ಆರ್'ಬಿಐ ರಿಪೋ ದರ ಇಳಿಕೆ; ಗರಿಗೆದರಿದೆ ಮಾರುಕಟ್ಟೆ; ಕಡಿಮೆಯಾಗಲಿದೆ ಬ್ಯಾಂಕ್ ಬಡ್ಡಿ ದರ

By Web DeskFirst Published Oct 4, 2016, 11:19 AM IST
Highlights

ನವದೆಹಲಿ(ಅ. 04): ಆರ್'ಬಿಐ ನೀತಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲವೆಂದು ನಿರೀಕ್ಷಿಸಿದ್ದವರಿಗೆ ಇಂದು ಅಚ್ಚರಿಯ ಸುದ್ದಿ ಬಂದಿದೆ. ಆರ್'ಬಿಐ ತನ್ನ ರಿಪೋ ದರದಲ್ಲಿ 25 ಬೇಸಿಸ್ ಪಾಯಿಂಟ್ ಕಡಿಮೆ ಮಾಡಿದೆ. ಅಂದರೆ, 6.5% ದರವಿದ್ದದ್ದನ್ನು 6.25% ಗೆ ಇಳಿಸಲಾಗಿದೆ. ಇದು ಕಳೆದ 6 ವರ್ಷದಲ್ಲೇ ಅತ್ಯಂತ ಕಡಿಮೆ ದರವಾಗಿದೆ.

ಹೊಸ ಹಾದಿ:
ಆರ್'ಬಿಐನ ನೀತಿ ನಿರ್ಧಾರದ ವಿಚಾರದಲ್ಲಿ ಹೊಸ ಹಾದಿ ತುಳಿಯಲಾಗಿದೆ. ಆರು ಸದಸ್ಯರ ಮಾನಿಟರಿ ಪಾಲಿಸಿ ಕಮಿಟಿ(ಎಂಪಿಸಿ)ಯನ್ನು ರಚಿಸಿ ಅದರ ಮೂಲಕ ಈ ಬಾರಿ ರಿಸರ್ವ್ ಬ್ಯಾಂಕ್ ನೀತಿಯನ್ನು ರೂಪಿಸಲಾಗಿದೆ. ಆರ್'ಬಿಐನ ಇತಿಹಾಸದಲ್ಲಿ ಇಂಥದ್ದು ಇದೇ ಮೊದಲು. ಈ ಮೊದಲಾದರೆ ಆರ್'ಬಿಐ ಗವರ್ನರ್ ಅವರೇ ವ್ಯಕ್ತಿಗತವಾಗಿ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಈ ಬಾರಿ ಆರು ಸದಸ್ಯರ ಕಮಿಟಿಯು ಒಮ್ಮತದಿಂದ ರಿಪೋ ದರ ಇಳಿಸುವ ನಿರ್ಧಾರ ಕೈಗೊಂಡಿದೆ. ಹೊಸ ಗವರ್ನರ್ ಊರ್ಜಿತ್ ಪಟೇಲ್ ಅವರು ಈ ಕಮಿಟಿಯಲ್ಲಿ ಓರ್ವ ಸದಸ್ಯರಾಗಿದ್ದಾರೆ.

ರಿಪೋ ಇಳಿಕೆಯಿಂದ ಏನಾಗುತ್ತದೆ?
ರಿಪೋ ದರವೆಂದರೆ ವಾಣಿಜ್ಯ ಬ್ಯಾಂಕುಗಳಿಗೆ ರಿಸರ್ವ್ ಬ್ಯಾಂಕ್ ನೀಡುವ ಹಣದ ದರವಾಗಿದೆ. ಇದು ಕಡಿಮೆಯಾದರೆ ವಾಣಿಜ್ಯ ಬ್ಯಾಂಕುಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಆರ್'ಬಿಐನ ರಿಪೋ ದರದೊಂದಿಗೆ ವಾಣಿಜ್ಯ ಬ್ಯಾಂಕುಗಳ ಬಡ್ಡಿ ದರವೂ ಕಡಿಮೆಯಾಗುತ್ತದೆ. ಸಾಲ ಪಡೆದ ಗ್ರಾಹಕರ ಮೇಲಿನ ಬಡ್ಡಿ ಹೊರೆಯೂ ಕಡಿಮೆಯಾಗುತ್ತದೆ.

ಗರಿಗೆದರಿದ ಮಾರುಕಟ್ಟೆ:
ಆರ್'ಬಿಐ ರಿಪೋ ದರ ಕಡಿಮೆ ಮಾಡಿ ತನ್ನ ನೀತಿ ಪ್ರಕಟಿಸಿದ ಬೆನ್ನಲ್ಲೇ ಷೇರು ಮಾರುಕಟ್ಟೆ ಗರಿಗೆದರಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕ ಸಾಕಷ್ಟು ಹೆಚ್ಚಳ ಕಂಡಿವೆ.

click me!