ಕೇರಳಕ್ಕೆ ಇಂದು ಮುಂಗಾರು ಪ್ರವೇಶ ಮಾಡಲಿದೆ. ಬಿಸಿಲ ಬೇಗೆ ತಲ್ಲಣಿಸಿದ್ದ ನಾಡಿಗೆ ತಂಪೆರೆಯಲು ವರುಣ ಸಜ್ಜಾಗಿದ್ದಾನೆ. ಇದರ ನಡುವೆ ಮುನ್ನೆಚ್ಚರಿಕೆಯನ್ನು ಕೈಗೊಳ್ಳುವುದು ಅತ್ಯಗತ್ಯವಾಗಿದೆ.
ನವದೆಹಲಿ: ದೇಶದ ಕೃಷಿ ಚಟುವಟಿಕೆ, ಆರ್ಥಿಕತೆಯ ಬೆನ್ನೆಲುಬಾಗಿರುವ ಮುಂಗಾರು ಮಾರುತಗಳು, ಶನಿವಾರ ಅಧಿಕೃತವಾಗಿ ಕೇರಳದ ಕರಾವಳಿಯನ್ನು ಪ್ರವೇಶಿಸಲಿದೆ. ಈ ಹಿನ್ನೆಲೆಯಲ್ಲಿ ಕೇರಳದ ಕರಾವಳಿಯ ಕೆಲ ಭಾಗಗಳಲ್ಲಿ ಶನಿವಾರ ಭಾರೀ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ. ಜೊತೆಗೆ ಕರ್ನಾಟಕದ ಕರಾವಳಿಯ ಕೆಲ ಭಾಗಗಳಲ್ಲೂ ಮಳೆಯಾಗಬಹುದು ಎಂದು ಹೇಳಿದೆ.
ಭಾರೀ ಪ್ರಮಾಣದಲ್ಲಿ ಮಳೆ ಸುರಿಯುವ ಸಾಧ್ಯತೆ ಇದ್ದು ಈ ನಿಟ್ಟಿನಲ್ಲಿ ಕೋಜಿಕ್ಕೋಡ್, ತಿರುವನಂತಪುರ, ಆಲಪ್ಪುಳ, ಎರ್ನಾಕುಲಂ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ನೀಡಲಾಗಿದ್ದು, ಎಚ್ಚರದಿಂದ ಇರುವಂತೆ ಕೇರಳದ ಹವಾಮಾನ ಇಲಾಖೆ ಸೂಚಿಸಿದೆ. ಈ ನಾಲ್ಕೂ ಜಿಲ್ಲೆಗಳಲ್ಲಿ ಮುಂದಿನ 2 ದಿನ ಸಾಮಾನ್ಯದಿಂದ, ಭಾರೀ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ.
ಮುಂಗಾರು ಮಾರುತಗಳ ಶನಿವಾರ ಕೇರಳವನ್ನು ಪ್ರವೇಶ ಮಾಡಿದರೂ, ಭಾರೀ ಬಿಸಿಲಿನ ಹೊಡೆತಕ್ಕೆ ಸಿಕ್ಕಿರುವ ದೇಶದ ಮಧ್ಯಭಾಗ ಮತ್ತು ಪಶ್ಚಿಮ ಭಾಗವನ್ನು ತಲುಪಲು ಇನ್ನೂ 7 ದಿನ ಬೇಕಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.
ಸಾಮಾನ್ಯವಾಗಿ ಜೂನ್ ಆರಂಭಕ್ಕೇ ಮುಂಗಾರು ಮಾರುತಗಳು ಕೇರಳವನ್ನು ಪ್ರವೇಶ ಮಾಡುತ್ತವೆಯಾದರೂ, ಈ ಬಾರಿ ಒಂದು ವಾರ ವಿಳಂಬವಾಗಲಿದೆ ಎಂದು ಈ ಹಿಂದೆಯೇ ಹವಾಮಾನ ಇಲಾಖೆ ಹೇಳಿತ್ತು.