
ಬೆಂಗಳೂರು(ಫೆ.22): ಬೆಂಗಳೂರಿನಲ್ಲಿ ಅನೇಕ ಸಂಘಟನೆಗಳು ಸಾಮಾಜಿಕ ಕಾಳಜಿ ಹೆಸರಲ್ಲಿ ತಲೆಯೆತ್ತುತ್ತಿವೆ. ಆದರೆ, ಕೆಲವರು ಸಂಘಟನೆಗಳ ಹೆಸರಲ್ಲಿ ಕಳ್ಳದಾರಿ ಹಿಡಿದು ಹಣ ಮಾಡುವ ದಂಧೆಗೆ ಇಳಿದಿರುತ್ತಾರೆ. ಸಿಲಿಕಾನ್ ಸಿಟಿಯಲ್ಲಿ ಸಾಮಾಜಿಕ ಸೇವೆ ಮಾಡುತ್ತೇವೆ ಎಂದು ಹೇಳಿಕೊಂಡು ತಲೆ ಎತ್ತುವ ಸಂಘಟನೆಗಳು ನಂತರ ಇಳಿಯುವುದು ಹಣ ಮಾಡಲು ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಇದಕ್ಕೆ ತಾಜಾ ಉದಾಹರಣೆ ಬನಶಂಕರಿ ಕನಕಪುರ ರಸ್ತೆಯಲ್ಲಿ ನಡೆದಿರುವ ಘಟನೆ.
ರೋಲ್ ಕಾಲ್ ಸಂಘಟನೆ
ಸಮಾಜ ಸೇವೆ ಮಾಡ್ತೀವಿ ಎಂದು ಬೊಬ್ಬೆ ಹೊಡೆಯುವ ಕರ್ನಾಟಕ ಯುವ ರಕ್ಷಣಾ ವೇದಿಕೆಯ ಅಸಲಿ ಮುಖ ಬಯಲಾಗಿದೆ. ನಸ್ಮಾ ಬಿಸ್ವಾಸ್ ಎಂಬ ಮಹಿಳೆಯನ್ನ ಬನಶಂಕರಿಯ ಕನಕಪುರ ರಸ್ತೆಯಲ್ಲಿರುವ ಅಭಿಮಾನಿ ಲಾಡ್ಜ್ ಗೆ ಕಳುಹಿಸಿದ ಈ ಸಂಘಟನೆಯ ಹುಡುಗರು ಬಳಿಕ ನಿನ್ನೆ ಮದ್ಯಾಹ್ನ ತನ್ನ ತಂಡದೊಂದಿಗೆ ಲಾಡ್ಜ್ ಗೆ ಬಂದಿದ್ದಾರೆ. ಬಂದವರೆ ತಡ ಹುಡುಗಿ ಇದ್ದ ರೂಮಿಗೆ ಹೋಗಿ ಅಲ್ಲಿನ ರೂಮ್ ಬಾಯ್ ಗೆ ಥಳಿಸಿ ಬಲವಂತವಾಗಿ ಬಟ್ಟೆ ಬಿಚ್ಚಿಸಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬಂತೆ ಬಿಂಬಿಸಲು ಪ್ರಯತ್ನಿಸಿದ್ದಾರೆ.
ಇನ್ನು, ಈ ಅಭಿಮಾನಿ ಲಾಡ್ಜ್ ನ ಮಾಲೀಕರಿಗೆ ಈ ರೀತಿ ಬ್ಲಾಕ್ ಮೇಲ್ ಮಾಡಿ 2 ಲಕ್ಷಕ್ಕೆ ಈ ಕರ್ನಾಟಕ ಯುವ ರಕ್ಷಣಾ ವೇದಿಕೆ ಡಿಮ್ಯಾಂಡ್ ಮಾಡಿದೆ. ಯಾವಾಗ ಈ ರೀತಿ ಹಣ ಮಾಡಲು ಅಂತ ಈ ಸಂಘಟನೆಗಳು ಇಳಿದವೋ ಆಗ ಲಾಡ್ಜ್ ಮಾಲೀಕರ ಕೋಪವೂ ನೆತ್ತಿಗೇರಿತ್ತು. ರೊಚ್ಚಿಗೆದ್ದ ಲಾಡ್ಜ್ ಮಾಲೀಕರು ಸಂಘಟನೆ ಹೆಸರಲ್ಲಿ ದಂಧೆ ಮಾಡುತ್ತಿದ್ದ ಸುನೀಲ್ ಎಂಬಾತನಿಗೆ ಸರಿಯಾಗಿ ಗೂಸ ಕೊಟ್ಟಿದ್ದಾರೆ.
ಸಮಾಜ ಸೇವೆ ಮಾಡ್ತೀವಿ ಎಂದು ಹೇಳಿಕೊಂಡು ಸಂಘಟನೆಗಳು ದಂಧೆಗೆ ಇಳಿದಿರುವುದನ್ನು ನೋಡಿದರೆ ಇವರು ಯಾವ ಸಮಾಜ ಸೇವೆ ಮಾಡುತ್ತಾರೆ ಎನ್ನುವ ಅನುಮಾನ ಕಾಡುತ್ತದೆ. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.