
ಬಳ್ಳಾರಿ: ಯುನೆಸ್ಕೋ ವಿಶ್ವಪರಂಪರೆಯ ತಾಣವಾಗಿರುವ ಹಂಪಿಯಲ್ಲಿ ಭಾರತೀಯ ಪುರಾತತ್ವ ಇಲಾಖೆ ಉತ್ಖನನ ಕಾರ್ಯವನ್ನು ನಡೆಸುತ್ತಿದೆ. ಈ ಉತ್ಖನನ ವೇಳೆ ಮಾನವ ಮತ್ತು ಹಾವಿನ ಲಕ್ಷಣಗಳನ್ನು ಹೊಂದಿರುವ ಸ್ತ್ರೀ ರಕ್ಷಕ ರೂಪದ ನಾಗಿಣಿ ಶಿಲ್ಪ ಹಾಗೂ ಗಡುರ ಶಿಲ್ಪ ಪತ್ತೆಯಾಗಿದೆ. ಸದ್ಯ ಈ ವಿಗ್ರಹಗಳ ಕುರಿತು ಹೆಚ್ಚಿನ ಅಧ್ಯಯನ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ.
ನಾಗಿಣಿ ಶಿಲ್ಪ ಸುಮಾರು30 ಸೆಂ.ಮೀ ಅಗಲ, 51 ಸೆಂ.ಮೀ ಉದ್ದವಿದೆ. ಗರುಡ ಶಿಲ್ಪಕ್ಕೆ ತಲೆ ಇಲ್ಲದೆ ಸಿಕ್ಕಿದ್ದು, ಇದು 32 ಸೆಂ.ಮೀ ಅಗಲ, 37 ಸೆಂ.ಮೀ ಉದ್ದವಿದೆ. ಸದ್ಯ ಪತ್ತೆಯಾಗಿರುವ ಶಿಲ್ಪಗಳನ್ನು ಸರಿಯಾಗಿ ದಾಖಲಿಸಿ, ಅವುಗಳನ್ನನು ಸಂರಕ್ಷಣೆ ಮಾಡುವ ಕಾರ್ಯವನ್ನು ಅಧಿಕಾರಿಗಳು ಮಾಡಲಿದ್ದು, ಇದು ವಿಜಯನಗರ ಸಾಮ್ರಾಜ್ಯದ ಕುರಿತ ಇತಿಹಾಸ ಇನ್ನಷ್ಟು ಸಮೃದ್ಧಗೊಳಿಸುತ್ತದೆ.
ವಿಜಯನಗರ ಸಾಮ್ರಾಜ್ಯದ ಕಾಲ 14 ಮತ್ತು 15ನೇ ಶತಮಾನದ ಅತ್ಯಾಧುನಿಕ ನೀರು ನಿರ್ವಹಣೆ, ಹಿಂದೂ-ಜೈನ ಸಹಬಾಳ್ವೆ, ವಾಸ್ತುಕಲೆಯನ್ನು ಈ ಉತ್ಖನನಗಳು ಎತ್ತಿತೋರಿಸುತ್ತವೆ. ಈ ಹಿಂದಿನ ಉತ್ಖನನದ ವೇಳೆಯೂ ಪ್ರಾಚೀನ ಜೈನ ದೇವಾಲಯದ ಛಾವಣಿ, ಇಟ್ಟಿಗೆಗಳಿಂದ ನಿರ್ಮಾಣವಾಗಿದ್ದ ಕಟ್ಟಡದ ಭಾಗಗಳು ಪತ್ತೆಯಾಗಿತ್ತು. ಜೊತೆಗೆ ನಾಶಗೊಳಿಸಲಾಗಿದ್ದ ಆಳ್ವಾರ್ ವಿಗ್ರಹ, ಕಲ್ಲಿನ ಕಾಲುವೆ ಕೂಡ ಇತಿಹಾಸ ಆಸಕ್ತರ ಗಮನ ಸೆಳೆದಿದ್ದವು.
ಸದ್ಯ ಹಂಚಿ ಜೈನ ದೇಗುಲದ ಸಂಕೀರ್ಣದ ಸುತ್ತಮುತ್ತ ಹಾಗೂ ರಾಮ ದೇವಸ್ಥಾನ ಬಳಿ ಎಎಸ್‌ಐ ನಿರಂತರವಾಗಿ ಉತ್ಖನನ ನಡೆಸುತ್ತಿದ್ದು, ಈ ಬಗ್ಗೆ ಎಎಸ್‌ಐ ಹಂಪಿ ವೃತ್ತದ ಅಧೀಕ್ಷಕ ಪುರಾತತ್ವ ತಜ್ಞ ಕೆ ರಾಮಕೃಷ್ಣ ರೆಡ್ಡಿ ಮಾಹಿತಿ ಹಂಚಿಕೊಂಡಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಸದ್ಯ ಪತ್ತೆಯಾಗಿರುವ ಶಿಲ್ಪಗಳು ವಿವಿಧ ಧಾರ್ಮಿಕ ಮತ್ತು ಕಲಾ ಪರಂಪರೆಗಳನ್ನು ಪ್ರತಿನಿಧಿಸುತ್ತದೆ. ಶಿಲ್ಪಗಳ ಲಕ್ಷಣ, ಅವುಗಳು ಪತ್ತೆಯಾದ ಸ್ಥಳ ಬಗ್ಗೆ ವಿವರವಾದ ಅಧ್ಯಯನ ನಡೆಯಲಿದೆ. ಇವು ವಿಜಯನಗರ ಸಾಮ್ರಾಜ್ಯ ಕಾಲದ ಧಾರ್ಮಿಕ ಸಹಿಷ್ಣುತೆ, ವಾಸ್ತು ಶಿಲ್ಪ ಮತ್ತು ಸಾಂಸ್ಕೃತಿಕ ಸೌಹಾರ್ದತೆಯ ಬಗ್ಗೆ ದೊರೆತಿರುವ ಮಹತ್ವ ಸುಳಿವು ಎಂದು ಬಣ್ಣಿಸಿರುವ ರಾಮಕೃಷ್ಣ ರೆಡ್ಡಿ ಅವರು, ಇವುಗಳ ಇನ್ನಷ್ಟು ವಿವರವಾದ ಅಧ್ಯಯನ ಮಾಡಿ ಸುತ್ತಮುತ್ತಿನ ರಚನೆಗಳೊಂದಿಗೆ ಇರುವ ಸಂಬಂಧವನ್ನು ಅರ್ಥಮಾಡಿಕೊಂಡು ವಿವರಣೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಕರ್ನಾಟಕದ ಹಂಪಿ ವಿಜಯನಗರ ಸಾಮಾಜ್ಯದ ರಾಜಧಾನಿ ಆಗಿತ್ತು. ದಕ್ಷಿಣ ಭಾರತದ ಅತ್ಯಂತ ಪ್ರಬಲ ಸಾಮ್ರಾಜ್ಯಗಳಲ್ಲಿ ಒಂದಾಗಿರುವ ಇದನ್ನು ಕರ್ನಾಟ ಸಾಮ್ರಾಜ್ಯ ಎಂದು ಕರೆಯಲಾಗುತ್ತದೆ. ದೆಹಲಿ ಸುಲ್ತಾನರ ಆಕ್ರಣಗಳಿಂದ ದಕ್ಷಿಣ ಭಾರತವನ್ನು ರಕ್ಷಣೆ ಮಾಡುವಲ್ಲಿ ಈ ಸಾಮ್ರಾಜ್ಯ ಪ್ರಮುಖ ಪಾತ್ರವಹಿಸಿತ್ತು ಎಂದು ಇತಿಹಾಸ ತಜ್ಞರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.