
ಬೆಂಗಳೂರು: ರಾಜ್ಯಾದ್ಯಂತ ಮಳೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ರಸ್ತೆಗಳು ಗುಂಡಿಮಯವಾಗುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಹೆದ್ದಾರಿಗಳ ದುರಸ್ತಿಗಾಗಿ ವಾರದೊಳಗೆ ಪ್ರತಿ ಕಿ.ಮೀ.ಗೆ 25 ಸಾವಿರ ರು. ಅನುದಾನ ಬಿಡುಗಡೆ ಮಾಡುವಂತೆ ಆದೇಶಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಹೇಳಿದ್ದಾರೆ. ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಳೆ ಹಿನ್ನೆಲೆಯಲ್ಲಿ ರಸ್ತೆಗಳು ಹಾಳಾಗಿರುವ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ ಎಂದರು.
ಮಂಗಳೂರು, ಉಡುಪಿ, ಗದಗ, ಹುಬ್ಬಳ್ಳಿ, ವಿಜಯಪುರ, ಬಾಗಲಕೋಟೆ, ಹಾವೇರಿ ಸೇರಿ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ. ಕರಾವಳಿ, ಮಲೆನಾಡು ಪ್ರದೇಶದಲ್ಲಿ ಭಾರಿ ಮಳೆಯಿಂದ ರಸ್ತೆಗಳು ಹಾಳಾಗಿವೆ. ಬಹುತೇಕ ಕಡೆ ರಸ್ತೆ ಗುಂಡಿ ಸೃಷ್ಟಿಯಾಗಿವೆ. ಇವುಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಪ್ರತಿ ಕಿ.ಮೀ.ಗೆ 25 ಸಾವಿರ ರು. ಬಿಡುಗಡೆ ಮಾಡಲಾಗುವುದು. ಮಳೆ ಮುಗಿದ ಬಳಿಕ ಡಾಂಬರೀಕರಣ ನಡೆಸಲಾಗುವುದು ಎಂದರು.
ಮಳೆಯಿಂದಾಗಿ ಕೆಲವು ಕಡೆ ಸೇತುವೆಗಳು ತುಂಬಿ ಹರಿಯುತ್ತಿದ್ದು, ಸಾರ್ವಜನಿಕರಿಗೆ ಸೇತುವೆ ಬಗ್ಗೆ ನಿಖರ ಮಾಹಿತಿ ನೀಡಲು ಸೇತುವೆ ಬಳಿ ಸಿಬ್ಬಂದಿ ನಿಯೋಜಿಸಬೇಕು ಎಂದು ಸೂಚನೆ ನೀಡಿದ್ದೇನೆ ಎಂದರು. ಮೈಸೂರು-ಬೆಂಗಳೂರು ನಡುವಿನ ಎಂಟು ಪಥದ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಆಗಿದೆ. ಈ ಮಾರ್ಗದಲ್ಲಿ ವಿದ್ಯುತ್ ಲೇನ್, ಅರಣ್ಯ ಪ್ರದೇಶ ಸೇರಿದಂತೆ ವಿವಿಧ ಸಮಸ್ಯೆಗಳಿವೆ. ಅದನ್ನು ಬಗೆಹರಿಸಿ ತ್ವರಿತವಾಗಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ರೇವಣ್ಣ ತಿಳಿಸಿದರು.
ಹುಬ್ಬಳ್ಳಿ-ಧಾರವಾಡ ಬಿಆರ್‌ಟಿ ಯೋಜನೆ7- 8 ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಈ ಯೋಜನೆ ಶೀಘ್ರ ಪೂರ್ಣಗೊಳಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಸಿಗಂದೂರಿಗೆ ತೆರಳಲು ಶರಾವತಿ ಹಿನ್ನೀರಿನಲ್ಲಿ 650 ಕೋಟಿ ರು. ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಲು ಸಿದ್ಧತೆ ನಡೆಸಲಾಗಿದೆ. ಮಡಿಕೇರಿ ಹಾಗೂ ಕೇರಳದ ತಲಶ್ಶೇರಿ ನಡುವೆ ಸಂಪರ್ಕ ಕಡಿದು ಹೋಗಿದ್ದು, 15 ದಿನದಲ್ಲಿ ಕಾಮಗಾರಿ ಪೂರ್ಣಗೊಳಿಸ ಬೇಕು ಎಂದು ಸೂಚಿಸಿದ್ದೇನೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.