
ಉಡುಪಿ: ಉಡುಪಿ ಜಿಲ್ಲೆ ಕಾರ್ಕಳದಲ್ಲಿ ಸದ್ದಿಲ್ಲದೆ ಜಲಕ್ರಾಂತಿ ನಡೆಯುತ್ತಿದೆ. ಸ್ವಂತ ಖರ್ಚಿನಲ್ಲಿ 182 ಕೆರೆಗಳ ಹೂಳೆತ್ತೋದಕ್ಕೆ ಜನರೇ ಮುಂದಾಗಿದ್ದಾರೆ. ಜೊತೆಗೆ 25 ಸಾವಿರಕ್ಕೂ ಅಧಿಕ ಇಂಗುಗುಂಡಿ ತೋಡಲಾಗಿದೆ. ಅಂತರ್ಜಲ ವೃದ್ಧಿಸಲು ನವನವೀನ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಈ ಜಲ ಪುನಶ್ಚೇತನ ಅಭಿಯಾನದ ಬಗ್ಗೆ ಇಲ್ಲಿದೆ ಒಂದು ಕಣ್ತೆರೆಸುವ ಸ್ಟೋರಿ.
ಉಡುಪಿ ಜಿಲ್ಲೆಯ ಕಾರ್ಕಳ ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಪ್ರದೇಶ. ಹಸಿರು ವನದಂತಿರುವ ಈ ತಾಲೂಕಿಗೂ ಇತ್ತೀಚಿನ ವರ್ಷಗಳಲ್ಲಿ ಬರಗಾಲದ ಪ್ರಭಾವ ಬೀರುತ್ತಿದೆ. ಯಾವತ್ತೂ ತುಂಬಿ ತಂಪು ನೀಡುತ್ತಿದ್ದ ಕೆರೆಗಳು ಮರುಭೂಮಿಯಂತಾಗಿದೆ. ಇದಕ್ಕೆ ಕಾರಣ ಅಂತರ್ಜಲದ ಕುಸಿತ ಮತ್ತು ಪರಿಸರ ನಾಶ.
ಇದೀಗ, ಸರ್ಕಾರದ ನೆರವಿಗೆ ಕಾಯದ ಇಲ್ಲಿನ ಜನರು ಹೊಸಹೊಸ ಪ್ರಯೋಗಗಳಿಗೆ ಮುಂದಾಗಿದ್ದಾರೆ. ತಾಲೂಕಿನಲ್ಲಿ ಸುಮಾರು 182 ಕೆರೆಗಳು ದುಸ್ಥಿತಿಯಲ್ಲಿದೆ. ತಾವೇ ಸ್ವಂತ ಖರ್ಚಿನಲ್ಲಿ ಈ ಕೆರೆಗಳ ಪುನಶ್ಚೇತನ ಮಾಡಲು ಹೊರಟಿದ್ದಾರೆ. ಈಗಾಗಲೇ ಸಿಗಡಿ ಕೆರೆಯನ್ನು ಸಂಪೂರ್ಣ ಹೂಳು ಮುಕ್ತಮಾಡಲಾಗಿದೆ. ಹತ್ತಾರು ಸಂಘಸಂಸ್ಥೆಗಳು, ಸ್ಥಳೀಯ ದಾನಿಗಳ ನೆರವಿನಿಂದ ಕೆರೆಗಳಿಗೆ ಜೀವತುಂಬಲು ಹೊರಟಿದ್ದಾರೆ. ದಿನವೊಂದಕ್ಕೆ 25 ಸಾವಿರ ರುಪಾಯಿ ಜೆಸಿಬಿ, ಟಿಪ್ಪರ್ ಬಾಡಿಗೆ ಆಗುತ್ತೆ. ದಾನಿಗಳಿಂದ, ಸಂಘ ಸಂಸ್ಥೆಗಳಿಂದ ದಾನ ರೂಪದಲ್ಲಿ ಪಡೆದು ಈ ಕಾರ್ಯ ನಡೆಸಲಾಗಿದೆ
ಜನರ ಈ ಕ್ರಾಂತಿಕಾರಿ ಹೆಜ್ಜೆಗೆ ಸ್ಥಳೀಯ ಶಾಸಕ ಸುನಿಲ್ ಕುಮಾರ್ ಬೆಂಗಾವಲಾಗಿದ್ದಾರೆ. ಕಳೆದ ಮಳೆಗಾಲದಿಂದ ಮಾರ್ಚ್ ಅಂತ್ಯದವರೆಗೆ 20 ಸಾವಿರಕ್ಕೂ ಹೆಚ್ಚು ಇಂಗು ಗುಂಡಿಗಳನ್ನು ತೋಡಲಾಗಿದೆ. ಪರಿಸರ ಉತ್ಸವ ಎಂಬ ಕಾರ್ಯಕ್ರಮ ಮಾಡಿ ಈವರೆಗೆ 35 ಸಾವಿರ ಗಿಡಗಳನ್ನು ತಾಲೂಕಿನಾದ್ಯಂತ ನೆಟ್ಟು ಪೋಷಿಸಲಾಗುತ್ತಿದೆ. ಕಾರ್ಕಳದಲ್ಲಿ ಸೆಲ್ಫೀ ವಿದ್ ಇಂಗು ಗುಂಡಿ, ಸೆಲ್ಫೀ ವಿದ್ ಸಸಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಬದಲಾವಣೆ ತರಲು ಜನರೇ ನಿರ್ಧರಿಸಿದ್ರೆ, ಏನು ಬೇಕಾದ್ರೂ ಮಾಡ್ಬಹುದು ಎಂಬುದಕ್ಕೆ ಕಾರ್ಕಳದ ಜನರೇ ಮಾದರಿ.
ವರದಿ: ಉಡುಪಿಯಿಂದ ಶಶಿಧರ್ ಮಾಸ್ತಿಬೈಲ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.