
ಬೆಂಗಳೂರು : ಸಚಿವ ಡಿ.ಕೆ. ಶಿವಕುಮಾರ್ ಹಾಗೂ ನನ್ನ ನಡುವೆ ಯಾವುದೇ ಜಟಾಪಟಿ ನಡೆದಿಲ್ಲ. ನಮ್ಮಿಬ್ಬರ ಬಾಂಧವ್ಯ ಚೆನ್ನಾಗಿಯೇ ಇದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಕರಡು ರೂಪಿಸುವ ಸಮಿತಿಯ ಸಭೆ ಮುಗಿದ ಬಳಿಕ ಸಾಲ ಮನ್ನಾ ವಿಚಾರಕ್ಕೆ ಡಿ.ಕೆ.ಶಿವಕುಮಾರ್ ಹಾಗೂ ನನ್ನ ಮಧ್ಯೆ ವೈಮನಸ್ಯ ಉಂಟಾಗಿದೆ ಎಂದು ಬಿಂಬಿಸಲಾಗಿದೆ.
ಇದೆಲ್ಲವೂ ಮಾಧ್ಯಮಗಳ ಸೃಷ್ಟಿಯಾಗಿದ್ದು, ಅವರು ಪುಕ್ಕಟೆ ಪ್ರಚಾರ ನೀಡುತ್ತಿರುವುದಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ಆದರೆ ಸಾಲ ಮನ್ನಾ ಮಾಡುವುದು ನಮ್ಮ ಪ್ರಮುಖ ಆದ್ಯತೆ. ಇದಕ್ಕೆ ಯಾರೂ ವಿರೋಧ ವ್ಯಕ್ತಪಡಿಸಿಲ್ಲ ಎಂದರು.
ಸಾಲ ಮನ್ನಾ ಜತೆಗೆ ಮಕ್ಕಳ ಆಶ್ರಯ ಇಲ್ಲದ ಹಿರಿಯ ನಾಗರಿಕರು ಅಂತಿಮ ಕಾಲದಲ್ಲಿ ನೆಮ್ಮದಿಯಿಂದ ಇರಲು ಪ್ರತಿ ತಿಂಗಳು ಆರು ಸಾವಿರ ರು. ಮಾಸಾಶನ ನೀಡಬೇಕು. ಹಾಗೂ ಗರ್ಭಿಣಿಯರಿಗೆ ಆರು ತಿಂಗಳ ಕಾಲ ಐದು ಸಾವಿರ ರು. ಮಾಸಾಶನ ನೀಡುವುದನ್ನು ಕಾರ್ಯಕ್ರಮಗಳಲ್ಲಿ ಸೇರಿಸಬೇಕು ಎಂದು ಬೇಡಿಕೆ ಇಟ್ಟಿದ್ದೇನೆ. ಈ ವಿಷಯದಲ್ಲಿ ಡಿ.ಕೆ. ಶಿವಕುಮಾರ್ ಹಾಗೂ ನನ್ನ ನಡುವೆ ಯಾವುದೇ ಜಟಾಪಟಿ ನಡೆದಿಲ್ಲ. ನಮ್ಮಿಬ್ಬರ ಬಾಂಧವ್ಯ ಚೆನ್ನಾಗಿಯೇ ಇದೆ ಎಂದರು.
ಐಟಿ ನೋಟಿಸ್ ಖಂಡನೀಯ: ಡಿ.ಕೆ. ಶಿವಕುಮಾರ್ ವಿರುದ್ದ ಐಟಿ ಇಲಾಖೆ ನೋಟಿಸ್ ನೀಡಿದೆ. ಇಂಥ ವಿಷಯದಲ್ಲಿ ದ್ವೇಷದ ರಾಜಕೀಯ ಸರಿಯಲ್ಲ. ಅಧಿಕಾರ ಯಾರಿಗೂ ಶಾಶ್ವತವಲ್ಲ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.