ಯುನೈಟೆಡ್ ಬೆಂಗಳೂರಿನಿಂದ 'ಮತದಾರರ ನೋಂದಣಿ ಅಭಿಯಾನ' ಆರಂಭ

By Suvarna Web DeskFirst Published Dec 13, 2017, 10:08 AM IST
Highlights

ಮುಂಬರುವ ಚುನಾವಣೆ, ಮತದಾನ, ಮತದ ಮಹತ್ವ ಕುರಿತು ಮೊದಲ ಬಾರಿಗೆ ಮತ ಹಾಕುವವರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಯುನೈಟೆಡ್ ಬೆಂಗಳೂರು ಸಂಸ್ಥೆಯು ‘ಮತದಾರರ ನೋಂದಣಿ ಅಭಿಯಾನ’ ಆರಂಭಿಸಿದೆ.

ಬೆಂಗಳೂರು (ಡಿ.12): ಮುಂಬರುವ ಚುನಾವಣೆ, ಮತದಾನ, ಮತದ ಮಹತ್ವ ಕುರಿತು ಮೊದಲ ಬಾರಿಗೆ ಮತ ಹಾಕುವವರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಯುನೈಟೆಡ್ ಬೆಂಗಳೂರು ಸಂಸ್ಥೆಯು ‘ಮತದಾರರ ನೋಂದಣಿ ಅಭಿಯಾನ’ ಆರಂಭಿಸಿದೆ.

ಮೊದಲ ಬಾರಿಗೆ ಮತದಾನ ಮಾಡಲು ಅರ್ಹರಿರುವ ಯುವ ಜನರಿಗೆ ಹೆಸರು ನೋಂದಾಯಿಸುವ ಕುರಿತು ಪ್ರೇರಣೆ ಮತ್ತು ಅರಿವು ಮೂಡಿಸುವ ಕೆಲಸಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಮರು ನಿರ್ಮಾಣಕ್ಕಾಗಿ ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕಿರುವ ಕುರಿತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ನಗರದ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ಮಂಗಳವಾರ ‘ಮತದಾರರ ನೋಂದಣಿ ಅಭಿಯಾನ’ ಹಮ್ಮಿಕೊಳ್ಳಲಾಗಿತ್ತು. ಅಭಿಯಾನದಲ್ಲಿ ಬೀದಿ ನಾಟಕದ ಮೂಲಕ ಹಾಗೂ ಚುನಾವಣಾ ತಜ್ಞರಿಂದ ಯಾಕಾಗಿ ಮತ ಹಾಕಬೇಕೆಂದು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಯಿತು.

ಮತದಾನದ ಬಗ್ಗೆ ನಿರ್ಲಕ್ಷ್ಯ: ಅಭಿಯಾನದಲ್ಲಿ ಮಾತನಾಡಿದ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಪ್ರಸ್ತುತ ರಾಜಕಾರಣವು ಸಿನಿಕತೆಯಿಂದ ಕೂಡಿರುವುದು ಮಾತ್ರವಲ್ಲದೆ ಬಹಳ ವೆಚ್ಚದಿಂದ ಕೂಡಿದೆ. ಜನರು ರಾಜಕಾರಣವನ್ನು ನಿರ್ಲಕ್ಷ್ಯ ಮಾಡದೆ ಮತದಾನದ ಅಧಿಕಾರ ಅರಿತು ಮತ ಚಲಾಯಿಸಿದಾಗ ದೇಶದ ವ್ಯವಸ್ಥೆ ಬದಲಾವಣೆ ಸಾಧ್ಯವಿದೆ. ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಉತ್ತಮ ನಾಗರಿಕನ ಜವಾಬ್ದಾರಿಯಾಗಿದೆ. ಜನರು ಮತದಾನ ಮಾಡದಿದ್ದರೆ ಜನರ ಹಿತಾಸಕ್ತಿಗೆ ವಿರುದ್ಧ ಕೆಲಸ ಮಾಡುವ ರಾಜಕೀಯ ಶಕ್ತಿಗಳಿಗೆ ಬೆಂಬಲ ನೀಡಿದಂತಾಗುತ್ತದೆ ಎಂದು ತಿಳಿಸಿದರು. ಪ್ರತಿ ವರ್ಷ ದೇಶದಲ್ಲಿ ಶೇ.2 ರಿಂದ 2.5 ರಷ್ಟು ಮತದಾರರ ಸಂಖ್ಯೆ ಹೆಚ್ಚಳವಾಗುತ್ತಿದೆ. ಪ್ರತಿ ಐದು ವರ್ಷಕ್ಕೊಮ್ಮೆ 17 ರಿಂದ 19 ಕೋಟಿ ಹೊಸ ಮತದಾರರು ಹೆಚ್ಚಳವಾಗುತ್ತಿದ್ದಾರೆ. ಆದರೆ, ಈ ಪೈಕಿ ಶೇಕಡಾ ಅರ್ಧದಷ್ಟು ಮತದಾರರು ಮತದಾನದಲ್ಲಿ ಮತದಾನದ ಬಗ್ಗೆ ನಿರ್ಲಕ್ಷ್ಯ ತಾಳುತ್ತಿದ್ದಾರೆ. ಶೇ.70 ರಷ್ಟು ಮತದಾರರು ಮತದಾನವನ್ನೇ ಮಾಡುತ್ತಿಲ್ಲ. ಪರಿಣಾಮ ಹೊಸ ಮತದಾರರು ಮತದಾನ ಮಾಡದಿರುವುದರಿಂದ ಕಡಿಮೆ ಅಂತರದಿಂದ ಆಯ್ಕೆಯಾದವರು ಅಧಿಕಾರಕ್ಕೆ ಬರುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು. 

ಅಭಿಯಾನದ ಉದ್ದೇಶವೇನು? ಮತದಾರರ ಪಟ್ಟಿಯಲ್ಲಿರುವ ವಿವರಗಳನ್ನು ಅಪ್‌ಡೇಟ್ ಮಾಡುವುದು. ಮೊದಲ ಬಾರಿಯ ಮತದಾರರಿಗೆ ಮತದಾನದ ಪಟ್ಟಿಯಲ್ಲಿ ಹೆಸರು ಸೇರಿಸಲು ಪ್ರೇರಣೆ ಮತ್ತು ಅರಿವು ಮೂಡಿಸು ವುದಾಗಿದೆ. ಹೆಚ್ಚಿನ ಮಾಹಿತಿಗೆ .  reclaimngbengaluru.com  ವೆಬ್‌ತಾಣಕ್ಕೆ ಭೇಟಿ ನೀಡಿದರೆ ಮತದಾರರ ನೋಂದಣಿ ಮತ್ತು ಪರಿಷ್ಕೃತ ವಿವರ ದೊರೆಯಲಿದೆ. 9206056010  ಸಂಖ್ಯೆಗೆ ಮಿಸ್ಡ್ ಕಾಲ್ ಮತ್ತು ಕರೆ ಮಾಡಿಯೂ ಮಾಹಿತಿ ತಿಳಿದುಕೊಳ್ಳಬಹುದು.  

click me!