ಕಾರು ಮಾರಿ ರೈತರಿಗೆ ಹಣ ನೀಡುವೆ : ನಟ ಸುದೀಪ್

By Suvarna Web DeskFirst Published Dec 14, 2017, 10:40 AM IST
Highlights

ತಮ್ಮ ಬಳಿ ಇರುವ ಕಾರುಗಳ ಪೈಕಿ ಒಂದು ಕಾರನ್ನು ಮಾರಾಟ ಮಾಡಿ ಅದರಿಂದ ಬರುವ ಹಣವನ್ನು ಸಂಕಷ್ಟದಲ್ಲಿರುವ ರೈತರಿಗೆ ನೆರವು ನೀಡುವ ಸಂಸ್ಥೆಯಾದ `ವಿ ರೆಸ್ಪೆಕ್ಟ್  ಫಾರ್ಮರ್ಸ್' ಟ್ರಸ್ಟ್’ಗೆ ನೀಡುವುದಾಗಿ ನಟ ಸುದೀಪ್ ಬುಧವಾರ ಘೋಷಿಸಿದ್ದಾರೆ.

ಬೆಂಗಳೂರು (ಡಿ.14): ತಮ್ಮ ಬಳಿ ಇರುವ ಕಾರುಗಳ ಪೈಕಿ ಒಂದು ಕಾರನ್ನು ಮಾರಾಟ ಮಾಡಿ ಅದರಿಂದ ಬರುವ ಹಣವನ್ನು ಸಂಕಷ್ಟದಲ್ಲಿರುವ ರೈತರಿಗೆ ನೆರವು ನೀಡುವ ಸಂಸ್ಥೆಯಾದ `ವಿ ರೆಸ್ಪೆಕ್ಟ್  ಫಾರ್ಮರ್ಸ್' ಟ್ರಸ್ಟ್’ಗೆ ನೀಡುವುದಾಗಿ ನಟ ಸುದೀಪ್ ಬುಧವಾರ ಘೋಷಿಸಿದ್ದಾರೆ.

ನಗರದ ಪ್ರೆಸ್ ಕ್ಲಬ್’ನಲ್ಲಿ ವಿ ರೆಸ್ಪೆಕ್ಟ್  ಫಾರ್ಮರ್ಸ್ ಟ್ರಸ್ಟ್ ಆಯೋಜಿಸಿದ್ದ `ಸಾರ್ಥಕ ನೇಗಿಲ ಯೋಗಿಗಳಿಗೆ ಗೌರವ ಸಮರ್ಪಣೆ' ಕಾರ್ಯಕ್ರಮದಲ್ಲಿ `ರೈತಸ್ನೇಹಿ ಯೋಜನೆ'ಯ ಲೋಗೋ ಬಿಡುಗಡೆಗೊಳಿಸಿ ಮಾತನಾಡಿದ ಅವರು, ನಾನು ಚಿತ್ರರಂಗದಲ್ಲಿ ಕಳೆದ ಹತ್ತು ವರ್ಷಗಳಿಂದ ದುಡಿದಿದ್ದೇನೆ. ಆದರೆ, ಕಡಿಮೆ ಸಂಪಾದನೆ ಮಾಡಿದ್ದೇನೆ.

ಈ ಅವಧಿಯಲ್ಲಿ 3-4 ಕಾರುಗಳನ್ನು ಖರೀದಿ ಮಾಡಿದ್ದೇನೆ. ಅದರಲ್ಲಿ ಒಂದನ್ನು ಮಾರಾಟ ಮಾಡಿ, ಬಂದ ಹಣವನ್ನು ರೈತರ ಅಭಿವೃದ್ಧಿಗಾಗಿ ಟ್ರಸ್ಟ್’ಗೆ ನೀಡುತ್ತೇನೆ. ಮುಂದಿನ ದಿನಗಳಲ್ಲಿ ನನ್ನ ಕೈಲಾದ ಸಹಾಯವನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು.

ಇದೇ ವೇಳೆ ತಾವು ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ ಎಂದು ಘೋಷಿಸಿದ ಅವರು, ರಾಜಕೀಯದ ಬಗ್ಗೆ ನನಗೆ ಆಸಕ್ತಿಯೂ ಇಲ್ಲ, ನನಗೆ ಮತ ಕೂಡ ಬೇಡ ಎಂದು ಸ್ಪಷ್ಟಪಡಿಸಿದರು. ರೈತರು ತಮ್ಮ ಸಂಕಷ್ಟಗಳನ್ನು ತೋಡಿಕೊಳ್ಳುತ್ತಾರೆಯೇ ಹೊರತು ಜೀವನ ನಡೆಸುವುದೇ ಕಷ್ಟವೆಂದು ಹೇಳುವುದಿಲ್ಲ. ಹೀಗಾಗಿ, ರೈತರ ಪರ ಕಾಳಜಿ ತೋರಿಸಿ ಅವರ ಹೆಸರಿನಲ್ಲಿಬೇರೆಯವರು ಐಷಾರಾಮಿ ಜೀವನ ನಡೆಸುವುದು ಸಲ್ಲದು ಎಂದು ಪರೋಕ್ಷವಾಗಿ ರೈತರ ಹೆಸರಿನಲ್ಲಿ ಅಭಿವೃದ್ಧಿಯಾಗುತ್ತಿರುವವರ ವಿರುದ್ಧ ಕುಟುಕಿದರು.

ಮಾಜಿ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಮಾತನಾಡಿದರು. ಇದೇ ಸಂದರ್ಭದಲ್ಲಿ ಕೃಷಿಯಲ್ಲಿ ಸಾಧನೆ ಮಾಡಿರುವ 15 ಜನ ರೈತರಿಗೆ 10 ಸಾವಿರ ರು. ಚೆಕ್ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ, ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಕೆ. ನಾರಾಯಣಗೌಡ, ಸಾಹಿತಿ ದೊಡ್ಡರಂಗೇಗೌಡ ಇನ್ನಿತರರು ಇದ್ದರು.

click me!