ಪ್ರತಿ ಮತದಾರರಿಗೂ ಹಣ ಹಂಚಿದ ಆರೋಪ ಸಾಬೀತು: ಜಯಾ ಕ್ಷೇತ್ರದ ಚುನಾವಣೆ ರದ್ದು

Published : Apr 09, 2017, 12:12 PM ISTUpdated : Apr 11, 2018, 12:51 PM IST
ಪ್ರತಿ ಮತದಾರರಿಗೂ ಹಣ ಹಂಚಿದ ಆರೋಪ ಸಾಬೀತು: ಜಯಾ ಕ್ಷೇತ್ರದ ಚುನಾವಣೆ ರದ್ದು

ಸಾರಾಂಶ

ತಮಿಳುನಾಡಿನ ಆರೋಗ್ಯ ಸಚಿವ ಸಿ. ವಿಜಯಭಾಸ್ಕರ್ ನಿವಾಸದ ಮೇಲೆ ತೆರಿಗೆ ಅಕಾರಿಗಳು ಶುಕ್ರವಾರ ದಾಳಿ ನಡೆಸಿದ್ದರು. ಈ ವೇಳೆ, ಹಲವಾರು ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ತಮಿಳುನಾಡಿನ ಮತದಾರರಿಗೆ 90 ಕೋಟಿ ರು. ಹಣ ಹಂಚಲು ನಡೆಸಿದ್ದ ಯೋಜನೆ ಆ ದಾಖಲೆಗಳಲ್ಲಿ ಬಹಿರಂಗವಾಗಿತ್ತು. ಅಲ್ಲದೆ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿ ಸ್ವಾಮಿ ಸೇರಿದಂತೆ ಅವರ ಸಂಪುಟದ ಏಳು ಮಂತ್ರಿಗಳು ಈ ಹೊಣೆಗಾರಿಕೆ ಹೊತ್ತುಕೊಂಡಿರುವ ಸ್ಫೋಟಕ ಮಾಹಿತಿ ಲಭಿಸಿತ್ತು.

ಚೆನ್ನೈ/ನವದೆಹಲಿ(ಏ.09): ಹಣದ ಹೊಳೆ ಹರಿಯುತ್ತಿರುವ  ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ನಿಧನದಿಂದ ತೆರವಾಗಿರುವ ಚೆನ್ನೈನ ಆರ್.ಕೆ. ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯನ್ನು ಚುನಾವಣೆ ಆಯೋಗ ರದ್ದುಗೊಳಿಸಿದೆ ಎಂದು ಎನ್'ಡಿ ಟೀವಿ ವರದಿ ಮಾಡಿದೆ.ಚುನಾವಣೆ ಬುಧವಾರ(ಏ.12ರಂ) ನಡೆಯಬೇಕಿತ್ತು.

ಪ್ರತಿ ಮತದಾರರಿಗೆ ಅಣ್ಣಾಡಿಎಂಕೆಯ ಆಡಳಿತಾರೂಢ (ಶಶಿಕಲಾ) ಬಣ 4 ಸಾವಿರ ರು. ಹಂಚಿದೆ ಎಂಬ ಮಾಹಿತಿ ಆದಾಯ ತೆರಿಗೆ ದಾಳಿ ವೇಳೆಯಲ್ಲಿ  ಪತ್ತೆಯಾದ ಕಾರಣ ಚುನಾವಣಾ ಆಯೋಗ ಈ ಕ್ರಮ ಕೈಗೊಂಡಿದೆ. ಮಾಜಿ ಮುಖ್ಯಮಂತ್ರಿ ಜಯಲಲಿತಾ ಈ ಕ್ಷೇತ್ರದಲ್ಲಿ 2 ಬಾರಿ ಆಯ್ಕೆಯಾಗಿದ್ದರು.

ತಮಿಳುನಾಡಿನ ಆರೋಗ್ಯ ಸಚಿವ ಸಿ. ವಿಜಯಭಾಸ್ಕರ್ ನಿವಾಸದ ಮೇಲೆ ತೆರಿಗೆ ಅಕಾರಿಗಳು ಶುಕ್ರವಾರ ದಾಳಿ ನಡೆಸಿದ್ದರು. ಈ ವೇಳೆ, ಹಲವಾರು ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ತಮಿಳುನಾಡಿನ ಮತದಾರರಿಗೆ 90 ಕೋಟಿ ರು. ಹಣ ಹಂಚಲು ನಡೆಸಿದ್ದ ಯೋಜನೆ ಆ ದಾಖಲೆಗಳಲ್ಲಿ ಬಹಿರಂಗವಾಗಿತ್ತು. ಅಲ್ಲದೆ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿ ಸ್ವಾಮಿ ಸೇರಿದಂತೆ ಅವರ ಸಂಪುಟದ ಏಳು ಮಂತ್ರಿಗಳು ಈ ಹೊಣೆಗಾರಿಕೆ ಹೊತ್ತುಕೊಂಡಿರುವ ಸ್ಫೋಟಕ ಮಾಹಿತಿ ಲಭಿಸಿತ್ತು.

ಆರ್.ಕೆ. ನಗರ ಕ್ಷೇತ್ರ ವ್ಯಾಪ್ತಿಯ 2.63 ಲಕ್ಷ ಮತದಾರರ ಪೈಕಿ 2.24 ಲಕ್ಷ ಮತದಾರರ (ಶೇ.85)ನ್ನು ಗುರುತಿಸಿದ್ದ ಆಡಳಿತಾರೂಢ (ಶಶಿಕಲಾ) ಬಣ, ಎಲ್ಲರಿಗೂ 4 ಸಾವಿರ ರು. ಹಂಚುವ ಗುರಿ ಹಾಕಿಕೊಂಡಿತ್ತು ಎಂದು ದಾಖಲೆಗಳು ಹೇಳುತ್ತವೆ ಎಂದು ಆಂಗ್ಲದೈನಿಕವೊಂದು ವರದಿ ಮಾಡಿದೆ.

ರಹಸ್ಯ ಕಾರ್ಯಾಚರಣೆಯಲ್ಲೂ ಸಾಬೀತು:

ಈ ನಡುವೆ ಖಾಸಗಿ ಸುದ್ದಿವಾಹಿನಿಯೊಂದು ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಹಲವಾರು ಮತದಾರರು ತಮಗೆ ‘ಟೋಪಿ ಚಿಹ್ನೆಯವರು’ (ಶಶಿಕಲಾ ಬಣ) 4 ಸಾವಿರ ರು. ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಇನ್ನೂ ಕೆಲವರು ತಮಗೆ ಹಣ ಸಿಕ್ಕಿಲ್ಲ, ಹೀಗಾಗಿ ಹಣ ಬರುತ್ತಾ ಎಂದು ಕೆಲಸಕ್ಕೆ ರಜೆ ಹಾಕಿಕೊಂಡು ಮನೆಯಲ್ಲಿ ರಾಜಕಾರಣಿಗಳಿಗಾಗಿ ಕಾಯುತ್ತಿರುವುದಾಗಿ’ ತಿಳಿಸಿದ್ದಾರೆ.

ಸಮನ್ಸ್:

ಏತನ್ಮಧ್ಯೆ, ದಾಳಿಗೆ ಒಳಗಾದ ಸಚಿವ ವಿಜಯ ಭಾಸ್ಕರ್, ನಟ-ರಾಜಕಾರಣಿ ಶರತ್ ಕುಮಾರ್ ಹಾಗೂ ಡಾ ಎಂಜಿಆರ್ ವಿಶ್ವವಿದ್ಯಾಲಯದ ಉಪಕುಲಪತಿ ಗೀತಾಲಕ್ಷ್ಮಿ ಅವರಿಗೆ ತೆರಿಗೆ ಇಲಾಖೆ ಸಮನ್ಸ್ ಜಾರಿ ಮಾಡಿದೆ. ಸೋಮವಾರ ವಿಚಾರಣೆಗೆ ಹಾಜರಾಗುವುದಾಗಿ ವಿಜಯ ಭಾಸ್ಕರ್ ತಿಳಿಸಿದ್ದಾರೆ.

ಘರ್ಷಣೆಯಲ್ಲಿ ಓರ್ವಗೆ ಗಾಯ: ಮತ್ತೊಂದೆಡೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಶಶಿಕಲಾ ಹಾಗೂ ಪನ್ನೀರ್‌ಸೆಲ್ವಂ ಬಣಗಳ ನಡುವೆ ಘರ್ಷಣೆ ಸಂಭವಿಸಿದ್ದು, ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ. ಶಶಿಕಲಾ ಬಣದ ಅಭ್ಯರ್ಥಿಯಾಗಿ ಅವರ ಬಂಧು, ಮಾಜಿ ಸಂಸದ ಟಿಟಿವಿ ದಿನಕರನ್ ಅವರು ಸ್ಪರ್ಧೆ ಮಾಡಿದ್ದಾರೆ. ಅವರನ್ನು ಮಣಿಸಲು ಪನ್ನೀರ್‌ಸೆಲ್ವಂ ಬಣ ಶತಪ್ರಯತ್ನ ನಡೆಸುತ್ತಿದೆ. ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಶಶಿಕಲಾ ಬಣ, ಹಣದ ಹೊಳೆಯನ್ನೇ ಹರಿಸುತ್ತಿದೆ ಎಂದು ಹೇಳಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನನ್ನನ್ನು ಯಾರೂ ಅಲುಗಾಡಿಸಲು ಆಗೋದಿಲ್ಲ : ಸಿಎಂ ಖಡಕ್‌ ನುಡಿ
ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!