ರೇವಣ್ಣ ವಿರುದ್ಧ ದೇಶಪಾಂಡೆ ತೀವ್ರ ಅಸಮಾಧಾನ

By Web DeskFirst Published Dec 30, 2018, 8:16 AM IST
Highlights

ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ವಿರುದ್ಧ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. 

ಬೆಂಗಳೂರು :  ದಲಿತ ಮುಖಂಡ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರ ಬೆಳವಣಿಗೆಯನ್ನು ಕಾಂಗ್ರೆಸ್ಸಿಗರೇ ಸಹಿಸುತ್ತಿಲ್ಲ, ತುಳಿಯುತ್ತಿದ್ದಾರೆ ಎಂಬ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಹೇಳಿ​ಕೆ​ಗೆ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ಪಕ್ಷವನ್ನು ಟೀಕಿಸಿರುವ ರೇವಣ್ಣ ಅವರು ತಮ್ಮ ಪಕ್ಷ ಜೆಡಿಎಸ್‌ನಿಂದ ಎಷ್ಟುಜನ ದಲಿತರನ್ನು ಮಂತ್ರಿಗಳನ್ನಾಗಿ ಮಾಡಿದ್ದಾರೆ ಎಂದು ದೇಶಪಾಂಡೆ ಪ್ರಶ್ನಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಾಂಗ್ರೆಸ್‌ ಪಕ್ಷವು ದಲಿತರೂ ಸೇರಿದಂತೆ ಎಲ್ಲ ವರ್ಗಗಳಿಗೂ ಸಮಾನ ಅವಕಾಶ ನೀಡುತ್ತಾ ಬಂದಿದೆ. ಕಾಂಗ್ರೆಸ್‌ ಸಮಾನತೆಯ ತತ್ವದಲ್ಲಿ ನಂಬಿಕೆ ಇಟ್ಟಿರುವ ಪಕ್ಷ. ದಲಿತ ನಾಯಕರನ್ನು ಕಾಂಗ್ರೆಸ್‌ ತುಳಿಯುತ್ತಿದೆ ಎಂಬ ರೇವಣ್ಣ ಅವರ ಹೇಳಿಕೆ ಸತ್ಯಕ್ಕೆ ದೂರವಾದುದು. ಕಾಂಗ್ರೆಸ್‌ ಪಕ್ಷವನ್ನು ಟೀಕಿಸುವ ರೇವಣ್ಣ ಅವರು ತಮ್ಮ ಪಕ್ಷದಿಂದ ಎಷ್ಟುಜನ ದಲಿತ ಶಾಸಕರನ್ನು ಮಂತ್ರಿಗಳನ್ನಾಗಿ ಮಾಡಿದ್ದಾರೆ ಎಂಬುದನ್ನು ತಿಳಿಸಲಿ ಎಂದು ತಿರುಗೇಟು ನೀಡಿದರು.

ಪರಮೇಶ್ವರ್‌ ಅವರ ಬಳಿ ಇದ್ದ ಗೃಹ ಖಾತೆಯನ್ನು ಸಂಚಿವ ಸಂಪುಟ ವಿಸ್ತರಣೆ ಬಳಿಕ ಎಂ.ಬಿ.ಪಾಟೀಲ್‌ ಅವರಿಗೆ ಕಾಂಗ್ರೆಸ್‌ ನೀಡಿತ್ತು. ಇದಕ್ಕೆ ನಿನ್ನೆಯಷ್ಟೇ ಅಸಮಾಧಾನ ವ್ಯಕ್ತಪಡಿಸಿದ್ದ ರೇವಣ್ಣ, ದಲಿತ ನಾಯಕ ಪರಮೇಶ್ವರ್‌ ಅವರು ಗೃಹ ಖಾತೆ ಸಮರ್ಥವಾಗಿ ನಿಭಾಯಿಸುತ್ತಿದ್ದರು. ಆದರೆ, ಕಾಂಗ್ರೆಸ್‌ನಲ್ಲೇ ಅವರ ಬೆಳವಣಿಗೆ ಸಹಿಸುತ್ತಿಲ್ಲ, ಸಂಚು ಮಾಡಿ ಗೃಹ ಖಾತೆ ಕಿತ್ತುಕೊಂಡಿದ್ದು ಸರಿಯಲ್ಲ ಎಂದು ಹೇಳಿಕೆ ನೀಡಿದ್ದರು.

click me!