
ನವದೆಹಲಿ(ಸೆ.16): ಮ್ಯಾನ್ಮಾರ್'ನಲ್ಲಿ ತಮ್ಮ ವಿರುದ್ಧ ಸೇನೆ ಆರಂಭಿಸಿರುವ ಕಾರ್ಯಾಚರಣೆಗೆ ಹೆದರಿ ದೇಶ ತೊರೆಯುತ್ತಿರುವ ರೋಹಿಂಗ್ಯಾ ಮುಸ್ಲಿಮರ ಕುರಿತು ಚರ್ಚೆ ನಡೆಯುತ್ತಿರುವಾಗಲೇ, ತನ್ನ ನೆಲದಲ್ಲಿ ಬೀಡುಬಿಟ್ಟಿರುವ ರೋಹಿಂಗ್ಯಾ ಮುಸ್ಲಿಮರನ್ನು ಮ್ಯಾನ್ಮಾರ್ ಗೆ ಗಡೀಪಾರು ಮಾಡಲು ಭಾರತ ಮುಂದಾಗಿದೆ. ಈ ಸಂಬಂಧ ಸುಪ್ರೀಂಕೋರ್ಟ್‌ಗೆ ಸೋಮವಾರ ಪ್ರಮಾಣ ಪತ್ರ ಸಲ್ಲಿಸಲು ಉದ್ದೇಶಿಸಿದೆ. ಈ ಕುರಿತು ಗೃಹ ಸಚಿವ ರಾಜನಾಥ ಸಿಂಗ್ ಅವರೇ ಮಾಹಿತಿ ನೀಡಿದ್ದಾರೆ.
ದೇಶದಲ್ಲಿ 14 ಸಾವಿರ ರೋಹಿಂಗ್ಯಾ ಮುಸ್ಲಿಮರು ಇದ್ದಾರೆ ಎಂದು ಆ.9ರಂದು ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿತ್ತು. ಆದರೆ ಕೆಲವು ಮಾಹಿತಿಗಳ ಪ್ರಕಾರ, ಭಾರತದಲ್ಲಿ ನೆಲೆಸಿರುವ ರೋಹಿಂಗ್ಯಾ ಮುಸ್ಲಿಮರ ಸಂಖ್ಯೆ 40 ಸಾವಿರದಷ್ಟಿದೆ. ಇವರೆಲ್ಲಾ ಜಮ್ಮು, ಹೈದರಾಬಾದ್, ಹರ್ಯಾಣ, ಉತ್ತರಪ್ರದೇಶ, ದೆಹಲಿ- ರಾಷ್ಟ್ರ ರಾಜಧಾನಿ ವಲಯ ಹಾಗೂ ರಾಜಸ್ಥಾನದಲ್ಲಿ ನೆಲೆ ನಿಂತಿದ್ದಾರೆ. ಇವರಿಂದ ದೇಶದ ಭದ್ರತೆಗೆ ಅಪಾಯ ಎಂಬುದು ಸರ್ಕಾರದ ಭಾವನೆ ಎನ್ನಲಾಗಿದೆ.
ಆಶ್ರಯ ಕೊಡಿ- ಒವೈಸಿ:
ರೋಹಿಂಗ್ಯಾ ಮುಸ್ಲಿಮರನ್ನು ಮ್ಯಾನ್ಮಾರ್‌ಗೆ ಗಡೀಪಾರು ಮಾಡುವ ಕೇಂದ್ರ ಸರ್ಕಾರ ನಿಲುವಿಗೆ ಎಂಐಎಂ ಪಕ್ಷದ ಸಂಸದ ಅಸಾದುದ್ದೀನ್ ಒವೈಸಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. 65 ಸಾವಿರ ತಮಿಳರಿಗೆ, ಒಂದು ಲಕ್ಷ ಟಿಬೆಟ್ ನಿರಾಶ್ರಿತರಿಗೆ, ಬಾಂಗ್ಲಾ ವಿವಾದಿತ ಲೇಖಕಿ ತಸ್ಲೀಮಾ ನಸ್ರೀನ್‌ಗೆ ದೇಶದಲ್ಲಿ ಆಶ್ರಯ ಕೊಡಲಾಗಿದೆ. ಹೀಗಾಗಿ ರೋಹಿಂಗ್ಯಾ ಮುಸ್ಲಿಮರನ್ನು ತಮ್ಮ ‘ಸೋದರರು ಅಥವಾ ಸ್ನೇಹಿತರು’ ಎಂದು ಪ್ರಧಾನಿ ನರೇಂದ್ರ ಮೋದಿ ಸ್ವೀಕರಿಸಬಾರದೇಕೆ ಎಂದು ಪ್ರಶ್ನಿಸಿದ್ದಾರೆ.
ವಾಪಸ್ ಕರೆಸಿಕೊಳ್ಳಲು ಭಾರತ ಒತ್ತಡ:
ಮ್ಯಾನ್ಮಾರ್'ನ ರಾಖೈನ್ ರಾಜ್ಯದಲ್ಲಿನ ರೋಹಿಂಗ್ಯಾ ಮುಸ್ಲಿಮರ ಪೈಕಿ ಶೇ.40ರಷ್ಟು ಮಂದಿ ಬಾಂಗ್ಲಾದೇಶಕ್ಕೆ ವಲಸೆ ಹೋಗಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ರೋಹಿಂಗ್ಯಾಗಳನ್ನು ವಾಪಸ್ ಕರೆಸಿಕೊಳ್ಳುವಂತೆ ಮ್ಯಾನ್ಮಾರ್‌ನ ಮೇಲೆ ಒತ್ತಡ ಹೇರುತ್ತಿರುವುದಾಗಿ ಈವರೆಗೆ 4 ಲಕ್ಷದಷ್ಟು ರೋಹಿಂಗ್ಯಾ ಮುಸ್ಲಿಮರಿಗೆ ಆಶ್ರಯ ನೀಡಿರುವ ಬಾಂಗ್ಲಾದೇಶಕ್ಕೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.