8 ವರ್ಷದ ಹಿಂದೆ ಮನೆ ಬಿಟ್ಟು ಹೋದ ಪುತ್ರ| ತಂದೆ ತಿಥಿಗಾದ್ರೂ ಬರ್ತಾನಾ?| ಮನೆ ಮಗನನ್ನು ಹುಡುಕಾಡಲು ಸಾಮಾಜಿಕ ಜಾಲತಾಣಗಳ ಮೊರೆ ಹೋದ ಕುಟುಂಬ
ಚನ್ನಪಟ್ಟಣ[ಮೇ.06]: ಎಂಟು ವರ್ಷಗಳ ಹಿಂದೆ ಮನೆ ಬಿಟ್ಟು ಹೋದ ಮಗ ತಂದೆಯ ತಿಥಿಗಾಗಲಿ ಬರಲಿ ಎಂದು ಹುಡುಕಾಡುತ್ತಿರುವ ಕುಟುಂಬದವರು ಮತ್ತು ಸಂಬಂಧಿಕರು ಇದೀಗ ಸಾಮಾಜಿಕ ಜಾಲತಾಣಗಳ ಮೊರೆ ಹೋಗಿರುವ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಎಚ್.ಮೊಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕೆ.ರಾಮಚಂದ್ರ ಎಂಬುವರು ಎಂಟು ವರ್ಷಗಳ ಹಿಂದೆ ತಮ್ಮ ಮಗ ವಿಕಾಸ್‌ಗೌಡ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ತೆಗೆದಿದ್ದಾನೆ ಎಂದು ಬೈದಿದ್ದರು. ಇದರಿಂದ ಬೇಸತ್ತ ವಿಕಾಸ್‌ಗೌಡ ಮನೆಬಿಟ್ಟು ಹೋಗಿದ್ದಾನೆ. ಅಂದಿನಿಂದ ಈತನನ್ನು ಹುಡುಕಿದರಾದರೂ ಪತ್ತೆಯಾಗಿಲ್ಲ. ಪ್ರತಿದಿನ ಮಗನ ಕೊರಗಿನಲ್ಲೇ ಇದ್ದ ಕೆ.ರಾಮಚಂದ್ರು ಇದೇ ನೋವಿನಲ್ಲಿ ಏ.28ರಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಮೇ 8ರಂದು ಇವರ ಉತ್ತರ ಕ್ರಿಯಾದಿ ಕಾರ್ಯವಿದ್ದು, ಕಾರ್ಯಕ್ಕಾದರೂ ಮಗನನ್ನು ಕರೆತರಬೇಕು ಎಂದು ಗ್ರಾಮಸ್ಥರು ಪ್ರಯತ್ನ ನಡೆಸುತ್ತಿದ್ದಾರೆ.
ಎಲ್ಲಾ ಕಡೆ ಗ್ರಾಮಸ್ಥರು, ಸಂಬಂಧಿಕರು ಹಾಗೂ ಕುಟುಂಬದವರು ಹುಡುಕಿ ಇದೀಗ ಸಾಮಾಜಿಕ ಜಾಲತಾಣಗಳ ಮೊರೆಹೋಗಿದ್ದಾರೆ. ಮಗನನ್ನು ಕರೆಸಿ ನನ್ನ ಪತಿಗೆ ಅವನಿಂದಲೇ ಶ್ರದ್ಧಾ ಮಾಡಿಸಬೇಕು ಎಂಬುದು ತಾಯಿ ಸಾವಿತ್ರಮ್ಮ ಅವರ ಹಂಬಲ, ಅಣ್ಣನ ಆಗಮನಕ್ಕೆ ಕಾಯುತ್ತಿರುವ ಸಹೋದರಿ ಸೌಂದರ್ಯ ಸಹ ಹುಡುಕಾಟದಲ್ಲಿದ್ದಾರೆ. ಇವರ ಹುಡುಕಾಟಕ್ಕೆ ಫಲ ಸಿಕ್ಕಿತೆ ಎಂದು ಕಾಯ್ದು ನೋಡಬೇಕಿದೆ.