
ಹುಬ್ಬಳ್ಳಿ (ಆ. 20): ರೈಲು ವಿಳಂಬದಿಂದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ನೇಮಕ ಪರೀಕ್ಷೆಯಿಂದ ವಂಚಿತರಾಗಿದ್ದ ಅಭ್ಯರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ದೊರೆತಿದೆ. ಆದರೆ ಇದಕ್ಕಾಗಿ ರೈಲಿನ ಟಿಕೆಟ್‌ನೊಂದಿಗೆ ಆ.30ರೊಳಗೆ ಪ್ರತ್ಯೇಕ ಅರ್ಜಿ ಸಲ್ಲಿಸಬೇಕಿದೆ.
ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೇದೆ (ಸಿಎಆರ್/ಡಿಎಆರ್) ಹುದ್ದೆಗೆ ಆ.5 ರಂದು ಬೆಂಗಳೂರಲ್ಲಿ ಲಿಖಿತ ಪರೀಕ್ಷೆ ನಿಗದಿಯಾಗಿತ್ತು. ಆದರೆ ತಾಂತ್ರಿಕ ಸಮಸ್ಯೆಯಿಂದಾಗಿ ಅಂದು ಕೊಲ್ಲಾಪುರದಿಂದ ಹೊರಟಿದ್ದ ಚೆನ್ನಮ್ಮ ಎಕ್ಸ್‌ಪ್ರೆಸ್ ರೈಲು ಬೆಳಗ್ಗೆ 6 ಕ್ಕೆ ಬೆಂಗಳೂರು ತಲುಪುವ ಬದಲು ಸಂಜೆ 6 ಕ್ಕೆ ಬೆಂಗಳೂರು ತಲುಪಿತ್ತು. ಈ ಹಿನ್ನೆಲೆಯಲ್ಲಿ ಮತ್ತೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವುದಾಗಿ ಪೊಲೀಸ್ ಇಲಾಖೆ ಭರವಸೆ ನೀಡಿತ್ತು. ಅದರಂತೆ ಇದೀಗ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಿದೆ.
ಇದಕ್ಕಾಗಿ ಪ್ರತ್ಯೇಕ ಅರ್ಜಿ ನಮೂನೆ ಸಿದ್ಧಪಡಿಸಿದೆ. ಅದರಲ್ಲಿ ಅಭ್ಯರ್ಥಿ ತನ್ನ ಹೆಸರು, ಈ ಹಿಂದೆ ಸಲ್ಲಿಸಿದ ಅರ್ಜಿಯ ಸಂಖ್ಯೆ, ರೋಲ್ ಸಂಖ್ಯೆ, ಪರೀಕ್ಷಾ ಕೇಂದ್ರ, ಪ್ರಯಾಣದ ದಿನಾಂಕ, ರೈಲ್ವೆ ಟಿಕೆಟ್‌ನ ಸಂಖ್ಯೆಗಳನ್ನು ಬರೆದು ಆ.30 ರೊಳಗೆ ಸಲ್ಲಿಸಬೇಕು. ಜತೆಗೆ ಆ.4 ರಂದು ಚೆನ್ನಮ್ಮ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಂಚರಿಸಿದ ಸಾಕ್ಷಿಯಾಗಿ ಟಿಕೆಟ್‌ನ ಪ್ರತಿಯನ್ನು ಲಗತ್ತಿಸಿ ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ನೇಮಕಾತಿ ಕಚೇರಿ, ಕಾರ್ಲ್‌ಟನ್ ಭವನ, ಅರಮನೆ ರಸ್ತೆ, ಬೆಂಗಳೂರು ಈ ವಿಳಾಸಕ್ಕೆ ಕಳಿಸಬೇಕು. ಆ ಬಳಿಕ ಪ್ರತ್ಯೇಕ ದಿನಾಂಕ ನಿಗದಿ ಪಡಿಸಿ ಪರೀಕ್ಷಾರ್ಥಿಗಳಿಗೆ ತಿಳಿಸಲಾಗುವುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.