ಬಿಜೆಪಿ ಪರ ಬಹಿರಂಗ ಪ್ರಚಾರಕ್ಕೆ RSS: ಅಭ್ಯರ್ಥಿ ಹೆಸರಿನ ಬದಲು ಮೋದಿ ಜಪ!

By Web DeskFirst Published Feb 4, 2019, 12:55 PM IST
Highlights

ಬಿಜೆಪಿಗೆ ಬೆಂಬಲವಾಗಿ ನಿಲ್ಲಲು 40ಕ್ಕೂ ಹೆಚ್ಚು ಸಂಘಗಳು ಕಣಕ್ಕೆ | ಪ್ರತಿ ಬೂತ್‌ ಮಟ್ಟದಲ್ಲೂ ಕಾರ್ಯಕರ್ತರ ಪಡೆ ರಚನೆ

ಬೆಂಗಳೂರು[ಫೆ.04]: ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿಯೇತರ ಪಕ್ಷಗಳು ಮಹಾಗಠಬಂಧನ್ ಗೆ ಪ್ರಯತ್ನ ನಡೆಸುತ್ತಿರುವಂತೆಯೇ ಬಿಜೆಪಿ ಕೂಡ ಮರಳಿ ಅಧಿಕಾರಕ್ಕೆ ಬರಲು ಇನ್ನಿಲ್ಲದ ಕಸರತ್ತಿಗೆ ಇಳಿಯುತ್ತಿದೆ. ಬಿಜೆಪಿಗೆ ಬೆಂಬಲವಾಗಿ ಆರೆಸ್ಸೆಸ್(ರಾಷ್ಟ್ರೀಯ ಸ್ವಯಂ ಸೇವಕ ಸಂಘ) ಮತ್ತು ೪೦ಕ್ಕೂ ಅಧಿಕ ಪರಿವಾರ ಸಂಘಟನೆಗಳು ಇದೀಗ ದೇಶಾದ್ಯಂತ ಬಹಿರಂಗವಾಗಿ ಚುನಾವಣಾ ಪ್ರಚಾರಕ್ಕೆ ಧುಮುಕುತ್ತಿವೆ.

2014 ಲೋಕಸಭಾ ಚುನಾವಣೆಯಲ್ಲಿ ಸಂಘಪರಿವಾರ ಸಂಘಟನೆಗಳು ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಬಹಳಷ್ಟು ಬೆವರು ಹರಿಸಿದ್ದವು. ಕಳೆದ ಎರಡು ವರ್ಷಗಳ ಅವಧಿಯಲ್ಲಿ ನಡೆದ ಉತ್ತರ ಪ್ರದೇಶ, ಈಶಾನ್ಯ ಭಾರತ ಹಾಗೂ ಕರ್ನಾಟಕ ಅಸೆಂಬ್ಲಿ ಚುನಾವಣೆಯಲ್ಲಿ ಸಂಘ ಪರಿವಾರ ಪ್ರಚಾ ರದ ಅಖಾಡಕ್ಕೆ ಇಳಿದು ಬಿಜೆಪಿ ಕೈಗೆ ಅಧಿಕಾರ ಗಳಿಸಿಕೊಟ್ಟಿತ್ತು. ಅಸೆಂಬ್ಲಿ ಚುನಾವಣೆಯಲ್ಲಿ ಸಂಘಪರಿವಾರ ಪ್ರಚಾರಕ್ಕೆ ಧುಮುಕಿದ್ದು ಅದೇ ಪ್ರಥಮ. ಆದರೆ ರಾಜ್ಯದಲ್ಲಿ ಮಾತ್ರ ಬಿಜೆಪಿ ಅಧಿಕಾರ ಹಿಡಿಯಲು ಬಹುಮತದ ಕೊರತೆ ಅನುಭವಿಸಬೇಕಾಯಿತು. ಆದರೆ ಸಾಕಷ್ಟು ಸಂಖ್ಯೆಯಲ್ಲಿ ಬಿಜೆಪಿಗೆ ಸೀಟುಗಳನ್ನು ತೆಗೆಸಿಕೊಟ್ಟಿತ್ತು.

ಈ ಬಾರಿ ರಣತಂತ್ರ ಬದಲು: ಈ ಬಾರಿ ಲೋಕಸಭಾ ಚುನಾವಣೆಯನ್ನು ಸಂಘಪರಿವಾರ ಬಹಳ ಗಂಭೀರವಾಗಿ ಪರಿಗಣಿಸಿದೆ. ಸಂಘದ ಪ್ರಮುಖರು ಹೇಳುವ ಪ್ರಕಾರ, ದೇಶದಲ್ಲಿ ಮಹಾಗಠಬಂಧನ್ ಮೂಲಕ ಮೋದಿ ಹಾಗೂ ಬಿಜೆಪಿಯನ್ನು ಮಣಿಸಲು ವಿಪಕ್ಷಗಳು ಇನ್ನಿಲ್ಲದ ಪ್ರಯತ್ನ ನಡೆಸುತ್ತಿವೆ. ಆದರೆ ದೇಶದ ಜನತೆಗೆ ಮೋದಿ, ಬಿಜೆಪಿ ಆಡಳಿತ ಬೇಕು. ಅದಕ್ಕಾಗಿ ಈ ಬಾರಿಯೂ ಸಂಘ ಪರಿವಾರ ನೇರವಾಗಿ ಪ್ರಚಾರ ಕಣಕ್ಕೆ ಧುಮುಕುತ್ತಿದೆ ಎನ್ನುತ್ತಾರೆ. ಜೊತೆಗೆ ರಣತಂತ್ರವನ್ನೂ ಬದಲಾಯಿಸಿವೆ. ‘ದೇಶಕ್ಕೆ ಮತ್ತೆ ಪ್ರಧಾನಿ ಮೋದಿ’ ಹಾಗೂ ಮೋದಿ, ಬಿಜೆಪಿ ದೇಶಕ್ಕೆ ಯಾಕೆ ಅನಿವಾರ್ಯ ಎಂಬ ಈ ಎರಡು ವಿಚಾರವನ್ನು ಮುಂದಿಟ್ಟುಕೊಂಡು ಪ್ರಚಾರ ಕಾರ್ಯ ನಡೆಸಲಿದೆ. ಎಲ್ಲಿಯೂ ವಿಪಕ್ಷಗಳನ್ನು ಟೀಕಿಸುವುದಾಗಲಿ, ದೂರುವುದಾಗಲಿ ಮಾಡುವುದಿಲ್ಲ. ಬಹಿರಂಗ ಸಮಾವೇಶಗಳ ನ್ನೂ ಸಂಘಪರಿವಾರ ಆಯೋಜಿಸುವುದಿಲ್ಲ. ಏನಿದ್ದರೂ ಕೇಂದ್ರದ ಸಾಧನೆಯನ್ನು ಪ್ರತಿ ಯೊಂದು ಮನೆಗೆ, ಜನತೆಗೆ ಮನದಟ್ಟು ಮಾಡುವುದು ನಮ್ಮ ಕೆಲಸ ಎನ್ನುತ್ತಾರೆ ಸಂಘಪರಿವಾರ ಮುಖಂಡರು.

-ಆತ್ಮಭೂಷಣ್

click me!