ಮಾಯವಾದ ರಸ್ತೆಗಳು: ಮರು ನಿರ್ಮಾಣವೇ ಸವಾಲು

By Web DeskFirst Published Aug 23, 2018, 8:42 AM IST
Highlights

ಕೊಡಗಲ್ಲಿ ಭೂ ಕುಸಿತಕ್ಕೆ ಮುಚ್ಚಿ ಹೋದ, ಪ್ರವಾಹದ ರಭಸಕ್ಕೆ ಕೊಚ್ಚಿ ಹೋದ ರಸ್ತೆಗಳಿಗೂ ಲೆಕ್ಕವಿಲ್ಲ. ರಾಷ್ಟ್ರೀಯ, ರಾಜ್ಯ ಹಾಗೂ ಗ್ರಾಮೀಣ ಭಾಗದಲ್ಲಿನ ರಸ್ತೆಗಳ ಮೇಲೆ ಭಾರಿ ಗಾತ್ರದ ಮರಗಳು, ಬಂಡೆಕಲ್ಲುಗಳು, ಮಣ್ಣು ಕುಸಿದಿದ್ದು, ಇದರ ದುರಸ್ತಿ ಕಾರ್ಯ ಸಲೀಸಲ್ಲ. ಇದೀಗ ಈ ಕಾರ್ಯ ದೊಡ್ಡ ಸವಾಲಾಗಿ ಪರಿಣಮಿಸಿದೆ. 

ಮಡಿಕೇರಿ :  ಕೊಡಗು ಜಿಲ್ಲೆಯಲ್ಲಿ ಮಹಾಮಳೆಗೆ ಬಾಯ್ಬಿಟ್ಟಭೂಮಿ ಹಲವು ರಸ್ತೆಗಳನ್ನು ನುಂಗಿ ಹಾಕಿವೆ. ಭೂ ಕುಸಿತಕ್ಕೆ ಮುಚ್ಚಿ ಹೋದ, ಪ್ರವಾಹದ ರಭಸಕ್ಕೆ ಕೊಚ್ಚಿ ಹೋದ ರಸ್ತೆಗಳಿಗೂ ಲೆಕ್ಕವಿಲ್ಲ. ರಾಷ್ಟ್ರೀಯ, ರಾಜ್ಯ ಹಾಗೂ ಗ್ರಾಮೀಣ ಭಾಗದಲ್ಲಿನ ರಸ್ತೆಗಳ ಮೇಲೆ ಭಾರಿ ಗಾತ್ರದ ಮರಗಳು, ಬಂಡೆಕಲ್ಲುಗಳು, ಮಣ್ಣು ಕುಸಿದಿದ್ದು, ಇದರ ದುರಸ್ತಿ ಕಾರ್ಯ ಸಲೀಸಲ್ಲ. ಒಟ್ಟಾರೆ ಸುಮಾರು 130 ಕಿ.ಮೀ.ಯಷ್ಟುರಸ್ತೆಗೆ ಭಾರಿ ಪ್ರಮಾಣದಲ್ಲಿ ಹಾನಿಯಾಗಿದ್ದು ತಾತ್ಕಾಲಿಕ ರಸ್ತೆ ದುರಸ್ತಿಯೇ ಸವಾಲಾಗಿದೆ.

ಆ.13ರಂದು ಮುಂಜಾನೆ ಮಡಿಕೇರಿ-ಮಂಗಳೂರು(ರಾಷ್ಟ್ರೀಯ ಹೆದ್ದಾರಿ 75) ರಸ್ತೆಯ ಮದೆನಾಡು ಬಳಿಯಲ್ಲಿ ಭಾರಿ ಪ್ರಮಾಣದಲ್ಲಿ ಬರೆ ಕುಸಿದಿತ್ತು. ಇದಾದ ನಂತರ ಜೋಡುಪಾಲ, ತಾಳತ್ತಮನೆ ಮತ್ತಿತರ ಕಡೆಗಳ ಹತ್ತಾರು ಸ್ಥಳಗಳಲ್ಲಿ ಮಣ್ಣು ಕುಸಿದವು. ಕೆಲವು ಭಾಗದಲ್ಲಿ ರಸ್ತೆಯೇ ತುಂಡಾಗಿ, ಕೆಲವು ಅಡಿಗಳಷ್ಟುತಗ್ಗು ಬಿದ್ದಿದೆ. ಇದಾಗಿ ಮಡಿಕೇರಿ- ಮಂಗಳೂರು ರಸ್ತೆ ಸಂಪರ್ಕ ಕಡಿತಗೊಂಡು 10 ದಿನಗಳೇ ಕಳೆದಿವೆ.

Latest Videos

ವರ್ಷವಾದರೂ ಬೇಕು:

ಕುಶಾಲನಗರದಿಂದ ಸಂಪಾಜೆವರೆಗಿನ ಕೊಡಗಿನ ರಾಷ್ಟ್ರೀಯ ಹೆದ್ದಾರಿ ಶಾಶ್ವತವಾಗಿ ನಿರ್ಮಿಸಲು 530 ಕೋಟಿ ರು. ಪ್ರಸ್ತಾವನೆಯನ್ನು ಮುಂದಿಡಲಾಗಿದ್ದು, ಇದಕ್ಕೆ ಒಂದು ವರ್ಷವಾದರೂ ಅವಧಿ ಬೇಕು ಎಂದು ಸಂಬಂಧಿಸಿದ ಇಲಾಖೆಯ ಅಧಿಕಾರಿ ಹೇಳುತ್ತಾರೆ. ಇದೀಗ ಈ ರಸ್ತೆಯಲ್ಲಿ ತಾತ್ಕಾಲಿಕವಾಗಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲು ಕೆಲಸಗಳು ಭರದಿಂದ ಸಾಗಿವೆ.

ಜಿಲ್ಲೆಯಲ್ಲಿ ಇದೀಗ ಮಳೆ ಕಡಿಮೆಯಾಗಿದೆ. ಜೆಜಿಬಿ ಹಾಗೂ ಹಿಟಾಚಿ ಯಂತ್ರಗಳನ್ನು ಬಳಸಿಕೊಂಡು ರಸ್ತೆಯಲ್ಲಿ ಬಿದ್ದಿದ್ದ ಮಣ್ಣು, ಮರ ತೆರವು ಮಾಡಲಾಗುತ್ತಿದ್ದರೂ ಕೆಲವೆಡೆ ರಸ್ತೆ ಅಪಾಯದಲ್ಲಿದೆ. ತಾಳತ್ತಮನೆ ಸಮೀಪದಲ್ಲಿ ಹೆದ್ದಾರಿ ತುಂಡಾಗಿ ಬಿದ್ದಿದೆ. ಕೋಟ್ಯಂತರ ರು. ಖರ್ಚು ಮಾಡಿ ಅಲ್ಲಿಲ್ಲಿ ಸೇತುವೆ ನಿರ್ಮಿಸಬೇಕಾಗಿದೆ. ಇದಕ್ಕೆ ಸಾಕಷ್ಟುಸಮಯ ತಗಲುತ್ತದೆ. ಇದೀಗ ಈ ಭಾಗದಲ್ಲಿ ತಾತ್ಕಾಲಿಕ ಕಾಮಗಾರಿಗಳು ನಡೆಯುತ್ತಿವೆ.

ಮತ್ತೆ ಕುಸಿಯುವ ಭೀತಿ:  ಈಗಾಗಲೇ ಮಡಿಕೇರಿ- ಮಂಗಳೂರು, ಮಡಿಕೇರಿ- ಸೋಮವಾರಪೇಟೆ ನಡುವಣ ರಸ್ತೆಗಳನ್ನು ದುರಸ್ತಿ ಮಾಡುವ ಕೆಲಸ ಆರಂಭವಾಗಿದೆ. ಆದರೆ ಮತ್ತೆ ಭಾರಿ ಮಳೆ ಬಂದರೆ ಗುಡ್ಡ ಹಾಗೂ ರಸ್ತೆಯೇ ಕುಸಿಯುವ ಭೀತಿ ಇದೆ.

ತಾತ್ಕಾಲಿಕ ಪರಿಹಾರ ಕೆಲಸ: ಜಿಲ್ಲೆಯಲ್ಲಿ ಹಲವು ಸಂಪರ್ಕ ರಸ್ತೆಗಳು ಕಡಿತಗೊಂಡಿವೆ. ಇದೀಗ ತಾತ್ಕಾಲಿಕವಾಗಿ ವಾಹನ ಸಂಚರಿಸಲು ಕೆಲಸಗಳು ಆರಂಭವಾಗಿದೆ. ಜಿಲ್ಲೆಯಲ್ಲಿ ಸುಮಾರು 20ಕ್ಕೂ ಅಧಿಕ ಜೆಸಿಬಿ, ಹಿಟಾಚಿಗಳು, ಲಾರಿಗಳು ಕೆಲಸ ಮಾಡುತ್ತಿವೆ.

ಮರಳು ಚೀಲ ಬಳಕೆ: ಜಿಲ್ಲೆಯ ಕೆಲವೆಡೆ ರಸ್ತೆಯೇ ಮಾಯವಾಗಿವೆ. ಅಂತಹ ರಸ್ತೆಗಳನ್ನು ಸರಿಪಡಿಸಲು ಮರಳು ತುಂಬಿದ ಚೀಲಗಳನ್ನು ಹಾಕಲಾಗುತ್ತಿದೆ. ಜೆಸಿಬಿ ಬಳಸಿ ಲಾರಿಯ ಮೂಲಕ ಮಣ್ಣನ್ನು ತಂದು ಸುರಿಯಲಾಗುತ್ತಿದೆ. ಮತ್ತೆ ಮಳೆ ಹೆಚ್ಚಾದರೆ ಈ ವ್ಯವಸ್ಥೆಗೂ ಅಪಾಯ ಕಾದಿದೆ.

ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ರಸ್ತೆಗಳ ದುರಸ್ತಿ ಕಾರ್ಯ ನಡೆಯುತ್ತಿದೆ. ವಾಹನ ಸಂಚಾರಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗುವುದು. ತುಂಡಾಗಿರುವ ರಸ್ತೆಗಳಿಗೆ ಮರಳು ಚೀಲವನ್ನು ಬಳಸಿಕೊಂಡು ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ರಸ್ತೆ ಕಾಮಗಾರಿಗಳಿಗೆ .253 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದೆ.

-ಇಬ್ರಾಹಿಂ, ಕಾರ್ಯಪಾಲಕ ಎಂಜಿನಿಯರ್‌, ಪಿಡಬ್ಲ್ಯೂಡಿ ಮಡಿಕೇರಿ

ಮಳೆಯಿಂದಾಗಿ ಕುಶಾಲನಗರದಿಂದ ಸಂಪಾಜೆವರೆಗಿನ ರಸ್ತೆ ಸಂಪೂರ್ಣ ಹಾಳಾಗಿದೆ. ಮಡಿಕೇರಿ- ಮಂಗಳೂರು ಮಾರ್ಗದ ಮದೆನಾಡು ಬಳಿ ಹೆಚ್ಚು ಹಾನಿಯಾಗಿದೆ. ಕೊಡಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ .530 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಳೆ ಕಳೆದ ನಂತರ ಶಾಶ್ವತ ರಸ್ತೆ ಕಾಮಗಾರಿ ಕೆಲಸ ಆರಂಭವಾಗಲಿದೆ.

-ಜಗದೀಶ್‌, ಎಇಇ ಮಡಿಕೇರಿ

ವಿಘ್ನೇಶ್‌ ಎಂ. ಭೂತನಕಾಡು

click me!