
ಕೆಲಸಕ್ಕೆ ರಾಜೀನಾಮೆ ನೀಡುವುದೆಂದರೆ ಹುಡುಗಾಟದ ವಿಷಯವಿಲ್ಲ. ಅಳೆದು ತೂಗಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಅದರಲ್ಲೂ ವಿಶೇಷವಾಗಿ ನೋಟಿಸ್ ಪಿರಿಯಡ್ ಮತ್ತು ಸಂವಹನ ಸರಿಯಿಲ್ಲದಿದ್ದಾಗ ಸಮಸ್ಯೆಗಳು ಇನ್ನಷ್ಟು ಉಲ್ಬಣಿಸುತ್ತವೆ. ಪ್ರಸ್ತುತ ನಡೆದ ಈ ಘಟನೆಯು ಕೆಲಸದ ಸ್ಥಳದ ನೀತಿಗಳು, ದಾಖಲಾತಿಗಳು ಮತ್ತು ಉದ್ಯೋಗಿಗಳ ಹಕ್ಕುಗಳ ಬಗ್ಗೆ ಆನ್‌ಲೈನ್‌ನಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.
ದೆಹಲಿ ಮೂಲದ ಈ ಡಿಸೈನರ್ ಅಕ್ಟೋಬರ್ 1, 2025 ತಮ್ಮ ಕೊನೆಯ ಕೆಲಸದ ದಿನವೆಂದು ಹೇಳಿ ರಾಜೀನಾಮೆ ನೀಡಿದ್ದರು. ಆಗಿನ ಎಚ್‌ಆರ್ ಅವರಿಗೆ ಇಮೇಲ್ ಕಳುಹಿಸಿ, ಫೆಬ್ರವರಿವರೆಗೆ ಕೆಲಸ ಮುಂದುವರಿಸುವಂತೆ ಕೇಳಿಕೊಂಡಿದ್ದರು. ಒಂದು ವೇಳೆ ಫೆಬ್ರವರಿ ಮೊದಲು ಅವರು ಕೆಲಸ ಬಿಟ್ಟರೆ, ಕನಿಷ್ಠ 30 ದಿನಗಳ ಮುಂಚಿತವಾಗಿ ನೋಟಿಸ್ ಲೆಟರ್ ನೀಡಬೇಕಾಗುತ್ತದೆ ಎಂದು ಇಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ. ಕಂಪನಿಯಲ್ಲಿ ಕೇವಲ ಮೂವರು ಡಿಸೈನರ್ ಇದ್ದ ಕಾರಣ, ಒಳ್ಳೆಯ ಉದ್ದೇಶದಿಂದ ಅವರು ಅಲ್ಲಿಯೇ ಉಳಿದುಕೊಂಡರು. ಕೆಲಸದ ವಾತಾವರಣ Toxic ಆಗಿದ್ದರೂ ಮತ್ತು ಬಾಸ್ ಸರಿಯಿಲ್ಲದಿದ್ದರೂ ಅವರು ಕಂಪನಿಯ ವಿನಂತಿಗೆ ಓಗೊಟ್ಟಿದ್ದರು.
ಫೆಬ್ರವರಿ 2026 ರಲ್ಲಿ, ತಾವು ಒಪ್ಪಿಕೊಂಡ ಅವಧಿಯನ್ನು ಪೂರೈಸಿದ್ದೇನೆ ಎಂಬ ನಂಬಿಕೆಯಿಂದ ಅವರು ಮತ್ತೆ ರಾಜೀನಾಮೆ ಸಲ್ಲಿಸಿದರು. ಆದರೆ, ಈ ಬಾರಿ ಹೊಸದಾಗಿ ಬಂದಿದ್ದ ಎಚ್‌ಆರ್ ಪ್ರತಿನಿಧಿಯು ವಿಭಿನ್ನವಾಗಿ ಪ್ರತಿಕ್ರಿಯಿಸಿದರು. ಹಳೆಯ ಎಚ್‌ಆರ್ ಈಗ ಕಂಪನಿಯಲ್ಲಿ ಇಲ್ಲದ ಕಾರಣ ಅವರು ನೀಡಿದ ಭರವಸೆ ಅಥವಾ ಇಮೇಲ್ ಮಾನ್ಯವಾಗುವುದಿಲ್ಲ ಮತ್ತು ಉದ್ಯೋಗ ಒಪ್ಪಂದದ ಪ್ರಕಾರ ಮತ್ತೆ ಎರಡು ತಿಂಗಳ ನೋಟಿಸ್ ಅವಧಿ ಪೂರೈಸಬೇಕು ಎಂದು ಒತ್ತಾಯಿಸಿದರು. ಇದರಿಂದ ಹತಾಶೆಗೊಂಡ ಉದ್ಯೋಗಿ, ತಮಗೆ ಹೇಳದೆಯೇ ಕೆಲಸ ಬಿಟ್ಟು ಹೋಗುವ (Absconding) ಆಲೋಚನೆ ಬರುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಈ ಪರಿಸ್ಥಿತಿಗೆ ರೆಡ್ಡಿಟ್ ಬಳಕೆದಾರರಿಂದ ಹಲವು ಪ್ರತಿಕ್ರಿಯೆಗಳು ಬಂದಿವೆ…
*ಒರ್ವ ಬಳಕೆದಾರರು, "ಹಳೆಯ ನೋಟಿಸ್ ಅವಧಿ ಮುಗಿದ ದಿನವೇ ನೀವು ಹೊರಬರಬೇಕಿತ್ತು, ಆಗ ಕಂಪನಿ ಏನೂ ಮಾಡಲು ಸಾಧ್ಯವಿರಲಿಲ್ಲ" ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಎಚ್‌ಆರ್ ಬದಲಾದ ತಕ್ಷಣ ನೋಟಿಸ್ ಅವಧಿ ಅಮಾನ್ಯವಾಗುತ್ತದೆ ಎಂದು ಯಾವ ನಿಯಮದಲ್ಲಿದೆ ಎಂದು ಇಮೇಲ್ ಮೂಲಕ ಪ್ರಶ್ನಿಸಲು ಸಲಹೆ ನೀಡಿದ್ದಾರೆ.
*ಹಾಗೆಯೇ ಹಳೆಯ ಎಚ್‌ಆರ್ ಕಳುಹಿಸಿದ ಇಮೇಲ್ ಅನ್ನು ಅಧಿಕೃತ ದಾಖಲೆಯಾಗಿ ಇಟ್ಟುಕೊಳ್ಳುವಂತೆ ಮತ್ತು ಕಂಪನಿಯ ಪ್ರತಿನಿಧಿಯಾಗಿ ಅವರು ನೀಡಿದ ಭರವಸೆ ಕಂಪನಿಗೆ ಬದ್ಧವಾಗಿರುತ್ತದೆ ಎಂದು ವಾದಿಸಲು ತಿಳಿಸಿದ್ದಾರೆ. ಅಗತ್ಯವಿದ್ದರೆ ಕಾರ್ಮಿಕ ನ್ಯಾಯಾಲಯದ (Labour Court) ಮೊರೆ ಹೋಗಬಹುದು ಎಂದಿದ್ದಾರೆ.
*ಅನುಭವ ಪತ್ರ (Experience Letter) ಬೇಡವೆಂದಾದರೆ ತಕ್ಷಣವೇ ಕೆಲಸ ನಿಲ್ಲಿಸಬಹುದು. ಆದರೆ ದಾಖಲೆಗಳು ಬೇಕೆಂದಾದರೆ ಚರ್ಚೆಯ ಮೂಲಕ ಪರಿಹರಿಸಿಕೊಳ್ಳುವುದು ಉತ್ತಮ ಎಂದು ಹಲವರು ಸೂಚಿಸಿದ್ದಾರೆ.
ನೋಟಿಸ್ ಅವಧಿಯ ಮತ್ತೊಂದು ಕಿರಿಕಿರಿ
ಇದೇ ರೀತಿಯ ಮತ್ತೊಂದು ಘಟನೆಯಲ್ಲಿ, ಒಬ್ಬ ಟೆಕ್ಕಿಗೆ ಎರಡು ಕಂಪನಿಗಳಿಂದ ಉದ್ಯೋಗದ ಆಫರ್ ಬಂದಿತ್ತು. ಎರಡೂ ಕಂಪನಿಗಳು 30 ದಿನದೊಳಗೆ ಕೆಲಸಕ್ಕೆ ಸೇರುವಂತೆ ಕೇಳಿದ್ದವು. ಪ್ರಸ್ತುತ ಕಂಪನಿಯು ಮೊದಲು 30 ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಮೌಖಿಕವಾಗಿ ಒಪ್ಪಿತ್ತು. ಆದರೆ ರಾಜೀನಾಮೆ ನೀಡಿದ ನಂತರ, 60 ದಿನಗಳ ನೋಟಿಸ್ ಅವಧಿ ಪೂರೈಸಲೇಬೇಕು ಎಂದು ಪಟ್ಟು ಹಿಡಿದಿದೆ. ಆ ಉದ್ಯೋಗಿ ತನ್ನೆಲ್ಲಾ ಕೆಲಸಗಳನ್ನು ಮುಗಿಸಿದ್ದರೂ, ಕೇವಲ ಕ್ಲೈಂಟ್‌ನಿಂದ ಹಣ ಪಡೆಯುವ (Billing) ಉದ್ದೇಶಕ್ಕಾಗಿ ಕಂಪನಿಯು ತನ್ನನ್ನು ಹಿಡಿದಿಟ್ಟುಕೊಳ್ಳುತ್ತಿದೆ ಎಂದು ಅವರು ದೂರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.