
ಬೆಂಗಳೂರು: ಮಾಜಿ ಸಚಿವ ಹಾಗೂ ಹಾಲಿ ಪಕ್ಷದ ರೈತ ಮೋರ್ಚಾ ರಾಜ್ಯಾಧ್ಯಕ್ಷ ಸಿ.ಎಚ್.ವಿಜಯಶಂಕರ್ ಬಿಜೆಪಿ ತೊರೆಯುವ ನಿರ್ಧಾರಕ್ಕೆ ಬಂದಿರುವುದಕ್ಕೆ ಮುಖ್ಯ ಕಾರಣ ಮೈಸೂರಿನ ಸಂಸದ ಪ್ರತಾಪ್ ಸಿಂಹ ಎಂಬ ಮಾತು ಪಕ್ಷದ ಆಂತರಿಕ ವಲಯದಲ್ಲಿ ಬಲವಾಗಿ ಕೇಳಿಬಂದಿದೆ.
ಸ್ಥಳೀಯ ತೀರ್ಮಾನಗಳಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಅಂಶವನ್ನು ವಿಜಯಶಂಕರ್ ಹಲವು ತಿಂಗಳುಗಳಿಂದ ನಾಯಕರ ಗಮನಕ್ಕೆ ತರುತ್ತಲೇ ಬಂದಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ವಿಜಯಶಂಕರ್ ಸದ್ಯದ ಪರಿಸ್ಥಿತಿಯಲ್ಲಿ ಸ್ಥಳೀಯವಾಗಿ ತೀವ್ರ ಕಡೆಗಣಿಸಲ್ಪಟ್ಟಿದ್ದರು. ಹಿಂದೆಲ್ಲ ಮೈಸೂರು ಬಿಜೆಪಿ ಎಂದ ಕೂಡಲೇ ವಿಜಯಶಂಕರ್ ಹೆಸರು ಕೇಳಿಬರುತ್ತಿತ್ತು. ಈಗ ಅವರ ಹೆಸರೇ ಇಲ್ಲದಂತಾಗಿದೆ.
ಮುಂದೇನು ಎಂಬ ವಿಜಯಶಂಕರ್ ಪ್ರಶ್ನೆಗೆ ರಾಜ್ಯ ನಾಯಕ ರಲ್ಲಿ ಉತ್ತರವಿರಲಿಲ್ಲ. ಅಂದರೆ, ಬಿಜೆಪಿಯಿಂದ ಮುಂದಿನ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗುವ ಭರವಸೆಯೂ ಇಲ್ಲ. ಲೋಕಸಭಾ ಕ್ಷೇತ್ರ ಈಗಾಗಲೇ ಕೈಬಿಟ್ಟು ಹೋಗಿದೆ. ಹೀಗಿರುವಾಗ ಬಿಜೆಪಿಯಲ್ಲಿ ಮುಂದುವರೆಯು ವುದರಲ್ಲಿ ಯಾವುದೇ ಉದ್ದೇಶ ಕಾಣುತ್ತಿಲ್ಲ ಎಂದು ಆಪ್ತರು ವಿವರಿಸಿದ್ದಾರೆ. ವಿಜಯಶಂಕರ್ ಯಡಿಯೂರಪ್ಪ ಅವರ ಆಪ್ತರು. ಕಳೆದ ಲೋಕಸಭಾ ಚುನಾವಣೆಯಲ್ಲಿ ತಮಗೆ ಟಿಕೆಟ್ ತಪ್ಪಿಸಿದ್ದಕ್ಕೆ ಬಹಿರಂಗವಾಗಿಯೇ ಕಣ್ಣೀರಿಟ್ಟಿದ್ದ ವಿಜಯಶಂಕರ್ ಅವರನ್ನು ಸಮಾಧಾನಪಡಿಸುವುದಕ್ಕಾಗಿ ಯಡಿಯೂರಪ್ಪ ರಾಜ್ಯಾಧ್ಯಕ್ಷರಾದ ನಂತರ ರೈತ ಮೋರ್ಚಾದ ಅಧ್ಯಕ್ಷರನ್ನಾಗಿ ನೇಮಿಸಿದರು.
ಆದರೆ, ಅದರಾಚೆಗೆ ಮೈಸೂರಿನಲ್ಲಿ ವಿಜಯಶಂಕರ್ ಅವರಿಗೆ ಶಕ್ತಿ ತುಂಬಲು ಯಡಿಯೂರಪ್ಪ ಅವರಿಂದಲೂ ಆಗಲಿಲ್ಲ. ಸಿಂಹ ಅವರೊಬ್ಬರೇ ಅಲ್ಲ, ಪಕ್ಷದ ಇತರ ಮುಖಂಡರೂ ವಿಜಯಶಂಕರ್ ಅವರನ್ನು ನಿರ್ಲಕ್ಷಿಸಿದರು ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.