ಮೇಜರ್ ಅಕ್ಷಯ್ ಗಿರೀಶ್ ರಸ್ತೆ ಲೋಕಾರ್ಪಣೆ

By Web DeskFirst Published Dec 17, 2018, 8:59 AM IST
Highlights

ಯಲಹಂಕ ಉಪ ನಗರದ 13 ನೇ ಮುಖ್ಯರಸ್ತೆಯಿಂದ ಮೇಜರ್ ಉನ್ನಿಕೃಷ್ಣನ್ ರಸ್ತೆವರೆಗಿನ 16 ನೇ ಅಡ್ಡರಸ್ತೆಯು ಮೇಜರ್  ಅಕ್ಷಯ್ ಗಿರೀಶ್ ಕುಮಾರ್ ರಸ್ತೆ ಎಂದು ನಾಮಕರಣಗೊಂಡಿದೆ.

ಬೆಂಗಳೂರು :  ಬೆಂಗಳೂರಿಗರ ಬಹು ದಿನಗಳ ಬೇಡಿಕೆ ಈಡೇರಿದ್ದು, ಯಲಹಂಕ ಉಪ ನಗರದ 13 ನೇ ಮುಖ್ಯರಸ್ತೆಯಿಂದ ಮೇಜರ್ ಉನ್ನಿಕೃಷ್ಣನ್ ರಸ್ತೆವರೆಗಿನ (ಎ ಸೆಕ್ಟರ್ 13 ನೇ ‘ಎ’ ಮುಖ್ಯರಸ್ತೆ, 3 ನೇ ‘ಎ’ ಅಡ್ಡರಸ್ತೆ) 16 ನೇ ಅಡ್ಡರಸ್ತೆಯು ಮೇಜರ್  ಅಕ್ಷಯ್ ಗಿರೀಶ್ ಕುಮಾರ್ ರಸ್ತೆ ಎಂದು ನಾಮಕರಣಗೊಂಡಿದೆ.

ಭಾನುವಾರ ನಡೆದ ಹೃದಯಸ್ಪರ್ಶಿ ಸಮಾರಂಭ ದಲ್ಲಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರು ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ರಸ್ತೆಯನ್ನು ಲೋಕಾರ್ಪಣೆ ಮಾಡಿದರು. ತನ್ಮೂಲಕ 2016 ರಲ್ಲಿ ಕಾಶ್ಮೀರದಲ್ಲಿ ಉಗ್ರರೊಂದಿಗಿನ ಹೋರಾಟದಲ್ಲಿ ವೀರ ಮರಣವನ್ನಪ್ಪಿದ್ದ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಅವರ ಗೌರವಾರ್ಥ ಯಲಹಂಕದ ಈ ಪ್ರಮುಖ ರಸ್ತೆಗೆ ಅವರ ಹೆಸರಿಡ ಬೇಕು ಎಂಬ ಬೆಂಗಳೂರಿಗರ ಬೇಡಿಕೆ ಈಡೇರಿತು. 

ಬಳಿಕ ಮಾತನಾಡಿದ ಮೇಯರ್ ಗಂಗಾಬಿಕೆ, ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಆ ಮೂಲಕ ದೇಶದ ಜನತೆಗೆ ಪ್ರೇರಣೆಯಾಗಿದ್ದಾರೆ. ಅವರ ಹೆಸರು ಮುಂದಿನ ಪೀಳಿಗೆಗೆ ಉಳಿಯುವಂತಾಗಬೇಕು. ಅಲ್ಲದೆ, ಯುವ ಜನಾಂಗಕ್ಕೆ ದೇಶ ಸೇವೆ ಮಾಡಲು ಪ್ರೇರಣೆ ಸಿಗಬೇಕು. ಅಲ್ಲದೆ, ಅಕ್ಷಯ್ ಗಿರೀಶ್ ಕುಮಾರ್ ಹೆಸರು ಅಜರಾಮರವಾಗಿರಬೇಕು ಎಂಬ ಕಾರಣದಿಂದಾಗಿ 80 ಅಡಿ ರಸ್ತೆಗೆ ಅವರ ಹೆಸರನ್ನಿಡಲಾಗಿದೆ ಎಂದರು.

ಸಂಸದ ಆರ್‌ಸಿ ಪ್ರಯತ್ನಕ್ಕೆ ಯಶ: ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, ಯಲಹಂಕ ಉಪನಗರದ  80 ಅಡಿ ರಸ್ತೆಗೆ ಮೇಜರ್ ಗಿರೀಶ್ ಅಕ್ಷಯ್ ಕುಮಾರ್ ಅವರ ಹೆಸರಿಡಲು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರ ಪ್ರಯತ್ನ ಸಾಕಷ್ಟಿದೆ. ಈ ಭಾಗದ ಶಾಸಕರಾದ ತನಗೆ ಹಲವು ಸಲ ಕರೆ ಮಾಡಿ ಮನವಿ ಮಾಡಿದ್ದರು. ಅಲ್ಲದೆ, ಮೇಯರ್ ಅವರಿಗೂ ಪತ್ರ ಬರೆಯುವ ಮೂಲಕ ಮೂಲಕ ಮನವಿ ಮಾಡಿದ್ದರು. ಅದರ ಪರಿಣಾಮ ರಸ್ತೆಗೆ ಅಕ್ಷಯ್ ಗಿರೀಶ್ ಕುಮಾರ್ ಹೆಸರಿಡಲು ಸಾಧ್ಯವಾಯಿತು ಎಂದರು.

ಸಂಸದರ ಪತ್ರಕ್ಕೆ ಸ್ಪಂದಿಸಿದ ಪಾಲಿಕೆ: ಕಾಶ್ಮೀರದಲ್ಲಿ ಉಗ್ರರೊಂದಿಗಿನ ಹೋರಾಟದಲ್ಲಿ ವೀರ ಮರಣವನ್ನಪ್ಪಿದ್ದ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಅವರು ಹೆಸರಿಡುವ ಸಂಬಂಧ ಬಿಬಿಎಂಪಿ 2018 ರ ಫೆಬ್ರವರಿಯಲ್ಲಿ ನಿರ್ಣಯ ಕೈಗೊಂಡಿತ್ತು.  ಆದರೆ ಹತ್ತು ತಿಂಗಳು ಕಳೆದರೂ ನಾಮಕರಣ ಮಾಡಿರಲಿಲ್ಲ. ಈ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು ಮೇಯರ್ ಅವರಿಗೆ ಪತ್ರ ಬರೆದು ಆದಷ್ಟು ಬೇಗ ನಾಮಕರಣಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. 

ಸರ್ಕಾರ, ಬಿಬಿಎಂಪಿಗೆ ಅಭಿನಂದನೆ

ವಿಜಯ ದಿವಸ ಸಂದರ್ಭದಲ್ಲೇ ಯಲಹಂಕದ ಪ್ರಮುಖ ರಸ್ತೆಗೆ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಹೆಸರು ನಾಮಕರಣ ಮಾಡಿದ ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರಕ್ಕೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅಭಿನಂದನೆ ಸಲ್ಲಿಸಿದ್ದಾರೆ. ಸಿಎಂ ಎಚ್.ಡಿ. ಕುಮರಸ್ವಾಮಿ, ಮೇಯರ್ ಗಂಗಾಬಿಕೆ ಮಲ್ಲಿಕಾರ್ಜುನ್ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರಿಗೆ ರಾಜೀವ್ ಚಂದ್ರಶೇಖರ್ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೆ, ರಸ್ತೆಗೆ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಅವರ ಹೆಸರನ್ನಿಡಲು ಸಹಕರಿಸಿದ ಯಲಹಂಕದ ಜನ ಪ್ರತಿನಿಧಿಗಳಿಗೂ ಧನ್ಯವಾದ ಅರ್ಪಿಸಿದ್ದಾರೆ.

click me!