
1)ಲಕ್ಷ್ಮಣ್ ಪ್ರಾಥಮಿಕ ಶಿಕ್ಷಣ ಪಡೆದದ್ದು ಕನ್ನಡ ಮಾಧ್ಯಮದಲ್ಲಿ. ಬಾಲ್ಯದಲ್ಲಿ ಗೋಡೆ, ನೆಲ ಹೀಗೆ ಎಲ್ಲೆಂದರಲ್ಲಿ ಚಿತ್ರ ಬಿಡಿಸುತ್ತಿದ್ದರು. ಪುಣ್ಯಕೋಟಿ ಪದ್ಯ ಅವರ ಮೇಲೆ ಗಾಢ ಪರಿಣಾಮ ಬೀರಿತ್ತು. ಮನೆಗೆ ಲಂಡನ್ನಿನಿಂದ ಬರುತ್ತಿದ್ದ ಕಾಮಿಕ್ಸ್ ಪುಸ್ತಕಗಳತ್ತ ಆಕರ್ಷಿತರಾದ ಲಕ್ಷ್ಮಣ್ ಮಾತು ಕಲಿಯುವ ಮುನ್ನ ಚಿತ್ರಗಳನ್ನು ಗುರುತಿಸುವುದನ್ನು ಕಲಿತರು. ಈ ಪುಸ್ತಕಗಳನ್ನು ನೋಡುತ್ತಾ ಚಿತ್ರ ಗೀಚಲಾರಂಭಿಸಿದ ಲಕ್ಷ್ಮಣ್ ಸಂಪೂರ್ಣವಾಗಿ ಚಿತ್ರಕಲೆಯತ್ತ ಆಕರ್ಷಿತರಾದರು.
2) ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗಲೇ ನಡೆದ ಘಟನೆ ಇದು. ಮೇಷ್ಟ್ರೊಬ್ಬರು ವಿದ್ಯಾರ್ಥಿಗಳಿಗೆ ಅಶೋಕದ ಎಲೆಯ ಚಿತ್ರವನ್ನು ಬರೆಯಲು ಹೇಳಿ ಹೊರಹೋದರು. ಬಂದ ಮೇಲೆ ಎಲ್ಲ ಹುಡುಗರು ಬರೆದ ಚಿತ್ರ ನೋಡಿದಾಗ ಅದರಲ್ಲಿ ಲಕ್ಷ್ಮಣ್ ಚಿತ್ರ ಅದ್ಭುತವಾಗಿತ್ತು. ಅವರ ಕೈಹಿಡಿದ ಮೇಷ್ಟ್ರು ನೀನೇ ಬರೆದದ್ದಾ ಎಂದು ಆಶ್ಚರ್ಯದಿಂದ ಕೇಳಿ, ಬರೆಯುವುದನ್ನು ಮುಂದುವರೆಸು ಮುಂದೆ ದೊಡ್ಡ ಕಲಾವಿದನಾಗುತ್ತೀಯಾ ಎಂದು ಬೆನ್ನು ತಟ್ಟಿದರು. ಇದೇ ಅವರಿಗೆ ದೊಡ್ಡ ಸ್ಫೂರ್ತಿಯಾಯಿತು. ಇದನ್ನು ಲಕ್ಷ್ಮಣ್ ತಮ್ಮ ಆತ್ಮಕತೆ ‘ದಿ ಟನಲ್ ಆಫ್ ಟೈಮ್’ನಲ್ಲಿ ದಾಖಲಿಸಿದ್ದಾರೆ.
3) ಅಣ್ಣ ಆರ್.ಕೆ. ನಾರಾಯಣ್ ಬರೆಯುತ್ತಿದ್ದ ಸಣ್ಣ ಕತೆಗಳಿಗೆ ಚಿತ್ರಗಳನ್ನು ಬರೆದುಕೊಡುತ್ತಿದ್ದರು. ಕತೆಗೆ ಅಣ್ಣನಿಗೆ ಸಂಭಾವನೆ ಸಿಕ್ಕರೆ, ಚಿತ್ರಕ್ಕೆ ಲಕ್ಷ್ಮಣ್ ಅವರಿಗೂ ಸಂಭಾವನೆ ಸಿಗುತ್ತಿತ್ತು. ಒಂದು ಚಿತ್ರಕ್ಕೆ ಎರಡು ರುಪಾಯಿ ಎಂಟಾಣೆ!
4) ಮೆಟ್ರಿಕ್ ಪೂರೈಸಿದ ಮುಂಬೈನ ಜೆಜೆ ಸ್ಕೂಲ್ ಆಫ್ ಆರ್ಟ್ಸ್‌ನಲ್ಲಿ ವ್ಯಾಸಂಗ ಮಾಡಬೇಕೆಂದು ಪ್ರವೇಶ ಕೋರಿ ಅರ್ಜಿ ಸಲ್ಲಿಸಿದರು. ಅಲ್ಲಿ ಪ್ರವೇಶ ಪಡೆಯಬೇಕೆಂಬ ಲಕ್ಷ್ಮಣ್ ಆಸೆ ಈಡೇರಲಿಲ್ಲ. ಆ ಸಂಸ್ಥೆಯು, ಇಲ್ಲಿ ವಿದ್ಯಾರ್ಥಿಯಾಗಲು ಇರಬೇಕಾದ ಅರ್ಹತೆ ನಿಮ್ಮಲ್ಲಿ ಇಲ್ಲವೆಂದು ಪ್ರವೇಶ ನಿರಾಕರಿಸಿತು. ಲಕ್ಷ್ಮಣ್ ಕೊಂಚ ನಿರಾಶರಾದರು ಆದ್ರೆ ಹತಾಶರಾಗಲಿಲ್ಲ. ಮೈಸೂರು ಮಹಾರಾಜ ಕಾಲೇಜಿನಲ್ಲಿ ಕಲಾ ಪದವಿ ಪ್ರವೇಶ ಪಡೆದರು. ವ್ಯಾಸಂಗ ಮಾಡುತ್ತಲೇ ಲಕ್ಷ್ಮಣ್ ಪತ್ರಿಕೆಗಳಿಗೆ ವ್ಯಂಗ್ಯಚಿತ್ರ ಬರೆಯಲಾರಂಭಿಸಿದರು.
5) ಪ್ರಾರಂಭದಲ್ಲಿ ಡಾ. ಶಿವರಾಂ (ರಾಶಿ)ಆರಂಭಿಸಿದ್ದ ಕೊರವಂಜಿ ಪತ್ರಿಕೆಗೂ ಕೆಲ ಕಾಲ ವ್ಯಂಗ್ಯಚಿತ್ರಗಳನ್ನು ಬರೆದರು. ಕನ್ನಡದ ಕೊರವಂಜಿ ಹಾಸ್ಯ ಪತ್ರಿಕೆ ಯಿಂದ ಲಕ್ಷ್ಮಣ್‌ರ ವ್ಯಂಗ್ಯಚಿತ್ರಜೀವನ ಶುರುವಾಯಿತು.
6) ಲಕ್ಷ್ಮಣ್ ಅವರಿಗೆ ಕಾಲೇಜು ಎಂದರೆ ಅಷ್ಟೇನೂ ಇಷ್ಟವೇ ಇರಲಿಲ್ಲ. ಕಾರ್ಟೂನಿಸ್ಟ್ ಆಗಬೇಕೆಂಬ ಬಯಕೆ ಹೆಚ್ಚಾಗಿದ್ದರಿಂದ ಕಾಲೇಜಿನಿಂದ ಬೇಗ ಪಾಸ್ ಆಗಿ ಹೋದರೆ ಸಾಕು ಎನ್ನಿಸಿತ್ತಂತೆ.
7) ಪುಸ್ತಕ ಬರೆಯುವ ಆಸೆ ಹೊತ್ತಿದ್ದ ಲಕ್ಷ್ಮಣ್ ಅವರ ಬಯಕೆಗೆ ಮನೆಯವರೇ ಅಡ್ಡಿಯಾಗಿದ್ದರಂತೆ. ಒಂದೊಮ್ಮೆ ನಾನು ಬರವಣಿಗೇನೂ ಹವ್ಯಾಸವಾಗಿ ಮಾಡಿಕೊಂಡಿರುತ್ತಿದ್ದರೆ ನಾನು ಇನ್ನಷ್ಟು ಹೆಸರು ಪಡೆಯುತ್ತಿದೆನೋ ಏನೋ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
8) ಲಕ್ಷ್ಮಣ್ ಎಂದೂ ಕೈಗಡಿಯಾರ ಕಟ್ಟದ ವ್ಯಕ್ತಿ. ದಿನಚರಿ ಬರೆಯುವ ಅಭ್ಯಾಸವೇ ಅವರಿಗೆ ಇರಲಿಲ್ಲ. ದಿನಕ್ಕೆ ಸುಮಾರು 10 ಗಂಟೆಯ ಕಾಲ ಕೆಲಸ ಮಾಡುತ್ತಿದ್ದರು. ಬಿಡುವಿನ ವೇಳೆಯಲ್ಲಿ ಗಡಿಯಾರ ರಿಪೇರಿ, ಪೈಂಟ್, ಮನೆಯ ಎಲೆಕ್ಟ್ರಿಕ್ ವಸ್ತುಗಳ ಫಿಟ್ಟಿಂಗ್ಸ್ ಮಾಡುತ್ತಿದ್ದರು.
9) ಲಕ್ಷ್ಮಣರಿಗೆ ಕಾಗೆ ಮೇಲೆ ವಿಶೇಷ ಪ್ರೀತಿ. ಏಕೆ ಎಂದು ಕೇಳಿದವರಿಗೆ ಅವರು ಕೊಟ್ಟ ಉತ್ತರವೇನು ಗೊತ್ತಾ. ‘ಕಾಗೆ ನಮ್ಮ ದೇಶದ ಅತ್ಯಂತ ಫೈನೆಸ್ಟ್ ಬರ್ಡ್. ಅದನ್ನು ನಮ್ಮ ರಾಷ್ಟ್ರಪಕ್ಷಿ ಅಂತ ಘೋಷಿಸಬೇಕಾಗಿತ್ತು. ಬೇರೆ ಹಕ್ಕಿಗಳಂತೆ ಅದು ಸ್ವಾರ್ಥಿಯಲ್ಲ. ಪ್ರತಿ ದಿನ ಸಾಯಂಕಾಲ ಗೂಡು ಸೇರುವ ವೇಳೆಗೆ, ಮರದ ಮೇಲೆ ಕುಳಿತು ಇಡೀ ದಿನದ ವಿಷಯಗಳನ್ನು ಚರ್ಚಿಸುತ್ತವೆ. ಆಗ ಅವನ್ನು ನೋಡುತ್ತಿರಬೇಕಾದರೆ ತುಂಬಾನೇ ಖುಷಿಯಾಗುತ್ತೆ. ಅದೇನೋ ನನಗಾ ಪಕ್ಷಿ ಬಹಳ ಇಷ್ಟ’ ಎಂದು ಹೇಳಿ ನಗುತ್ತಿದ್ದರು.
10) ಲಕ್ಷ್ಮಣ್ ಸೃಷ್ಠಿಸಿದ ಕಾಮನ್ ಮ್ಯಾನ್: ಕಚ್ಚೆ, ಗೆರೆಯ ಅಂಗಿ, ಕೂದಲು ಉದುರಿದ ತಲೆ, ಕಪ್ಪು ಕನ್ನಡಕ, ಮೀಸೆ, ಚಪ್ಪಲಿ, ಸಂದರ್ಭಕ್ಕೆ ತಕ್ಕಂತೆ ಛತ್ರಿ ಇದು ಲಕ್ಷ್ಮಣ್ ಅವರ ‘ಕಾಮನ್ ಮ್ಯಾನ್’. ಈ ಕಾಮನ್ ಮ್ಯಾನ್ ಪಾತ್ರ ಹುಟ್ಟಿದ್ದೇ ಸ್ವಾರಸ್ಯ.
ಲಕ್ಷ್ಮಣ್ ತಮ್ಮ ವ್ಯಂಗ್ಯಚಿತ್ರದಲ್ಲಿ ತಮಿಳು, ಪಂಜಾಬಿ, ಬಂಗಾಳಿ ಚಿತ್ರಗಳನ್ನು ಬರೆಯುತ್ತಿದ್ದರು. ಭಾರತದ ಭಿನ್ನ ಸಂಸ್ಕೃತಿಯನ್ನು ಪ್ರತಿನಿಧಿಸುವ ವ್ಯಕ್ತಿಗಳನ್ನು ಪಾತ್ರಗಳಾಗಿ ವ್ಯಂಗ್ಯಚಿತ್ರದಲ್ಲಿ ಚಿತ್ರಿಸುತ್ತಿದ್ದರು. ಆದರೆ ಅವರಿಗೆ ಇಡೀ ಭಾರತದ ಸಾಮಾನ್ಯ ನಾಗರಿಕನನ್ನು ಪ್ರತಿನಿಧಿಸುವ ವ್ಯಕ್ತಿಯೊಬ್ಬ ಬೇಕಾಗಿತ್ತು. ಅಂಥದ್ದೊಂದು ಪಾತ್ರಕ್ಕಾಗಿ ಪರಿತಪಿಸುತ್ತಿದ್ದರು. ಕಡೆಗೂ ಒಂದು ಚೌಕ ಕೋಟು ತೊಟ್ಟ, ಧೋತಿದಾರಿ ಹಿರಿಯನೊಬ್ಬ ಲಕ್ಷ್ಮಣ್ ಕುಂಚದಲ್ಲಿ ಅರಳಿಯೇ ಬಿಟ್ಟ. ಈತನೇ ಕಾಮನ್ ಮ್ಯಾನ್.
11) ಈ ಕಾಮನ್ ಮ್ಯಾನ್‌ನನ್ನು ‘ನಾನು ಆತನನ್ನು ಹುಡುಕಲಿಲ್ಲ, ಆತನೇ ನನ್ನನ್ನು ಹುಡುಕಿಕೊಂಡು ಬಂದ’ ಎಂದು ಲಕ್ಷ್ಮಣ್
ಹೇಳಿಕೊಂಡಿದ್ದರು.
12) ಭಾರತ ಸರ್ಕಾರ ಈ ಕಾಮನ್ ಮ್ಯಾನ್ ಅಂಚೆ ಚೀಟಿ ಬಿಡುಗಡೆ ಮಾಡಿ ಗೌರವಿಸಿತು. ೨೦೦೫ರಲ್ಲಿ ಬೆಂಗಳೂರು ಮೂಲದ ವೈಮಾನಿಕ ಸಂಸ್ಥೆ ಏರ್‌ಡೆಕ್ಕನ್ ತನ್ನ ಲಾಂಛನವಾಗಿ ಈ ಕಾಮನ್ ಮ್ಯಾನ್‌ನನ್ನೇ ಸ್ವೀಕರಿಸಿತು. ಮುಂಬೈನ ವರ್ಲಿಯಲ್ಲಿ 10 ಅಡಿಯ ಕಂಚಿನ ಪ್ರತಿಮೆ ಕೂಡ ನಿರ್ಮಿಸಲಾಗಿತ್ತು.
- ಎಸ್.ಆರ್.ಎನ್. ಮೂರ್ತಿ (ಕನ್ನಡಪ್ರಭ)
(ಸಾಂದರ್ಭಿಕ ಚಿತ್ರ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.