ಈ ಊರಲ್ಲಿ ಉಳಿದಿದ್ದು ಕೇವಲ ಸ್ಮಶಾನ ಮೌನ

By Web DeskFirst Published Aug 21, 2018, 9:44 AM IST
Highlights
  • ಸೋಮವಾರಪೇಟೆಯ ಇಡಗೂಡ್ಲು ಗ್ರಾಮದ ಕಣ್ಣೀರ ಕತೆ ಇದು  
  • ಪ್ರವಾಹದಿಂದ ಕೊಚ್ಚಿಹೋದ ಗ್ರಾಮದ ಜನರ ಬದುಕು
  • ಕೊಡಗು ಜಿಲ್ಲೆಯ ಸೋಮವಾರಪೇಟೆಯ ಪುಟ್ಟ ಊರು ಇಡಗೂಡ್ಲುವಿನಲ್ಲಿ ಸ್ಮಶಾನ ಮೌನ 

ಕೊಡಗು (ಆ. 21): ಆ ಊರಲ್ಲಿ ಈಗ ಏನೂ ಉಳಿದಿಲ್ಲ, ನೀವು ಮನೆ ತೋರಿಸಿ ಅಂದ್ರೂ ನಾವೇ ಗುರುತು ಹಿಡಿಯಲಾಗದಷ್ಟು ಸರ್ವನಾಶವಾಗಿದೆ ನಮ್ಮ ಊರು. ಇದ್ದ ಮನೆಗಳೆಲ್ಲ ಕುಸಿದಿವೆ, ಮನೆ-ತೋಟವನ್ನೆಲ್ಲ ಗುಡ್ಡದ ಮಣ್ಣು, ಕೆಸರು ಆವರಿಸಿಕೊಂಡಿದೆ!

ಕೊಡಗು ಜಿಲ್ಲೆಯ ಸೋಮವಾರಪೇಟೆಯ ಪುಟ್ಟ ಊರು ಇಡಗೂಡ್ಲು ಗ್ರಾಮದ ಜನರು ಕಣ್ಣೀರು ಹಾಕಿಕೊಂಡು ಹೇಳುವ ಕಥೆ ಇದು. ವಾರದ ಹಿಂದೆ ಇಲ್ಲಿ ಎಲ್ಲವೂ ಸರಿಯಿತ್ತು. ಅಲ್ಲಿ ಇಲ್ಲಿ ಕೂಲಿ, ನಾಲಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ
ಬಡವರೇ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದ ಊರಿದು. ಗುಡ್ಡದಿಂದ ಆವೃತವಾಗಿರುವ ಈ ಪುಟ್ಟ ಊರಿನಲ್ಲಿ 25 ರಿಂದ 30 ಕುಟುಂಬಗಳು ನೆಲೆಸಿದ್ದವು. ಈಗ ಈ ಎಲ್ಲ ಕುಟುಂಬಗಳು ಅಕ್ಷರಶಃ ಬೀದಿಗೆ ಬಂದಿವೆ.

Latest Videos

ಸೂರು ಕಳೆದುಕೊಂಡು ನಿರಾಶ್ರಿತರ ಕೇಂದ್ರದಲ್ಲಿ ಕಣ್ಣೀರು ಹಾಕಿಕೊಂಡು ಕೂತಿವೆ. ಮಹಾ ಮಳೆ, ಅದರ ಬೆನ್ನಲ್ಲೇ ಶುರುವಾದ ಗುಡ್ಡ ಕುಸಿತ ಈ ಪುಟ್ಟ ಊರಿನ ಚಿತ್ರಣವನ್ನೇ ಬದಲಾಯಿಸಿ ಬಿಟ್ಟಿತು. ಒಂದು ಕಡೆ ನೆರೆ, ಇನ್ನೊಂದು ಕಡೆ ಗುಡ್ಡಕುಸಿತ, ಅದರ ಬೆನ್ನಲ್ಲೇ ಗುಡ್ಡದ ಮೇಲಿಂದ ಹರಿದು ಬಂದ ಕೆಸರುಮಿಶ್ರಿತ ನೀರು ಈ ಪುಟ್ಟ ಊರಿನ ಮನೆಗಳನ್ನೆಲ್ಲ ಆಹುತಿ ತೆಗೆದುಕೊಂಡಿತು.

ಗ್ರಾಮದ ಬಹುತೇಕ ಎಲ್ಲ ಮನೆಗಳಿಗೂ ಹಾನಿ ಮಾಡಿತು. ‘‘ಈಗ ನೀವು ಬಂದು ಊರು ತೋರಿಸಿ ಅಂದರೂ ನಾವೇ ಗುರುತಿಸಲಾಗದಷ್ಟರ ಮಟ್ಟಿಗೆ ಊರು ಹಾನಿಗೀಡಾಗಿದೆ’’ ಎನ್ನುತ್ತಾರೆ ಗ್ರಾಮಸ್ಥರು. ಜಲ ಪ್ರಳಯಕ್ಕೆ ತುತ್ತಾಗಿರುವ ಈ ಗ್ರಾಮದ ಮನೆಗಳ ಅವಶೇಷಗಳು ನೀರಿನ ರಭಸಕ್ಕೆ ಕಿಲೋಮೀಟರ್‌ಗೂ ದೂರದಲ್ಲಿ ಚೆಲ್ಲಾಪಿಲ್ಲಿಯಾಗಿ ಚದುರಿ ಬಿದ್ದಿವೆ. ಗ್ರಾಮವಿದ್ದ ಸ್ಥಳದಲ್ಲಿ ಸ್ಮಶಾನ ಮೌನ ಆವರಿಸಿದೆ.

ಕೊಚ್ಚಿ ಹೋದ ಬದುಕು:

ಇಡಗೂಡ್ಲು ಅಷ್ಟೇ ಅಲ್ಲ, ಕೊಡಗಿನ ಸೋಮವಾರ ಪೇಟೆ ತಾಲೂಕು ಶುಂಠಿಕೊಪ್ಪ ಸಮೀಪದ ಮಾದಾ ಪುರ, ಇಟಗೊಡ್ಲು, ಮಕ್ಕಂದೂರು, ಮುಕ್ಕೋಡ್ಲು, ಕಾಡಂಜಿ, ಹಟ್ಟಿಹೊಳೆ, ಕಾಂಡನಕೊಲ್ಲಿ ಸೇರಿದಂತೆ ಅನೇಕ ಗಿರಿಜನ ಹಾಡಿಗಳು, ಕಾಲೋನಿಗಳ ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಎಸ್ಟೇಟ್‌ಗಳು, ಕೆರೆ ಕಟ್ಟೆಗಳು, ಸಣ್ಣಪುಟ್ಟ ಕಾಲುವೆಗಳು, ಕೃಷಿ ಹೊಂಡಗಳು, ರಸ್ತೆಗಳು, ಆಟದ ಮೈದಾನಗಳು, ಗುಡಿಗೋಪುರಗಳು ಗುರುತಿಸಲಾಗದಷ್ಟು ಹಾನಿಗೀಡಾಗಿವೆ.

ಅಲ್ಲಲ್ಲಿ ನಿಂತಿರುವ ಪ್ರವಾಹದ ನೀರಿನಲ್ಲಿ ಪಕ್ಷಿ, ಪ್ರಾಣಿಗಳ ಶವಗಳು, ಗೂಡುಗಳು ತೇಲುತ್ತಿರುವ ದೃಶ್ಯ ಸಾಮಾನ್ಯವಾಗಿದೆ.  

-ಧರ್ಮಾಪುರ ನಾರಾಯಣ್/ ಪಿ ಎನ್ ಸುಬ್ರಹ್ಮಣ್ಯ 

click me!