
ನವದೆಹಲಿ(ಸೆ.5): ಅತ್ತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೈಲಾಶ್ ಮಾನಸ ಸರೋವರ ಯಾತ್ರೆ ಕೈಗೊಳ್ಳುತ್ತಿದ್ದಂತೇ ಕಾಂಗ್ರೆಸ್ ನಲ್ಲಿ ಏಕಾಏಕಿ ಬ್ರಾಹ್ಮಣ ಪ್ರೀತಿ ಉಕ್ಕಿ ಹರಿಯುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಪಕ್ಷದ ಮಾಧ್ಯಮ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಬಡ ಬ್ರಾಹ್ಮಣರಿಗಾಗಿ ಮೀಸಲಾತಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸುರ್ಜೆವಾಲಾ, ಕಾಂಗ್ರೆಸ್ ಪಕ್ಷದ ಬೆಳವಣಿಗೆಯಲ್ಲಿ ಬ್ರಾಹ್ಮಣ ಸಮುದಾಯದ ಪಾತ್ರ ಬಹಳ ಮಹತ್ವದ್ದಾಗಿದ್ದು, ಮುಂದಿನ ಲೋಕಸಭೆ ಚುನಾವಣೆ ಬಳಿಕ ಪಕ್ಷ ಅಧಿಕಾರಕ್ಕೆ ಬಂದರೆ ಬಡ ಬ್ರಾಹ್ಮಣರಿಗಾಗಿ ಶೇ.10 ರಷ್ಟು ಮೀಸಲಾತಿ ಕೊಡಲಾಗುವುದು ಎಂದು ಘೋಷಿಸಿದರು.
ಕಳೆದ ಲೋಕಸಭೆ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಅತೀಯಾದ ಓಲೈಕೆ ಪಕ್ಷದ ಹಿನ್ನಡೆಗೆ ಕಾರಣ ಎಂದ ಸುರ್ಜೆವಾಲಾ, ಇದರಿಂದ ಬಿಜೆಪಿಯ ಉಗ್ರ ಹಿಂದುತ್ವ ವಾದಕ್ಕೆ ಬಲ ಬರಲು ಕಾರಣವಾಯಿತು ಎಂದು ಅಭಿಪ್ರಾಯಪಟ್ಟಿದ್ದಾರೆ. ಬ್ರಾಹ್ಮಣ ಎಂದರೆ ಜ್ಞಾನ, ಭಕ್ತಿ, ಮರ್ಯಾದೆ, ಸಂಸ್ಕಾರ ಮತ್ತು ಸ್ವಾಭಿಮಾನ ಎಂದಾಗಿದ್ದು, ಕಾಂಗ್ರೆಸ್ ಪಕ್ಷದ ರಕ್ತದಲ್ಲೇ ಬ್ರಾಹ್ಮಣತ್ವ ಇದೆ ಎಂದು ಅವರು ಹೇಳಿದರು.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಹರಿಹಾಯ್ದ ಸುರ್ಜೆವಾಲಾ, ಹಿಂದೂವಾದಿ ಎಂದು ಹೇಳಿಕೊಳ್ಳುವ ಪಕ್ಷದಲ್ಲಿ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ರಾಮ್ ಬಿಲಾಸ್ ಶರ್ಮಾ, ಲಕ್ಷ್ಮೀಕಾಂತ್ ವಾಜಪೇಯಿ ಅವರಂತ ಹಿರಿಯ ಬ್ರಾಹ್ಮಣ ನಾಯಕರನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.