
ಬೆಂಗಳೂರು/ ಮಡಿಕೇರಿ : ಭಾರಿ ಮಳೆಯಿಂದ ತೊಂದರೆಗೊಳಗಾಗಿರುವ ಕೇರಳ ರಾಜ್ಯಕ್ಕೆ ಕೇಂದ್ರ ಸರ್ಕಾರ .500 ಕೋಟಿ ರು. ನೀಡಿದ್ದು, ಕರ್ನಾಟಕಕ್ಕೆ ಕನಿಷ್ಠ .100 ಕೋಟಿಗಳನ್ನಾದರೂ ಘೋಷಿಸಬೇಕಿತ್ತು. ಈ ಬಗ್ಗೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಡಾ.ಪರಮೇಶ್ವರ್ ತಿಳಿಸಿದ್ದಾರೆ.
ಅಲ್ಲದೆ, ಜಿಲ್ಲೆಯಲ್ಲಿ ಪ್ರವಾಹ ಹಾಗೂ ಭೂ ಕುಸಿತದಿಂದ ಸೂರು ಕಳೆದುಕೊಂಡವರಿಗೆ ರಾಜ್ಯ ಸರ್ಕಾರ ಪ್ರಿ ಫ್ಯಾಬ್ರಿಕೇಟೆಡ್ (ಸಿದ್ಧಪಡಿಸಿದ) ಮನೆ ನಿರ್ಮಿಸಿ ನೀಡಲು ನಿರ್ಧರಿಸಿದೆ ಎಂದು ಹೇಳಿದರು.
ಕೊಡಗು ಪರಿಹಾರ ಕುರಿತು ಸೋಮವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅನಂತರ ಮಡಿಕೇರಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ ಪರಮೇಶ್ವರ್ ಅವರು ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಈ ವಿವರ ನೀಡಿದರು.
ರಾಜ್ಯ ಸರ್ಕಾರವು ಪ್ರಿ ಫ್ಯಾಬ್ರಿಕೇಟೆಡ್ (ಸಿದ್ಧಪಡಿಸಿದ) ಮನೆಗಳ ನಿರ್ಮಾಣ ಕಾರ್ಯವನ್ನು ಮಳೆ ನಿಂತ ಕೂಡಲೇ ಪ್ರಾರಂಭಿಸಲಿದೆ. ಆಸ್ತಿ ಕಳೆದುಕೊಂಡ ಸಂತ್ರಸ್ತರ ನೆರವಿಗೆ ಸರ್ಕಾರ ಧಾವಿಸಲಿದೆ ಎಂದು ಭರವಸೆ ನೀಡಿದರು.
ಮಳೆಯಿಂದ ಕೊಡಗು ಜಿಲ್ಲೆಗೆ ಸಾಕಷ್ಟುನಷ್ಟವಾಗಿದೆ. ಮೊದಲು ಜಿಲ್ಲೆಯಲ್ಲಿ ರಸ್ತೆ ಸಂಪರ್ಕ ಕಲ್ಪಿಸುವ ಕೆಲಸ ಮಾಡಬೇಕಾಗುತ್ತದೆ, ಸಂತ್ರಸ್ತರಿಗೆ ಒಂದು ತಿಂಗಳೊಳಗೆ ಮನೆ ನಿರ್ಮಿಸಿಕೊಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಜಾಗ ಗುರುತಿಸಲು ಈಗಾಗಲೇ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ. ಈ ಕುರಿತು ನಿರ್ಧಾರ ಕೈಗೊಳ್ಳಲು ಜಿಲ್ಲಾಧಿಕಾರಿಗೆ ಸಂಪೂರ್ಣ ಅಧಿಕಾರ ನೀಡಿದೆ. ಮಳೆ ಪರಿಹಾರ ಕಾರ್ಯಗಳಿಗಾಗಿ ಈಗಾಗಲೇ 26 ಕೋಟಿ ರು. ಜಿಲ್ಲಾಡಳಿತದ ಬಳಿ ಇದೆ ಎಂದು ಅವರು ವಿವರಿಸಿದರು.
ಮಡಿಕೇರಿ ನಗರದ ಚಾಮುಂಡೇಶ್ವರಿ ನಗರದ ಗುಡ್ಡ ಕುಸಿತದ ಸ್ಥಳಗಳನ್ನು ವೀಕ್ಷಿಸಿದ ಡಾ.ಜಿ.ಪರಮೇಶ್ವರ್, ಬಳಿಕ ಮೈತ್ರಿ ಸಭಾಂಗಣದಲ್ಲಿ ತೆರೆಯಲಾಗಿರುವ ಪರಿಹಾರ ಕೇಂದ್ರಕ್ಕೂ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆಯನ್ನು ಆಲಿಸಿದರು. ಜಿಲ್ಲಾಧಿಕಾರಿ ವಿ.ಐ.ಶ್ರೀವಿದ್ಯಾ ಮತ್ತಿತರರು ಹಾಜರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.