ಕೊಡಗು: ಮನೆ ಕಳೆದುಕೊಂಡವರಿಗೆ ಕರವೇ 30 ಲಕ್ಷ ನೆರವು

By Web DeskFirst Published Aug 20, 2018, 8:01 AM IST
Highlights

ಪ್ರವಾಹ ಪೀಡಿತ ಕೊಡಗಿನ ಜನರ ನೆರವಿಗೆ ಮುಂದಾಗಿರುವ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಸುಮಾರು 30 ಲಕ್ಷ ರು.ಗಳ ಆರ್ಥಿಕ ನೆರವು ನೀಡಲು ತೀರ್ಮಾನಿಸಿದೆ.

ಬೆಂಗಳೂರು (ಆ. 20): ಪ್ರವಾಹ ಪೀಡಿತ ಕೊಡಗಿನ ಜನರ ನೆರವಿಗೆ ಮುಂದಾಗಿರುವ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಸುಮಾರು 30 ಲಕ್ಷ ರು.ಗಳ ಆರ್ಥಿಕ ನೆರವು ನೀಡಲು ತೀರ್ಮಾನಿಸಿದೆ.

ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರ ನೇತೃತ್ವದಲ್ಲಿ ನಡೆದ ಸಂಘಟನೆಯ ಜಿಲ್ಲಾಧ್ಯಕ್ಷರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯದ 30 ಜಿಲ್ಲೆಗಳಿಂದ ತಲಾ ಒಂದು ಲಕ್ಷ ರು.ಗಳಂತೆ ಕರವೇ ಕಾರ್ಯಕರ್ತರು ಸಂಗ್ರಹಿಸಿದ್ದಾರೆ. ಮನೆ ಕಳೆದುಕೊಂಡು ನಿರಾಶ್ರಿತರಾಗಿರುವ ಕೊಡಗಿನ ಕನ್ನಡಿಗರಿಗೆ ಈ ಹಣವನ್ನು ವಿತರಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಈ ಕುರಿತು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಅನೇಕ ಸಂದರ್ಭದಲ್ಲಿ ಸಂಘಟನೆ ಸಂಕಷ್ಟಕ್ಕೊಳಗಾಗಿರುವ ಕನ್ನಡಿಗರ ನೆರವಿಗೆ ಸ್ಪಂದಿಸಿದೆ. ಕಾರ್ಗಿಲ್ ಯುದ್ಧ, 2009 ರಲ್ಲಿ ಉತ್ತರ ಕರ್ನಾಟಕ ನೆರೆ ಹಾವಳಿಯಿಂದ ಸಾವನ್ನಪ್ಪಿದ 205 ಮಂದಿ ಕುಟುಂಬಕ್ಕೆ ಮತ್ತು ರಾಜ್ ಕುಮಾರ್ ನಿಧನ ಹೊಂದಿದ ಸಂದರ್ಭದಲ್ಲಿ ಆದ ಗೋಲಿಬಾರ್‌ನಿಂದ ಪ್ರಾಣ ಕಳೆದುಕೊಂಡ ಕುಟುಂಬದವರಿಗೆ ಹಾಗೂ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಸಂಘಟನೆ ಆರ್ಥಿಕ ನೆರವು ನೀಡಿದೆ ಎಂದರು.

ಇದೀಗ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿ ನಿರಾಶ್ರಿತರಾಗಿರುವ ಕೊಡಗಿನ ಕನ್ನಡಿಗರ ಜತೆಗೆ ನಾವಿದ್ದೇವೆ. ಪ್ರತಿ ಜಿಲ್ಲೆಯಿಂದ ತಲಾ ಒಂದು ಲಕ್ಷದಂತೆ 30 ಲಕ್ಷ ರು.ಗಳನ್ನು ನಿರಾಶ್ರಿತರಿಗಾಗಿ ಸಂಗ್ರಹಿಸಿದ್ದೇವೆ. ಈ ಹಣವನ್ನು ಮನೆ ಕಳೆದುಕೊಂಡು ನಿರಾಶ್ರಿತರಾಗಿರುವವರಿಗೆ ಕೊಡಲು ಇಂದಿನ ಸಭೆಯಲ್ಲಿ ತೀರ್ಮಾನಿಸಿದೆ ಎಂದು ಹೇಳಿದರು. ಕೊಡಲು ಜಿಲ್ಲಾಡಳಿತದಿಂದ ಮನೆ ಕಳೆದುಕೊಂಡಿರುವವರ ಮಾಹಿತಿ ಪಡೆಯಲಾಗುವುದು. ಎಷ್ಟು ಮಂದಿ ಮನೆ ಕಳೆದುಕೊಂಡಿದ್ದಾರೆ ಎಂಬುದು ತಿಳಿದ ಬಳಿಕ ಈಗಾಗಲೇ ಸಂಗ್ರಹಿಸಿರುವ ಹಣವನ್ನು ತೀವ್ರಹಾನಿಗೊಳಗಾಗಿರುವ ಕುಟುಂಬಗಳಿಗೆ ವಿತರಿಸಲು ನಿರ್ಧರಿಸಲಾಗಿದೆ. ಅಲ್ಲಿನ ಜನರಿಗೆ ವಸ್ತು ರೂಪದ ನೆರವು ಸಿಗುತ್ತಿದ್ದು, ಕರವೇ ಹಣದ ರೂಪದಲ್ಲಿ ನೆರವು ನೀಡಲು ನಿರ್ಧರಿಸಿದೆ ಎಂದು ನಾರಾಯಣಗೌಡ ಮಾಹಿತಿ ನೀಡಿದರು.  

click me!