
ಬೆಂಗಳೂರು(ಫೆ.09): ಕಳೆದ ವಾರ ನಡೆದ ದಾಸನಪುರ ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಮೇಲಿನ ಶೂಟೌಟ್ ಪ್ರಕರಣ ಕುರಿತು ಪೊಲೀಸರ ತನಿಖೆ ಆಳಕ್ಕೆ ಇಳಿದಷ್ಟು ರೋಚಕ ಮಾಹಿತಿ ಹೊರ ಬರುತ್ತಿದ್ದು, ಈ ಕೃತ್ಯದಲ್ಲಿ ಬಿಜೆಪಿ ಶಾಸಕರೊಬ್ಬರ ಮೇಲೆ ಪೊಲೀಸರ ತೂಗುಗತ್ತಿ ಬಿದ್ದಿದೆ.
ಈ ಪ್ರಕರಣದಲ್ಲಿ ಭೂ ವಿವಾದ ಹಾಗೂ ರಾಜಕೀಯ ಕಾರಣದ ಬಗ್ಗೆ ನಡೆದಿರುವ ಅನುಮಾನಗೊಂಡಿರುವ ಪೊಲೀಸರು, ಈ ಕೃತ್ಯ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಆ ಶಾಸಕರಿಗೆ ನೋಟಿಸ್ ಜಾರಿಗೊಳಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಅಲ್ಲದೆ ಕೃತ್ಯದಲ್ಲಿ ತಮ್ಮ ಹೆಸರು ಕೇಳಿ ಬಂದ ಕೂಡಲೇ ರೌಡಿಗಳಾದ ಒಂಟೆ ರೋಹಿತ್ ಹಾಗೂ ಸೈಲೆಂಟ್ ಸುನೀಲ್‌ನನ್ನು ತನಿಖಾಕಾರಿ ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ನಾರಾಯಣ ಮುಂದೆ ಶರಣಾಗತಿ ಮಾಡಿಸಲು ಈ ಶಾಸಕರು ಮಧ್ಯಸ್ಥಿಕೆ ವಹಿಸಿದ್ದರು. ಆದರೆ ಪತ್ರಕರ್ತ ಅಗ್ನಿ ಶ್ರೀಧರ್ ಮನೆ ಮೇಲೆ ದಾಳಿ ಬಳಿಕ ಒಂಟೆ ಮತ್ತು ಸುನೀಲ್ ಸ್ವಯಂ ಪೊಲೀಸರಿಗೆ ಶರಣಾದರು ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.
ಇದಕ್ಕೆ ಪುಷ್ಠಿ ನೀಡುವಂತೆ ಕಡಬಗೆರೆ ಶ್ರೀನಿವಾಸ್ ಆಪ್ತ ಯಲಹಂಕ ಕಾಂಗ್ರೆಸ್ ಮುಖಂಡ ರಮೇಶ್ ಜೀವ ಬೆದರಿಕೆ ಪ್ರಕರಣದಲ್ಲಿ ಬಂತರಾಗಿರುವ ಪತ್ರಕರ್ತ ಅಗ್ನಿ ಶ್ರೀಧರ್ ಸಹಚರರೂ ಆದ ಕುಖ್ಯಾತ ರೌಡಿಗಳಾದ ಒಂಟೆ ರೋಹಿತ್, ಸೈಲೆಂಟ್ ಸುನೀಲ್ ಹಾಗೂ ಬಿಜೆಪಿ ಮುಖಂಡ ನಾಗಶೆಟ್ಟಿಹಳ್ಳಿ ಸತೀಶ್ ವಿಚಾರಣೆ ಸಂದರ್ಭದಲ್ಲಿ ಸ್ಥಳೀಯ ಶಾಸಕರ ಹೆಸರು ಬಹಿರಂಗಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ವಿಷಯ ಸರ್ಕಾರದ ಮಟ್ಟಕ್ಕೂ ಹೋಗಿದ್ದು, ಗೃಹ ಸಚಿವರಿಗೆ ಮಾಹಿತಿ ರವಾನೆಯಾಗಿದೆ. ಇದೇ ವೇಳೆ ಪೋಲೀಸರು ಒಂದೊಮ್ಮೆ ಶಾಸಕರನ್ನು ಬಂಸಬೇಕಾದರೆ ವಿಧಾನಸಭೆಯ ಸ್ಪೀಕರ್ ಅವರ ಅನುಮತಿ ಕೇಳಬೇಕಾಗುತ್ತದೆ. ಆದ್ದರಿಂದ ಶಾಸಕರನ್ನು ಬಂಸುವ ಅಗತ್ಯವಿದೆಯೇ? ಒಂದೊಮ್ಮೆ ಅನಿವಾರ್ಯವಾದರೆ ಮುಂದಿನ ಕ್ರಮಗಳೇನು? ಸ್ಪೀಕರ್ ಅವರನ್ನ ಸಂಪರ್ಕಿಸಬೇಕೇ ಎಂಬ ಚರ್ಚೆಗಳು ಸರ್ಕಾರದ ಮಟ್ಟದಲ್ಲಿ ಗಂಭೀರವಾಗಿ ಚರ್ಚೆಯಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ ಈ ಶಾಸಕರು ತಮ್ಮ ಪಕ್ಷದ ನಾಯಕರೊಂದಿಗೆ ಗೃಹ ಸಚಿವ ಪರಮೇಶ್ವರ್ ಅವರನ್ನು ಭೇಟಿ ಮಾಡುವ ಪ್ರಯತ್ನವನ್ನೂ ನಡೆಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಭಂಟ ಶತ್ರುವಾದ
ದಾಸನಪುರ ಎಪಿಎಂಸಿ ಅಧ್ಯಕ್ಷ ಶ್ರೀನಿವಾಸ್ ಅವರು, ಕಾಂಗ್ರೆಸ್ ಪಕ್ಷ ಸೇರ್ಪಡೆಗೂ ಮುನ್ನ ದಶಕಗಳ ಕಾಲ ಬಿಜೆಪಿ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದರು. ಯಲಹಂಕ ಹಾಗೂ ನೆಲಮಂಗಲ ವಿಧಾನಸಭಾ ಕ್ಷೇತ್ರಗಳ ಸರಹದ್ದಿನಲ್ಲಿ ಸ್ಥಳೀಯವಾಗಿ ಪ್ರಭಾವ ಹೊಂದಿರುವ ಅವರು ನಗರದ ಹೊರವಲಯದ ರಿಯಲ್ ಎಸ್ಟೇಟ್ ದಂಧೆ ಮೇಲೆ ಹಿಡಿತಕ್ಕೆ ವಿರೋಗಳ ಜತೆ ಕಾದಾಟ ನಡೆದಿದೆ.
ಇನ್ನು ಎರಡು ದಶಕಗಳಿಂದಲೂ ಪಾತಕ ಲೋಕದಲ್ಲೂ ‘ಕಡಬಗೆರೆ ಬ್ರದರ್ಸ್’ (ಶ್ರೀನಿವಾಸ್ ಹಾಗೂ ಆತನ ಕಿರಿಯ ಸೋದರ ಪಾಯ್ಸನ್ ರಾಮ) ಎಂದೇ ಕುಖ್ಯಾತಿ ಪಡೆದಿದ್ದಾರೆ. ಈ ಕ್ರಿಮಿನಲ್ ಹಿನ್ನೆಲೆ ಅವರ ರಿಯಲ್ ಎಸ್ಟೇಟ್ ಮೇಲೆ ಪರಿಣಾಮ ಬೀರಿತು.
ಹೀಗಿರುವಾಗ ಎಂಟು ವರ್ಷಗಳ ಹಿಂದೆ ಕ್ಷೇತ್ರ ಮರು ವಿಂಗಡಣೆ ಬಳಿಕ ನೆಲಮಂಗಲ ಕ್ಷೇತ್ರದಲ್ಲಿದ್ದ ಕಡಬಗೆರೆ ಸೋದರರ ಪ್ರಭಾವವಿರುವ ದಾಸನಪುರ ಹೋಬಳಿಯು ಹೊಸದಾಗಿ ಅಸ್ವಿತ್ವಕ್ಕೆ ಬಂದ ಯಲಹಂಕ ವಿಧಾನಸಭಾ ಕ್ಷೇತ್ರಕ್ಕೆ ವ್ಯಾಪ್ತಿಗೊಳಪಟ್ಟಿತು. ಈ ರಾಜಕೀಯ ಬೆಳೆವಣಿಗೆ ನಂತರ ಶ್ರೀನಿವಾಸ್, ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿ ಸಂಘಟನೆಯಲ್ಲಿ ತೊಡಗಿದ್ದರು. ಬಳಿಕ ಶಾಸಕರ ಅತ್ಯಾಪ್ತ ವಲಯದ ಗುರುತಿಸಿಕೊಂಡಿದ್ದ ಶ್ರೀನಿವಾಸ್, ಶಾಸಕರ ಅಚಲ ಬೆಂಬಲ ಸಿಕ್ಕ ಬಳಿಕ ಸ್ಥಳೀಯ ಮಟ್ಟದಲ್ಲಿ ಮತ್ತಷ್ಟು ಪ್ರವರ್ಧನಮಾನಕ್ಕೆ ಬಂದರು.
2010ರ ಜಿಪಂ ಮತ್ತು ತಾಪಂ ಚುನಾವಣೆಯಲ್ಲಿ ದಾಸನಪುರ ಜಿಪಂ ಕ್ಷೇತ್ರ ವ್ಯಾಪ್ತಿಯ ನಾಲ್ಕು ತಾಪಂಗಳಲ್ಲಿ ಅವಿರೋಧ ವಾಗಿ ಬಿಜೆಪಿ ಸದಸ್ಯರು ಆಯ್ಕೆಯಾಗಿದ್ದರು. ಇಂಟರೆಸ್ಟಿಂಗ್ ಸುದ್ದಿ ಅಂದರೆ ಹೀಗೆ ಅವಿರೋಧವಾಗಿ ಆಯ್ಕೆಯಾದವರೂ ಪೈಕಿ ಶ್ರೀನಿವಾಸ್ ಸೋದರನ ಪಾಯ್ಸನ್ ರಾಮನ ಪತ್ನಿ ಸಹ ಸೇರಿದ್ದರು. ಈ ಸಂದರ್ಭದಲ್ಲಿ ಚುನಾವಣೆಗೆ ಜೆಡಿಎಸ್ ಪಕ್ಷದ ನಾಯಕರಿಗೆ ಚುನಾವಣಾ ಪ್ರಚಾರ ನಡೆಸದಂತೆ ಆತಂಕ ಸೃಷ್ಟಿಸಿದರು. ಖುದ್ದು ಆಗಿನ ಯಲಹಂಕ ಕ್ಷೇತ್ರ ಜೆಡಿಎಸ್ ಅಧ್ಯಕ್ಷ ಆಗಿದ್ದ ವಿಧಾನಪರಿಷತ್ ಸದಸ್ಯ ಮುಂಗಾರು ಮಳೆ ಇ.ಕೃಷ್ಣ ಅವರೇ ತಮಗೆ ಜೀವ ಭಯವಿದೆ ಎಂದು ಅಲವತ್ತುಕೊಂಡಿದ್ದರು. ಆ ಮಟ್ಟಿಗೆ ಬಿಜೆಪಿ ಪಕ್ಷದಲ್ಲಿ ಶ್ರೀನಿವಾಸ್ ಸೋದರರ ಹಾವಳಿ ನಡೆದಿತ್ತು ಎಂದು ಹಿರಿಯ ಅಕಾರಿಗಳು ಸುವರ್ಣ ನ್ಯೂಸ್ ಸೋದರ ಪತ್ರಿಕೆ ‘ಕನ್ನಡಪ್ರಭ’ಕ್ಕೆ ವಿವರಿಸಿದ್ದಾರೆ.
ಹೀಗೆ ದಶಕಗಳಿಂದ ಸ್ಥಳೀಯ ಶಾಸಕರ ನೆರಳಿನಲ್ಲೇ ನಿಂತು ರಾಜಕೀಯ ಹಾಗೂ ಭೂ ವ್ಯವಹಾರ ಮಾಡಿಕೊಂಡು ಬಂದ ಶ್ರೀನಿವಾಸ್, ಕ್ರಮೇಣ ಆ ಕ್ಷೇತ್ರದಲ್ಲಿ ರಾಜಕೀಯ ಶಕ್ತಿಯಾಗಿ ಬೆಳವಣಿಗೆ ಕಂಡಿದ್ದು ಶಾಸಕರ ಭವಿಷ್ಯ ಭೀತಿ ಹುಟ್ಟಿಸಿತು. ಇದಾದ ಬಳಿಕ ಕೆಲ ವಿಚಾರಗಳಿಗೆ ಅವರಲ್ಲಿ ಮನಸ್ತಾಪವಾಯಿತು. ಈ ಭಿನ್ನಾಭಿಪ್ರಾಯ ಹಿನ್ನೆಲೆಯಲ್ಲಿ ಬಿಜೆಪಿ ತೊರೆದ ಶ್ರೀನಿವಾಸ್, ಸ್ಥಳೀಯ ಸಂಸದ ವೀರಪ್ಪ ಮೊಯ್ಲಿ ಮೂಲಕ ಕಾಂಗ್ರೆಸ್ ಸೇರ್ಪಡೆ ಆದರು.
ಆ ವೇಳೆ ಎದುರಾದ ಲೋಕಸಭಾ ಚುನಾವಣೆಯಲ್ಲಿ ನೆಲಮಂಗಲ ಹಾಗೂ ಯಲಹಂಕ ಕ್ಷೇತ್ರಗಳಲ್ಲಿ ಸ್ಥಳೀಯವಾಗಿ ಪ್ರಬಲ ನಾಯಕತ್ವದ ಕೊರತೆ ನಡುವೆಯೇ ಕಾಂಗ್ರೆಸ್ ಸಮಾಧಾನಕರ ಸಾಧನೆ ತೋರಿತು. ಈ ಬೆಳವಣಿಗೆ ಶಾಸಕರಿಗೆ ಅರಗಿಸಿಕೊಳ್ಳಲು ಸಾಧ್ಯವಿಲ್ಲದಂತಾಯಿತು. ಅಲ್ಲಿಂದ ಕ್ಷೇತ್ರದಲ್ಲಿ ಶಾಸಕರಿಗೆ ರಾಜಕೀಯ ಎದುರಾಳಿಯಾಗಿ ಶ್ರೀನಿವಾಸ್ ನಿಂತರು. ಕಳೆದ ವರ್ಷ ನಡೆದ ಜಿಪಂ ಚುನಾವಣೆಯಲ್ಲಿ ಮಾಚೋಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ‌್ಸಿ ಅವರು ಪರಾಜಿತರಾದರು. ಅಲ್ಲದೆ ದಶಕಗಳಿಂದ ಹಿಡಿತ ಹೊಂದಿದ್ದ ಗ್ರಾಪಂ ಚುನಾವಣೆಯಲ್ಲಿ ಪಾಯ್ಸನ್ ದಂಪತಿ ಹೀನಾಯವಾಗಿ ಪರಾರಭಗೊಂಡರು. ಈ ಸೋಲಿ ಮೂಲಕ ಮಾಜಿ ಶಿಷ್ಯನಿಗೆ ಶಾಸಕರ ಎದುರೇಟು ನೀಡಿದರು. ಈ ಸೇಡಿಗೆ ಬಿಬಿಎಂಪಿ ಚುನಾವಣೆಯಲ್ಲಿ ಶಾಸಕರ ಪತ್ನಿಯನ್ನು ಶ್ರೀನಿವಾಸ್ ಗುಂಪು ಸೋಲಿಸಿತು. ಹೀಗೆ ರಾಜಕೀಯ ಜಿದ್ದಾಜಿದ್ದಿಗೆ ಯಲಂಹಕ ಕ್ಷೇತ್ರವು ಅಖಾಡವಾಯಿತು.
ಜಿ.ಪಂ. ಚುನಾವಣೆಯಲ್ಲಿ ಸೋಲುಂಡಿದ್ದ ಶ್ರೀನಿವಾಸ್, ಶಾಸಕರ ಕಡು ವಿರೋಧ ನಡುವೆಯೇ ಎಪಿಎಂಸಿ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷ ಗಾದಿ ಚುಕ್ಕಾಣಿ ಹಿಡಿದರು. ಎರಡು ಅವಗೆ ಅಷ್ಟು ಪ್ರಬಲ ಎದುರಾಳಿ ಇಲ್ಲದೆ ನಿರಾಯಾಸವಾಗಿ ವಿಧಾನಸೌಧ ಪ್ರವೇಶಿಸುತ್ತಿದ್ದ ಶಾಸಕರಿಗೆ ಮುಂದಿನ ಚುನಾವಣೆಯಲ್ಲಿ ಶ್ರೀನಿವಾಸ್ ಸವಾಲೊಡ್ಡಬಹುದು ಎಂಬ ಭೀತಿ ಇತ್ತು. ಈ ಹಿನ್ನೆಲೆಯಲ್ಲಿ ಶ್ರೀನಿವಾಸ್ ಮೇಲೆ ಶಾಸಕರ ಕೊಲೆ ಯತ್ನ ನಡೆಸಿದ್ದರು ಎಂಬ ಆರೋಪಗಳು ಕೇಳಿ ಬಂದಿವೆ.
ಬಿಜೆಪಿಗೆ ಮುಜುಗರಕ್ಕೀಡು ಮಾಡುವ ತಂತ್ರ
ವಿಧಾನಮಂಡಲದಲ್ಲಿ ಗುರುವಾರದಿಂದ ಪ್ರತಿಪಕ್ಷಗಳು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಲವಾಗಿದೆ ಎನ್ನುವ ವಿಚಾರ ಮುಂದಿಟ್ಟು ಹೋರಾಟ ನಡೆಸಲು ಸಜ್ಜಾಗುತ್ತಿದೆ. ಈ ಮಾಹಿತಿ ತಿಳಿದಿರುವ ಸರ್ಕಾರ ಒಂದುವೇಳೆ ಬಿಜೆಪಿ ಶಾಸಕರ ವಿರುದ್ಧ ಆರೋಪಗಳು ಬಲವಾಗಿದ್ದರೆ ಅವರನ್ನೇ ಬಂಸಿ ಬಿಜೆಪಿಗೆ ಮುಜುಗರ ಉಂಟು ಮಾಡಬಹುದಲ್ಲವೇ ಎನ್ನುವ ಚರ್ಚೆಗಳೂ ನಡೆಯುತ್ತಿದೆ. ಹೀಗಾಗಿ ಶೂಟ್‌ಔಟ್ ಪ್ರಕರಣ ತೀವ್ರವಾಗಿದ್ದು, ನಂತರ ಪ್ರತಿ ಬೆಳವಣಿಗೆಯನ್ನು ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ರವಾನಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.