದ ಸಿಲಿಂಡರ್‌ ಸ್ಫೋಟ ಚಿತ್ರರಂಗದಲ್ಲಿ ಮತ್ತೆ ಆತಂಕ ಸೃಷ್ಟಿಸಿದೆ. ಚಿತ್ರೀಕರಣದ ವೇಳೆ ಮುನ್ನೆಚ್ಚರಿಕೆ ತೀರಾ ಅಗತ್ಯ ಎನ್ನುವುದನ್ನು ಈ ಹಿಂದಿನ ಘಟನೆಗಳು ನೆನಪಿಸುತ್ತಲೇ ಬಂದಿವೆ. ಆದರೂ, ಆಗಾಗ ಒಂದಲ್ಲೊಂದು ರೀತಿಯ ಅನಾಹುತಗಳು ಚಿತ್ರೀಕರಣದ ವೇಳೆ ನಡೆಯುತ್ತಲೇ ಇವೆ. ಈಗ ‘ರಣಂ’ ಮರಣದ ಇತಿಹಾಸ ಸೃಷ್ಟಿಸಿದೆ.

ಕನಕಪುರ ಶ್ರೀನಿವಾಸ್‌ ನಿರ್ಮಾಣದ ಸಿನಿಮಾ:

‘ಭರ್ಜರಿ’ ಚಿತ್ರದ ಖ್ಯಾತಿಯ ನಿರ್ಮಾಪಕ ಕನಕಪುರ ಶ್ರೀನಿವಾಸ್‌, ದ್ವಿ ಭಾಷೆಯಲ್ಲಿ ನಿರ್ಮಾಣ ಮಾಡುತ್ತಿರುವ ಚಿತ್ರ ‘ರಣಂ’. ಟಾಲಿವುಡ್‌ ನಿರ್ದೇಶಕ ವಿ.ಸಮುದ್ರ ನಿರ್ದೇಶಿಸುತ್ತಿದ್ದು, ಕನ್ನಡದ ಜತೆಗೆ ಇದು ತೆಲುಗಿನಲ್ಲೂ ಬರುತ್ತಿದೆ. ‘ಆ ದಿನಗಳು’ ಖ್ಯಾತಿಯ ನಟ ಚೇತನ್‌, ಚಿರಂಜೀವಿ ಸರ್ಜಾ, ಪಾವನಗೌಡ ಹಾಗೂ ವರಲಕ್ಷ್ಮೇ ಶರತ್‌ ಕುಮಾರ್‌ ಸೇರಿದಂತೆ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ. ಚಿತ್ರ ಶುರುವಾಗಿಯೇ ವರ್ಷ ಕಳೆದಿದೆ. ಕನ್ನಡದ ಜತೆಗೆ ತೆಲುಗಿನಲ್ಲೂ ನಿರ್ಮಾಣವಾಗುತ್ತಿರುವುದರಿಂದ ಚಿತ್ರೀಕರಣ ತಡವಾಗಿದೆ. ಸದ್ಯಕ್ಕೀಗ ಕ್ಲೈಮ್ಯಾಕ್ಸ್‌ ಹಂತದ ಚಿತ್ರೀಕರಣದ ವೇಳೆ ಈ ಅವಘಡ ಸಂಭವಿಸಿದೆ.

ಇದು ಮೊದಲಲ್ಲ :  ಚಿತ್ರೀಕರಣದ ವೇಳೆಯ ಹಲವು ಸಾವು-ನೋವಿನ ಅವಘಡಗಳಿಗೆ ಕನ್ನಡ ಚಿತ್ರರಂಗ ಸಾಕ್ಷಿ ಆಗಿದೆ. ಇತ್ತೀಚಿನವರೆಗಿನ ಮಾಸ್ತಿ ಗುಡಿ ಚಿತ್ರದಲ್ಲಿನ ಚಿತ್ರೀಕರಣದ ವೇಳೆ ಸಂಭವಿಸಿದ ಇಬ್ಬರು ನಟರ ಸಾವಿನ ಘಟನೆಯ ತನಕ. ಹಾಗೆ ನೋಡಿದರೆ ಮೊಟ್ಟಮೊದಲ ಬಾರಿಗೆ ಚಿತ್ರರಂಗ ಆ ರೀತಿಯ ಸಣ್ಣದೊಂದು ಅವಘಡ ಕಂಡಿದ್ದು 1965ರಲ್ಲಿ. ವರನಟ ಡಾ.ರಾಜ್‌ ಕುಮಾರ್‌ ಅಭಿನಯದ ಕಠಾರಿ ವೀರ ಚಿತ್ರದ ಚಿತ್ರೀಕರಣದ ವೇಳೆ, ರಾಜ್‌ ಅವರ ಕಣ್ಣಿಗೆ ಸಣ್ಣದೊಂದು ಗಾಯವಾಗಿದ್ದು ದೊಡ್ಡ ಸುದ್ದಿ ಆಗಿತ್ತು. ಹಾಗೆಯೇ ಅದು ಚಿತ್ರರಂಗದಲ್ಲಿ ಸಾಕಷ್ಟುಆತಂಕಕ್ಕೂ ಕಾರಣವಾಗಿತ್ತು. 1983ರಲ್ಲಿ ‘ಹಾವಾದ ಹೂವು’ ಚಿತ್ರೀಕರಣದ ವೇಳೆ ಸಾಹಸ ಸನ್ನಿವೇಶದ ವೇಳೆ ಆ ಚಿತ್ರದ ನಿರ್ದೇಶಕ ರುದ್ರೇಶ್‌ ಗಾಯ ಗೊಂಡಿದ್ದರು.

‘ಮಿಂಚಿನ ಓಟ’ ಚಿತ್ರೀಕರಣದ ವೇಳೆ ಸೆಂಟ್ರಲ್‌ ಜೈಲ್‌ ಗೋಡೆಯಿಂದ ಕಳಗೆ ಹಾರುವ ಸನ್ನಿವೇಶದ ವೇಳೆ ಹಿರಿಯ ನಟ ಲೋಕನಾಥ್‌ ಕಾಲಿಗೆ ಪೆಟ್ಟಾಗಿತ್ತು. ಆದರೆ ಚಿತ್ರೀಕರಣದ ವೇಳೆಯ ಅವಘಡ ದೊಡ್ಡ ಮಟ್ಟದ ಗಾಯದ ಇತಿಹಾಸ ಬರೆದಿದ್ದು ‘ಲಾಕಪ್‌ ಡೆತ್‌’ ಚಿತ್ರದ ಚಿತ್ರೀಕರಣ. ಬೆಂಗಳೂರಿನ ಎಂ.ಜಿ ರಸ್ತೆಯಲ್ಲಿ ಥ್ರಿಲ್ಲರ್‌ ಮಂಜು ಸಾಹಸ ನಿರ್ದೇಶನದಲ್ಲಿ ಸಾಹಸ ಸನ್ನಿವೇಶಗಳನನ್ನು ಸೆರೆ ಹಿಡಿಯುತ್ತಿದ್ದಾಗ ದೊಡ್ಡ ಅಘಾತವೇ ಆಗಿತ್ತು. ಕ್ಯಾಮೆರಾ ಸಹಾಯಕ ತೀವ್ರವಾಗಿ ಗಾಯಗೊಂಡಿದ್ದ. ನಟ ಶಿವರಾಜ್‌ ಕುಮಾರ್‌ ಕೂದಲೆಳೆಯಲ್ಲಿ ಅಪಾಯದಿಂದ ಪಾರಾಗಿದ್ದರು. ‘ಹಾಯ್‌ ಬೆಂಗಳೂರು’ ಚಿತ್ರದ ಚಿತ್ರೀಕರಣದ ವೇಳೆ ಬೈಕ್‌ ಸ್ಟಂಟ್‌ ಮಾಡುವಾಗ ಸಾಹಸ ನಿರ್ದೇಶಕ ಸತೀಶ್‌ ಬಾಬು ಹಾಗೂ ಚಂದ್ರಶೇಖರ್‌ ಎಂಬುವವರು ತೀವ್ರವಾಗಿ ಗಾಯಗೊಂಡಿದ್ದರು. 1997ರಲ್ಲಿ ‘ಕಾಳಿ’ ಚಿತ್ರದ ಚಿತ್ರೀಕರಣದ ವೇಳೆ ಜಾಕಿ ಶಿವು ಎಂಬುವವರು ಆಯ ತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ‘ಟಿಕೆಟ್‌ ಟಿಕೆಟ್‌’ ಚಿತ್ರಕ್ಕೆ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಚಿತ್ರೀಕರಣ ನೆಡೆಯುತ್ತಿದ್ದಾಗ ಬಾಂಬ್‌ ಸ್ಫೋಟಗೊಂಡು ಓರ್ವ ಸಹ ಕಲಾವಿದ ಮೃತಪಟ್ಟಿದ್ದ.

ನಟಿ ಮಾಲಾಶ್ರೀ ಅಭಿನಯದ ‘ಕಿರಣ್‌ ಬೇಡಿ’ ಚಿತ್ರದ ಚಿತ್ರೀಕರಣದ ವೇಳೆ ನಟ ಸರಿಗಮ ವಿಜಿ ಗಾಯಗೊಂಡಿದ್ದರು. ಆದಾದ ನಂತರ ಕನ್ನಡ ಚಿತ್ರರಂಗಕ್ಕೆ ದೊಡ್ಡ ಅಘಾತ ನೀಡಿದ್ದು ‘ಮಾಸ್ತಿ ಗುಡಿ’ ದುರಂತ. ಕ್ಲೈಮ್ಯಾಕ್ಸ್‌ ಚಿತ್ರೀಕರಣ ಇಬ್ಬರು ಖಳನಟರನ್ನು ಬಲಿ ತೆಗೆದುಕೊಂಡಿತು. ಅದು ದೊಡ್ಡ ಸುದ್ದಿಯೂ ಆಯಿತು. ಚಿತ್ರೀಕರಣದ ವೇಳೆ ಸಿನಿಮಾ ಮಂದಿ ಹೆಚ್ಚಿನ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಮಾಡಿತು. ಆದರೂ ಈಗ ‘ರಣಂ’ ಚಿತ್ರದ ಚಿತ್ರೀಕರಣದ ದುರಂತ ಮತ್ತೆ ಎಚ್ಚರಿಕೆಯ ಗಂಟೆ ಮೊಳಗಿಸಿದೆ.

click me!