
ಬೆಂಗಳೂರು(ಫೆ.09): ತಿರುಪತಿಯಲ್ಲಿ ರಾಜ್ಯ ಸರ್ಕಾರ ನಿರ್ಮಿಸುತ್ತಿರುವ ವಸತಿ ಸಂಕೀರ್ಣದ ಭೂ ವ್ಯಾಜ್ಯವನ್ನು ಶೀಘ್ರವೇ ಇತ್ಯರ್ಥಪಡಿಸಿ, ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಭರವಸೆ ನೀಡಿದರು.
ಜೆಡಿಎಸ್ ಸದಸ್ಯ ಆರ್.ಚೌಡರಡ್ಡಿ ತೂಪಲ್ಲಿ ಅವರು ಪ್ರಶ್ನೋತ್ತರ ವೇಳೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ತಿರುಪತಿಯಲ್ಲಿ ರಾಜ್ಯ ಸರ್ಕಾರಕ್ಕೆ ಸೇರಿದ 7.5 ಎಕರೆ ಜಮೀನಿನಲ್ಲಿ ಕರ್ನಾಟಕದ ಯಾತ್ರಿಗಳಿಗಾಗಿ ವಸತಿ ಗೃಹ ಸಂಕೀರ್ಣ ನಿರ್ಮಿಸಲಾಗುತ್ತಿದೆ. ಆದರೆ ಈ ಜಮೀನಿನ ಕುರಿತು ಸ್ಥಳೀಯರಾದ ಟಿ.ನರಸಿಂಹನ್ ಎಂಬುವವರು ಆಂಧ್ರಪ್ರದೇಶ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದಾರೆ. ಹೀಗಾಗಿ ಕಾಮಗಾರಿ ಸ್ಥಗಿತಗೊಂಡಿದೆ. ಶೀಘ್ರವೇ ವ್ಯಾಜ್ಯ ಇತ್ಯರ್ಥಕ್ಕೆ ಕ್ರಮಕೈಗೊಂಡು ಆದಷ್ಟು ಬೇಗನೆ ರಾಜ್ಯದ ಯಾತ್ರಿಗಳಿಗೆ ನೆರವಾಗುವಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಸಚಿವ ಲಮಾಣಿ ಅವರು, ವ್ಯಾಜ್ಯವಿರುವ ಜಮೀನಿನ ಸ್ವತ್ತಿನ ಹಕ್ಕು ತಿರುಪತಿ ತಿರುಮಲ ದೇವಸ್ಥಾನಂ ಟ್ರಸ್ಟ್ ಹೆಸರಿನಲ್ಲಿ ಎಂದು ಹೇಳಿದ್ದರಿಂದ ಆಡಳಿತ ಪಕ್ಷದ ಸದಸ್ಯ ವಿ.ಎಸ್.ಉಗ್ರಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಈ ಉತ್ತರ ಪ್ರಮಾದದಿಂದ ಕೂಡಿದೆ ಎಂದು ಗಮನ ಸೆಳೆದರು.
ಆಗ ಸಚಿವ ಲಮಾಣಿ ಅವರು ಕಾನೂನು ಸಚಿವ ಟಿ.ಬಿ.ಜಯಚಂದ್ರ ಜತೆ ಚರ್ಚಿಸಿ ತಮ್ಮ ಹೇಳಿಕೆ ವಾಪಸ್ ಪಡೆದ ಘಟನೆಯೂ ನಡೆಯಿತು. ಹೀಗಾಗಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ಉತ್ತರವನ್ನು ತಡೆ ಹಿಡಿದಿರುವುದಾಗಿ ಪ್ರಕಟಿಸಿ, ಚರ್ಚೆಗೆ ತೆರೆ ಎಳೆದರು.
ಹಾವೇರಿಯಲ್ಲಿ ಈ ವರ್ಷ ಜವಳಿ ಪಾರ್ಕ್
ಪ್ರಸಕ್ತ ವರ್ಷ ಹಾವೇರಿಯಲ್ಲಿ ಜವಳಿ ಪಾರ್ಕ್ ನಿರ್ಮಾಣ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದು ಜವಳಿ ಸಚಿವ ರುದ್ರಪ್ಪ ಲಮಾಣಿ ತಿಳಿಸಿದರು.
ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಜವಳಿ ಪಾರ್ಕ್ ನಿರ್ಮಾಣ ಸಂಬಂಧ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡಲಾಗಿದೆ. ಮುಂದಿನ ತಿಂಗಳು ಮಂಡನೆಯಾಗುವ ಬಜೆಟ್‌ನಲ್ಲಿ ಅಧಿಕೃತವಾಗಿ ಘೋಷಣೆಯಾಗಲಿದೆ ಎಂದರು.
ಕೇಂದ್ರ ಸರ್ಕಾರದ ನೆರನೊಂದಿಗೆ ದೊಡ್ಡಬಳ್ಳಾಪುರದಲ್ಲಿ ಜವಳಿ ಪಾರ್ಕ್ ಸ್ಥಾಪಿಸಿದೆ. ಕಲಬುರಗಿ ಜಿಲ್ಲೆಯ ಲಕ್ಕೂರು ಕೆಸರಟ್ಟಿಯಲ್ಲೂ ಕೂಡ ಇಂಟಿಗ್ರೇಟೆಡ್ ಟೆಕ್ಸ್‌ಟೈಲ್ ಪಾರ್ಕ್ ನಿರ್ಮಿಸಲಾಗುವುದು. ಕೇಂದ್ರ ಸರ್ಕಾರ ಶೇ.40ರಷ್ಟು ಹಾಗೂ ರಾಜ್ಯ ಸರ್ಕಾರದಿಂದ ಶೇ.40ರ ಅನುಪಾತದಲ್ಲಿ ಮೂಲಸೌಕರ್ಯ ನಿರ್ಮಾಣ ಮಾಡಲಾಗುವುದು ಎಂದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಬಡಗನಾಡು ಗ್ರಾಮದಲ್ಲಿ ಗ್ರೀನ್‌ಫೀಲ್ಡ್ ಜವಳಿ ಪಾರ್ಕ್ ನಿರ್ಮಾಣ ಮಾಡಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ನೂತನ ಜವಳಿ ನೀತಿ ಯೋಜನೆಯಿಂದ 5 ಲಕ್ಷ ಉದ್ಯೋಗ ಸೃಜನೆಯ ಗುರಿ ಹೊಂದಲಾಗಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.