
ಬೆಂಗಳೂರು (ಅ.04): ಹೊರನಾಡ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಆಶಯದಿಂದ ಅ.8, 9ರಂದು ದೆಹಲಿಯಲ್ಲಿ ಪ್ರಥಮ ಬಾರಿಗೆ ಹೊರನಾಡ ಕನ್ನಡಿಗರ ಸಮಾವೇಶ ಏರ್ಪಡಿಸಲಾಗಿದೆ.
ಇದರಲ್ಲಿ ಗೋವಾ, ಮಹಾರಾಷ್ಟ್ರ, ಮಧ್ಯಪ್ರದೇಶ ಮುಂತಾದ 14 ರಾಜ್ಯಗಳಲ್ಲಿರುವ ಅಂದಾಜು 600 ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ಹೇಳಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘‘ದೆಹಲಿ ಕರ್ನಾಟಕ ಸಂಘದ ಆವರಣದಲ್ಲಿ ನಡೆಯಲಿರುವ ಈ ಸಮಾವೇಶಕ್ಕೆ ಛತ್ತೀಸ್ಗಡದ ಅಮರ್‌ಕಂಟಕ್‌ನಲ್ಲಿರುವ ಇಂದಿರಾ ಗಾಂಧಿ ರಾಷ್ಟ್ರೀಯ ಬುಡಕಟ್ಟು ವಿವಿಯ ಕುಲಪತಿಯಾಗಿರುವ ಕನ್ನಡಿಗರಾದ ಡಾ.ತೇಜಸ್ವಿ ಕಟ್ಟೀಮನಿ ವಿಶೇಷ ಆಸಕ್ತಿಯಿಂದ ಸಮಾವೇಕ್ಕೆ ವಿವಿಯು ಧನ ಸಹಾಯದ ಸಹಯೋಗ ನೀಡಿದೆ. ಸಮಾವೇಶದಲ್ಲಿ ಮಂಡನೆಯಾಗುವ ವಿಚಾರಗಳನ್ನು ಪುಸ್ತಕ ರೂಪದಲ್ಲಿ ತರುವ ಆಲೋಚನೆ ಇದೆ'' ಎಂದು ಅವರು ಹೇಳಿದ್ದಾರೆ.
‘‘ಸಮ್ಮೇಳನದಲ್ಲಿ ಆಹ್ವಾನಿತರಾಗಿ ಪಾಲ್ಗೊಳ್ಳಲಿರುವ 23 ಸಾಹಿತಿ/ಕಲಾವಿದರನ್ನು ಕರ್ನಾಟಕ ಸರ್ಕಾರ ರಾಜ್ಯ ಅತಿಥಿಗಳೆಂದು ಪರಿಗಣಿಸಿದ್ದು, ಅವರೆಲ್ಲರ ಊಟ, ವಸತಿಗಳಿಗೆ ಕರ್ನಾಟಕ ಭವನದಲ್ಲಿ ವ್ಯವಸ್ಥೆ ಮಾಡಲಾಗಿದೆ. 40 ವರ್ಷಗಳ ಹಿಂದೆ ಜಿ.ಪಿ. ರಾಜರತ್ನಂ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ 50ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದ್ದನ್ನು ಹೊರತುಪಡಿಸಿದರೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಇಂಥ ಸಮಾವೇಶ ನಡೆಯುತ್ತಿರುವುದು ಇದೇ ಮೊದಲು'' ಎಂದು ಬಳಿಗಾರ್ ಹೇಳಿದ್ದಾರೆ.
‘‘ಭಾಷಾವಾರು ಪ್ರಾಂತ ರಚನೆ, ಶಿಕ್ಷಣ ಮಾಧ್ಯಮ, ಜಲ ವಿವಾದಗಳು, ಹೊರನಾಡ ಕನ್ನಡಿಗರ ಸಮಸ್ಯೆಗಳು, ರಾಷ್ಟ್ರೀಯ ಉದ್ಯೋಗ ನೀತಿ, ವರ್ತಮಾನದ ತಲ್ಲಣಗಳು ವಿಷಯಗಳ ಕುರಿತ ಗೋಷ್ಠಿಗಳಿವೆ. ಜತೆಗೆ ಕವಿಗೋಷ್ಠಿ, ಜನಪದ ಗೀತೆಗಳ ಗಾಯನ ಗೋಷ್ಠಿ, ಭರತನಾಟ್ಯ ಪ್ರದರ್ಶನ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ'' ಎಂದು ಅವರು ವಿವರಿಸಿದ್ದಾರೆ.
ಸಾಹಿತ್ಯ ಸಮ್ಮೇಳನಕ್ಕೂ ಸಿದ್ಧತೆ: ‘‘ಏತನ್ಮಧ್ಯೆ ಡಿಸೆಂಬರ್‌ನಲ್ಲಿ ರಾಯಚೂರಿನಲ್ಲಿ ನಡೆಯಲಿರುವ 82ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಸಿದ್ಧತೆಗಳು ನಡೆದಿದ್ದು, ಅಲ್ಲಿ ನಡೆಯಬೇಕಾಗಿರುವ ಅಗತ್ಯ ಕಾಮಗಾರಿಗಳಿಗೆ ಸರ್ಕಾರ ಈಗಾಗಲೇ .4 ಕೋಟಿ ಬಿಡುಗಡೆ ಮಾಡಿದೆ. ಪ್ರತಿದಿನವೂ 60ರಿಂದ 70 ಸಾವಿರ ಜನ ಪಾಲ್ಗೊಳ್ಳಲಿರುವ ಈ ಸಮ್ಮೇಳನಕ್ಕೆ ಅಗತ್ಯವಿರುವ ಸಂಪನ್ಮೂಲವನ್ನು ವಿವಿಧ ಮೂಲಗಳಿಂದ ಸಂಗ್ರಹಿಸಲು ಪ್ರಯತ್ನಿಸಲಾಗುತ್ತಿದೆ'' ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.