
ನವದೆಹಲಿ(ಡಿ.06): ಕೇಂದ್ರ ಸರ್ಕಾರದ ನೋಟು ಅಮಾನ್ಯ ಕ್ರಮದ ಬಗ್ಗೆ ನೆರೆರಾಷ್ಟ್ರಗಳು ತೀವ್ರ ಅಸಮಧಾನ ವ್ಯಕ್ತಪಡಿಸಿದೆ. ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ರಷ್ಯಾದ ರಾಯಭಾರಿ ಕಚೇರಿಯ ಸಿಬ್ಬಂದಿಗೆ ನೋಟು ಅಮಾನ್ಯ ಕ್ರಮದಿಂದ ಸಾಕಷ್ಟು ಸಮಸ್ಯೆ ಉಂಟಾಗಿದೆ ಎಂದು ಆರೋಪಿಸಿದೆ.
ನೂತನ ಬದಲಾವಣೆಯಿಂದ ನಮ್ಮ ದೇಶದ ರಾಯಭಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂದಾಜು 200 ಸಿಬ್ಬಂದಿ ಮೇಲೆ ಸಾಕಷ್ಟು ನಕಾರಾತ್ಮಕ ಪರಿಣಾಮ ಬೀರಿದೆ. ಮಾಸ್ಕೋದಲ್ಲಿರುವ ಭಾರತೀಯ ರಾಯಭಾರಿಗೂ ಇದೇ ಸಮಸ್ಯೆಯಾಗಿದ್ದು, ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡುವಲ್ಲಿ ವಿಫಲವಾಗಿದೆ. ವಿಷಯಕ್ಕೆ ಸಂಬಂಧಿಸಿದಂತೆ ಶೀಘ್ರ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಷ್ಯಾ ಆಗ್ರಹಿಸಿದೆ.
‘‘ಕನಿಷ್ಠಮಟ್ಟದ ಜೀವನ ನಡೆಸಲು ಬೇಕಾದಷ್ಟು ಹಣವನ್ನೂ ಪಡೆಯಲು ಸಾಧ್ಯವಾಗುತ್ತಿಲ್ಲ. ರೆಸ್ಟೋರೆಂಟ್'ಗಳಲ್ಲಿ ಉತ್ತಮ ಊಟ ಮಾಡಿದರೆ ಹಣ ನೀಡಲು ಸಾಧ್ಯವಾಗುತ್ತಿಲ್ಲ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಧ್ಯಪ್ರವೇಶಿಸಿ ಪರಿಹಾರ ನೀಡಬೇಕು. ರಾಯಭಾರಿ ಕಚೇರಿ ಸಿಬ್ಬಂದಿಗೆ ಹಣ ಡ್ರಾ ಮಾಡಲು ಇರುವ ನಿಬಂಧನೆಯನ್ನು ಸಡಿಲಗೊಳಿಸಬೇಕು,’’ ಎಂದು ರಷ್ಯಾ ರಾಯಭಾರಿ ಅಲೆಕ್ಸಾಂಡರ್ ಕಡಕಿನ್ ಸಚಿವಾಲಯಕ್ಕೆ ಮನವಿ ಪತ್ರ ಸಲ್ಲಿಸಿದ್ದಾರೆ.
‘‘ವಿದೇಶಾಂಗ ವ್ಯವಹಾರ ಸಚಿವಾಲಯದ ಪ್ರತಿಕ್ರಿಯೆಗಾಗಿ ನಾವು ಕಾಯುತ್ತಿದ್ದೇವೆ. ತ್ವರಿತವಾಗಿ ಸಮಸ್ಯೆ ಬಗೆಹರಿಯಬಹುದು ಎಂಬ ನಂಬಿಕೆಯಿಂದಿದ್ದೇವೆ. ಇಲ್ಲವಾದಲ್ಲಿ ಹಣ ಪಡೆಯಲು ಪರ್ಯಾಯ ವ್ಯವಸ್ಥೆಯನ್ನು ಮಾಡಬೇಕೆಂದು ಒತ್ತಾಯಿಸುತ್ತೇವೆ,’’ ಎಂದು ಹಿರಿಯ ರಾಯಭಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪಾಕಿಸ್ತಾನದಲ್ಲಿರುವ ರಾಯಭಾರ ಕಚೇರಿ ಸಿಬ್ಬಂದಿ ಡಿ. 3ರಂದು ಹಣ ಪಡೆಯಲು ಇರುವ ಮಿತಿಯನ್ನು ಖಂಡಿಸಿ ಮಾಸಿಕ ವೇತನ ಪಡೆಯದೆ ಪ್ರತಿಭಟಿಸಿದರು. ಇದರ ನಡುವೆ ಉಕ್ರೇನ್, ಖಜಕಿಸ್ತಾನ, ಇಥಿಯೋಪಿಯಾ ಮತ್ತು ಸುಡಾನ್ ದೇಶಗಳು ಸಹ ನೋಟು ಅಮಾನ್ಯ ಹಾಗೂ ಹಣ ಪಡೆಯಲು ಇರುವ ನಿಬಂಧನೆ ಖಂಡಿಸಿ ಪ್ರತಿಭಟನಾ ಪತ್ರವನ್ನು ರವಾನಿಸಿದೆ.
ಈ ಹಿನ್ನೆಲೆಯಲ್ಲಿ ವಿದೇಶಾಂಗ ಇಲಾಖೆಯು ಪರಿಹಾರ ಕ್ರಮದ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.