
ಮಂಗಳೂರು: ಬಿಜೆಪಿಯವರು ಓಟಿಗಾಗಿ ಏನನ್ನೂ ಮಾಡಲು ಸಿದ್ಧರಾಗಿದ್ದಾರೆ. ಅದೊಂದು ‘ರ‍್ಯಾಡಿಕಲ್‌ಗಳ ಕೂಟ’. ಸಂಭಾವಿತರಿಗೆ ಅಲ್ಲಿ ಜಾಗವಿಲ್ಲ ಎಂದು ಅರಣ್ಯ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಆರೋಪಿಸಿದ್ದಾರೆ.
ಬಿಜೆಪಿ ಮತ್ತು ಸಂಘ ಪರಿವಾರದವರು ಜಿಲ್ಲೆಯಲ್ಲಿ ಕೋಮು ಘರ್ಷಣೆಯನ್ನು ಸೃಷ್ಟಿಸಿ ಓಟು ಪಡೆಯುವ ಒಂದೇ ಒಂದು ಕಾರಣಕ್ಕಾಗಿ ದಾರಿಹೋಕರನ್ನೂ ಸಾಯಿಸುವ ಮಟ್ಟಕ್ಕೆ ಇಳಿದಿದ್ದಾರೆ. ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಹತ್ಯೆ ಆರೋಪಿಯೊಂದಿಗೆ ಬಿಜೆಪಿಯ ದೊಡ್ಡ ದೊಡ್ಡ ನಾಯಕರು ಕೂಡ ತಿರುಗಾಡುತ್ತಿದ್ದರೂ ಅವರಿಗೆ ಏನೂ ಅನ್ನಿಸುವುದಿಲ್ಲ. ಈ ಹಿಂದೆ ಅಶ್ರಫ್, ಶರತ್ ಮಡಿವಾಳ ಕೊಲೆಯಾದಾಗ ಅದನ್ನು ಯಾರ್ಯಾರ ತಲೆಗೆ ಕಟ್ಟಲು ಯತ್ನಿಸಿದರು. ಹತ್ಯೆಗಳನ್ನು ನಡೆಸಿ ಹಲ್ಲು ಬಿಟ್ಟು ತಿರುಗಾಡುತ್ತಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತೀವ್ರ ವಾಗ್ದಾಳಿ ನಡೆಸಿದರು.
ಅಟ್ಟಾಡಿಸಿ ಹೊಡೀತಾರೆ: ಅಭಿವೃದ್ಧಿ ಮಾಡಿ ಓಟು ಕೇಳುವ ಜನ ಬಿಜೆಪಿಯಲ್ಲಿಲ್ಲ. ಅಪಪ್ರಚಾರ ಮಾಡಿ ಓಟು ಪಡೆಯುವವರು. ಮುಂದಿನ ಚುನಾವಣೆಯಲ್ಲಿ ಬಿಜೆಪಿಯ ಪ್ರಚಾರ ಗಿಟ್ಟಿಸುವ ಇಂತಹ ತಂತ್ರಗಳಿಗೆ ಜನರು ಸೊಪ್ಪು ಹಾಕುವುದಿಲ್ಲ. ಬಿಜೆಪಿಯವರಿಗಿಂತ ಕಾಂಗ್ರೆಸ್ ಪಕ್ಷದವರು ಸಂಭಾವಿತರು. ಬೇರೆ ದೇಶದಲ್ಲಾದರೆ ಬಿಜೆಪಿಯವರನ್ನು ಅಟ್ಟಾಡಿಸಿ ಹೊಡೆಯುತ್ತಿದ್ದರು ಎಂದು ರಮಾನಾಥ ರೈ ಟೀಕಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನೆಯು ಬಿಜೆಪಿಯವರಿಗೆ ನುಂಗಲಾರದ ತುತ್ತಾಗಿದೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನೀಡಿದ ಶೇ.95ರಷ್ಟು ಭರವಸೆಗಳನ್ನು ಈಡೇರಿಸಿದೆ. ಆದರೆ ಕೇಂದ್ರ ಬಿಜೆಪಿ ಸರ್ಕಾರ ಯಾವ ಭರವಸೆಗಳನ್ನು ಈಡೇರಿಸಿದೆ? ಬಿಜೆಪಿಯ ಪ್ರಕಾಶ್ ಜಾವಡೆಕರ್ ರಸ್ತೆ ವಿಚಾರದಲ್ಲಿ ರಾಜ್ಯ ಸರ್ಕಾರವನ್ನು ದೂರುತ್ತಾರೆ. ಆದರೆ, ರಾಜ್ಯದ ಯಾವ ಮೂಲೆಗೆ ಹೋದರೂ ಪ್ರಮುಖ ರಸ್ತೆಗಳು ಸುಸ್ಥಿತಿಯಲ್ಲಿವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರಸ್ತೆಗಳು ಮಾತ್ರ ಹದಗೆಟ್ಟಿವೆ. ಅದನ್ನು ಸರಿಪಡಿಸುವ ಕಾರ್ಯವನ್ನು ಮಾಡಲಿ ಎಂದು ಸವಾಲು ಹಾಕಿದರು.
ನಳಿನ್ ಬಾಲಿಶ ಹೇಳಿಕೆ: ಶಿರಾಡಿ ಘಾಟಿ ರಸ್ತೆ ಕಾಮಗಾರಿಗೆ ಹೊಸ ಟೆಂಡರ್‌ಗೆ ಒಪ್ಪಿಗೆಯಾಗಿದ್ದು, ಶೀಘ್ರದಲ್ಲೇ ಕಾಮಗಾರಿ ನಡೆಯಲಿದೆ. ಇದಕ್ಕೆ ಹಣ ಮಂಜೂರು ಮಾಡಿಸಿದ್ದು ಆಸ್ಕರ್ ಫರ್ನಾಂಡಿಸ್. ಬಿಜೆಪಿಯವರೊಬ್ಬರು ಇದು ತನ್ನ ಸಾಧನೆ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಅದೇ ರೀತಿ, ಲೇಡಿಗೋಶನ್ ಆಸ್ಪತ್ರೆಗೆ ಎಂಆರ್‌ಪಿಎಲ್’ನಿಂದ ಹಣ ಮಂಜೂರಾಗಿದ್ದು ವೀರಪ್ಪ ಮೊಯ್ಲಿ ಕಾಲದಲ್ಲಿ. ಸಂಸದ ನಳಿನ್ ಕುಮಾರ್ ಕಟೀಲು ಏನೂ ಕೆಲಸ ಮಾಡುತ್ತಿಲ್ಲ ಎಂದು ಜನ ಹೇಳುತ್ತಿರುವಾಗ ಏನಾದರೂ ಮಾಡಬೇಕು ಎಂದು ಏನೇನೋ ಬಾಲಿಶ ಹೇಳಿಕೆಗಳನ್ನು ನೀಡುತ್ತಿದ್ದಾರೆ. ‘ತಾಕತ್ತಿದ್ದರೆ ಗಾಂಜಾ ವ್ಯವಹಾರ ನಿಲ್ಲಿಸಿ’ ಎಂದು ಹೇಳುವ ನಳಿನ್ ಅವರೇ ವ್ಯವಹಾರ ನಡೆಸುತ್ತಿದ್ದಾರಾ ಎಂಬ ಸಂಶಯ ಮೂಡಿದೆ ಎಂದು ದೂರಿದರು.
ಬಿಜೆಪಿ ಸರ್ಕಾರವಿದ್ದಾಗಲೇ ಜಿಲ್ಲೆಯಲ್ಲಿ ಗಾಂಜಾ ಸಮಸ್ಯೆಯಿತ್ತು. ಇದು ದ.ಕ. ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ. ರಾಜ್ಯ ಸರ್ಕಾರ ಇದರ ನಿಯಂತ್ರಣಕ್ಕೆ ಪ್ರಯತ್ನ ನಡೆಸುತ್ತಿದೆ. ಇನ್ನೂ ಹೆಚ್ಚು ಕ್ರಮ ವಹಿಸಲಾಗುವುದು. ರೌಡಿ ನಿಗ್ರಹ ದಳವನ್ನು ಸಬಲಗೊಳಿಸಲಾಗುವುದು ಎಂದು ರೈ ಹೇಳಿದರು.
ಉಳ್ಳಾಲದಲ್ಲಿ ಜುಬೈರ್ ಮನೆಗೆ ಸಚಿವ ಯು.ಟಿ. ಖಾದರ್ ಅವರಿಗೆ ಅವಕಾಶ ನಿರಾಕರಣೆ ಕುರಿತು ಪ್ರತಿಕ್ರಿಯಿಸಿದ ಅವರು, ಮರಣದ ಮನೆಗೆ ಹೋಗುವಾಗ ಕೆಲವೊಮ್ಮೆ ಇಂತಹ ಪ್ರತಿಕ್ರಿಯೆಗಳು ಬರುವುದು ಸ್ವಾಭಾವಿಕ. ಆದರೆ ಇದೇ ಕಾರಣಕ್ಕೆ ಸಚಿವರನ್ನೇ ಹೊಣೆಗಾರರನ್ನಾಗಿ ಮಾಡುವುದು ರಾಜಕೀಯ. ಸಂಸದ ನಳಿನ್ ಏನು ಬೇಕಾದರೂ ಮಾತನಾಡಬಹುದು ಎಂದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಕೇವಲ ಆರೆಸ್ಸೆಸ್‌ನವರು ಮಾತ್ರ ಹತ್ಯೆಯಾಗಿದ್ದಾರೆಯೇ? ಬೇರೆಯವರೂ ಆಗಲಿಲ್ಲವೇ ಎಂದು ಪ್ರಶ್ನಿಸಿದರು.
ಯೋಗಿ ತನ್ನ ರಾಜ್ಯ ಸರಿಪಡಿಸಲಿ: ರಾಜ್ಯ ಸರ್ಕಾರವನ್ನು ಟೀಕಿಸುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೊದಲು ತಮ್ಮ ರಾಜ್ಯದ ಪರಿಸ್ಥಿತಿಯನ್ನು ಸರಿ ಮಾಡಲಿ. ಉತ್ತರ ಪ್ರದೇಶದಲ್ಲಿ ಎಷ್ಟು ಮಕ್ಕಳು ಸಾವಿಗೀಡಾಗಿದ್ದಾರೆ? ಅತ್ಯಾಚಾರಗಳ ಸಂಖ್ಯೆಯೇನು ಕಡಿಮೆಯಾಗಿದೆಯೇ? ಬೇಟಿ ಪಡಾವೊ, ಬೇಟಿ ಬಚಾವೊ ಎಂದು ನರೇಂದ್ರ ಮೋದಿ ಘೋಷಣೆ ಮಾಡುತ್ತಿದ್ದರೆ, ಬನಾರಸ್ ವಿಶ್ವ ವಿದ್ಯಾನಿಲಯದಲ್ಲಿ ಹೆಣ್ಣು ಮಕ್ಕಳ ಮೇಲೆ ಲಾಠಿ ಚಾರ್ಜ್ ನಡೆದದೆ. ಯೋಗಿ ಆದಿತ್ಯನಾಥ್ ತಮ್ಮ ರಾಜ್ಯದಲ್ಲಿ ಅನಧಿಕೃತ ತುರ್ತು ಪರಿಸ್ಥಿತಿಯ ರೀತಿಯಲ್ಲಿ ಅಧಿಕಾರ ನಡೆಸುತ್ತಿದ್ದಾರೆ ಎಂದು ರಮಾನಾಥ ರೈ ಟೀಕಿಸಿದರು. ಜಿಲ್ಲಾ ಕಾಂಗ್ರೆಸ್ ಮಾಜಿ ಹಂಗಾಮಿ ಅಧ್ಯಕ್ಷ ಕೋಡಿಜಾಲ್ ಇಬ್ರಾಹಿಂ, ಮೇಯರ್ ಕವಿತಾ ಸನಿಲ್, ಸಂತೋಷ್ ಶೆಟ್ಟಿ, ನಜೀರ್ ಬಜಾಲ್ ಮತ್ತಿತರರಿದ್ದರು.
ಯಾರವನು ಮುತಾಲಿಕ್?
‘ಮಹಿಳೆಯರು ಸ್ವಯಂ ರಕ್ಷಣೆಗಾಗಿ ಆಯುಧ ಇಟ್ಟುಕೊಳ್ಳಬೇಕು’ ಎಂಬ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಕುರಿತು ಪ್ರಶ್ನಿಸಿದಾಗ, ಯಾರವನು ಮುತಾಲಿಕ್? ಯಾವ ದಾರಿಹೋಕ? ಇವರ ಮಾತನ್ನು ಯಾರು ಕೇಳುತ್ತಾರೆ ಎಂದು ರಮಾನಾಥ ರೈ ಕಿಡಿಕಾರಿದರು. ಕೆಲಸ ಮಾಡಿ ನಾಯಕನಾಗಲು ತುಂಬ ಕಷ್ಟಪಡಬೇಕು. ಆದರೆ ಇನ್ನೊಂದು ಧರ್ಮವನ್ನು ಬೈದರೆ ಸುಲಭದಲ್ಲಿ ನಾಯಕನಾಗಬಹುದು. ಅವರ ಮಾತಿಗೆ ಪ್ರತಿಕ್ರಿಯಿಸಲಾರೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.