ಆರ್‌ಎಸ್‌ಎಸ್‌ನಿಂದ ಅಯೋಧ್ಯೆಯಲ್ಲಿ ನಮಾಜ್‌, ಕುರಾನ್ ಪಠಣ!

By Suvarna NewsFirst Published Jul 11, 2018, 2:48 PM IST
Highlights

ಸೌಹಾರ್ದತೆಯ ಇತಿಹಾಸ ಬರೆಯಲಿದೆ ಆರ್‌ಎಸ್‌ಎಸ್‌

ಆರ್‌ಎಸ್‌ಎಸ್‌ನಿಂದ ಅಯೋಧ್ಯೆಯಲ್ಲಿ ನಮಾಜ್‌, ಕುರಾನ್ ಪಠಣ

ಸರಯೂ ನದಿ ದಂಡೆಯಲ್ಲಿ ಸಾಮೂಹಿಕ ನಮಾಜ್

1,500 ಉಲೇಮಾಗಳಿಂದ ಕುರಾನ್ ಪಠಣ

ನವದೆಹಲಿ(ಜು.11): ಅಯೋಧ್ಯೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸರಯೂ ನದಿ ದಂಡೆಯಲ್ಲಿ ಬೃಹತ್ ಸಾಮೂಹಿಕ ನಮಾಜ್ ಹಾಗು ಇಸ್ಲಾಂ ಪವಿತ್ರ ಗ್ರಂಥ ಕುರಾನ್ ಪಠಣ ಕಾರ್ಯಕ್ರಮ ನಡೆಯಲಿದೆ.

ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್‌ಎಸ್‌ಎಸ್‌) ಹಾಗೂ ಅದರ ಮುಸ್ಲಿಮ್ ವಿಭಾಗವಾದ ರಾಷ್ಟ್ರೀಯ ಮುಸ್ಲಿಂ ಮಂಚ್ ಈ ಕಾರ್ಯಕ್ರಮ ಆಯೋಜನೆ ಮಾಡಲಿದೆ. ಈ ಬೃಹತ್ ಪ್ರಾರ್ಥನೆ, ಕುರಾನ್ ಪಠಣ ಕಾರ್ಯಕ್ರಮವು ಇದೇ ಜುಲೈ 12 ರಂದು ನಡೆಯಲಿದೆ.

ಹಿಂದೂ ಭಕ್ತರ ಜೊತೆಗೆ ಸುಮಾರು 1,500 ಮುಸ್ಲಿಮ್ ಉಲೇಮಾಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸರಯೂ ನದಿ ದಂಡೆಯ ರಾಮ್ ಕಿ ಪೈದಿ ಘಾಟ್ ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಸೂಫಿ ಸಂತರ ಸಮಾಧಿಗಳಿಗೂ ಅವರು ತೆರಳಲಿದ್ದಾರೆ. ಉಲೇಮಾಗಳು ಮೊದಲಿಗೆ ನಮಾಜ್ ನೆರವೇರಿಸಿ ಬಳಿಕ ಪವಿತ್ರ ಕುರಾನ್ ಶ್ಲೋಕಗಳನ್ನು 5 ಲಕ್ಷ ಬಾರಿ ಪಠಿಸುವರು ಎನ್ನಲಾಗಿದೆ

ಈ ಕಾರ್ಯಕ್ರಮವು ಶಾಂತಿ ಮತ್ತು ಸಹೋದರತ್ವದ ಸಂದೇಶವನ್ನು ಸಾರಲಿದೆ. ಹಾಗೆಯೇ ಆರ್‌ಎಸ್‌ಎಸ್‌ ತಾನು ಮುಸ್ಲಿಂ ವಿರೋಧಿ ಎನ್ನುವ ಹಣೆಪಟ್ಟಿಯಿಂದ ಹೊರಬರಲು ಸಹಕಾರಿಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

click me!