
ನವದೆಹಲಿ: ತ್ರಿವಳಿ ತಲಾಖ್ ರದ್ದುಗೊಳಿಸಿ ಐತಿಹಾಸಿಕ ತೀರ್ಪು ನೀಡಿದ ಸುಪ್ರೀಂಕೋರ್ಟ್ ಮತ್ತೊಂದು ಚಾರಿತ್ರಿಕ ತೀರ್ಪು ನೀಡಿದೆ. ಖಾಸಗಿತನ ಹಕ್ಕ ವ್ಯಕ್ತಿಯ ಮೂಭೂತ ಹಕ್ಕು ಎಂಬ ಮಹತ್ವದ ತೀರ್ಪನ್ನು ಸುಪ್ರೀಂ ನೀಡಿದೆ.
ಖಾಸಗಿತನದ ಹಕ್ಕು ವ್ಯಕ್ತಿಯ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ.ವ್ಯಕ್ತಿಯ ಖಾಸಗಿತನದ ಹಕ್ಕು ಸಂವಿಧಾನದ ನೀಡಿರುವ ಮೂಲಭೂತ ಹಕ್ಕುಗಳ ಅವಿಭಾಜ್ಯ ಭಾಗವಾಗಿದೆ ಎಂದು 9-ಸದಸ್ಯ ಪೀಠವು ಅಭಿಪ್ರಾಯಪಟ್ಟಿದೆ. ಆ ಮೂಲಕ ಸುಪ್ರೀಂ ಕೋರ್ಟ್ ತನ್ನ ಹಿಂದಿನ 8-ಸದಸ್ಯ ಪೀಠದ ತೀರ್ಪನ್ನು ಅನೂರ್ಜಿತಗೊಳಿಸಿದಂತಾಗಿದೆ.
ನ್ಯಾಯಮೂರ್ತಿ ಜೆ.ಎಸ್. ಖೇಹರ್ ನೇತೃತ್ವದ ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಆಗಸ್ಟ್ 2ರಂದು ತೀರ್ಪನ್ನು ಕಾಯ್ದಿರಿಸಿತ್ತು. ಖಾಸಗಿತನದ ಹಕ್ಕನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಬೇಕೇ ಬೇಡವೇ ಎಂಬ ವಿಚಾರವಾಗಿ ನ್ಯಾಯಪೀಠವು ಮೂರು ವಾರಗಳಲ್ಲಿ ಆರು ದಿನಗಳ ಕಾಲ ಸುದೀರ್ಘ ವಿಚಾರಣೆ ನಡೆಸಿತ್ತು.
ಖಾಸಗಿತನ ಬಹುಮುಖಿಯಾಗಿರುವುದರಿಂದ ಅದನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್’ಗೆ ತಿಳಿಸಿತ್ತು.
ತಂತ್ರಜ್ಞಾನ ಆಧುನೀಕರಣಗೊಂಡಿರುವ ಕಾಲಘಟ್ಟದಲ್ಲಿ ‘ಖಾಸಗಿ ಹಕ್ಕು’ ಕುರಿತಾಗಿ ಕೋರ್ಟ್ ಮತ್ತೊಮ್ಮೆ ಪರಾಮರ್ಶಿಸಬೇಕೆಂದು ನಾಲ್ಕು ರಾಜ್ಯಗಳು ಮನವಿ ಮಾಡಿವೆ. ಖಾಸಗಿತನ ಮೂಲಭೂತ ಹಕ್ಕಾಗಿ ಘೋಷಿಸುವಂತೆ ಕರ್ನಾಟಕ, ಪಶ್ಚಿಮ ಬಂಗಾಳ, ಪಂಜಾಬ್ ಹಾಗೂ ಪುದುಚೇರಿ ರಾಜ್ಯಗಳ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿತ್ತು.
ಅಲ್ಲದೆ ಆಧಾರ್ ಗುರುತು ಚೀಟಿ ಮೂಲಕ ವ್ಯಕ್ತಿಯ ಬಯೋಮೆಟ್ರಿಕ್ ಮಾಹಿತಿ ಸೇರಿದಂತೆ ಖಾಸಗಿ ಮಾಹಿತಿಯನ್ನು ಸಂಗ್ರಹಿಸುವುದು ಹಾಗೂ ಹಂಚುವುದು ಖಾಸಗಿತನದ ’ಮೂಲಭೂತ’ ಹಕ್ಕು ಉಲ್ಲಂಘಿಸಿದಂತೆ ಆಗಲಿದೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.
ಆದರೆ ಖಾಸಗಿತನದ ಹಕ್ಕನ್ನು ಮೂಲಭೂತ ಹಕ್ಕಾಗಿಸಲು ಸಾಧ್ಯವಿಲ್ಲ ಎಂಬ ವಾದವನ್ನು ಕೇಂದ್ರ ಸರ್ಕಾರ ಮುಂದಿಟ್ಟಿತ್ತು.
ಕೇಂದ್ರ ಸರ್ಕಾರ ಎಲ್ಲಾ ಸೇವೆಗಳಿಗೆ ಬಯೋಮೆಟ್ರಿಕ್ ಆಧಾರಿತ ಆಧಾರ್ ಸಂಖ್ಯೆಯನ್ನು ಕಡ್ಡಾಯಗೊಳಿಸುತ್ತಿರುವ ಹಿನ್ನೆಲೆಯಲ್ಲಿ, ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗುತ್ತಿದೆ ಎಂದು ದೇಶದ್ಯಾಂತ ತೀವ್ರ ಚರ್ಚೆಯಾಗಿತ್ತು. ಹಾಗೂ ವಿವಿಧ ಮೂಲೆಗಳಿಂದ ವ್ಯಾಪಕ ಟೀಕೆಗೊಳಗಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.