ಕೊಡಗು ಸಂತ್ರಸ್ತರ ಕುಟುಂಬಗಳಿಗೆ 21 ಲಕ್ಷ ರೂಪಾಯಿ ಪರಿಹಾರ ಕಿಟ್

By Web DeskFirst Published Aug 26, 2018, 10:36 AM IST
Highlights

ಜಲ ಪ್ರವಾಹದಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಕೊಡುಗು ಜಿಲ್ಲೆಗೆ ಎಲ್ಲೆಡೆಯಿಂದ ಪರಿಹಾರ ಸಾಮಾಗ್ರಿಗಳು ತಲುಪುತ್ತಿವೆ. ಇದೀಗ ಬಿಡದಿಯ ನಟ ರಾಜು ಹಾಗೂ ಸ್ನೇಹಿತರು 21 ಲಕ್ಷ ರೂಪಾಯಿ ಪರಿಹಾರ ಕಿಟ್ ವಿತರಿಸಲು ಸಜ್ಜಾಗಿದ್ದಾರೆ.

ರಾಮನಗರ(ಆ.26): ಪ್ರಕೃತಿ ವಿಕೋಪಕ್ಕೆ ತುತ್ತಾದ ಕೊಡುಗು ಜಿಲ್ಲೆಯ ಒಂದು ಸಾವಿರ ನೆರೆ ಸಂತ್ರಸ್ತರ ಕುಟುಂಬಗಳಿಗೆ ನೆರವು ನೀಡಲು ಬಿಡದಿಯ ನಟ ರಾಜು, ಸ್ನೇಹಿತರು ಮತ್ತು ಸಂಘ ಸಂಸ್ಥೆಗಳು, ವರ್ತಕರು, ಶಿಕ್ಷಣ ಸಂಸ್ಥೆಗಳು ಮುಂದಾಗಿವೆ. ಬಿಡದಿ ಪಟ್ಟಣದ ಕೋದಂಡರಾಮಸ್ವಾಮಿ ದೇವಾಲಯ ಆವರಣದಲ್ಲಿ ಎರಡು ದಿನಗಳಿಂದ ಸ್ವಯಂ ಸೇವಕರು 23 ಆಹಾರ ಪದಾರ್ಥಗಳನ್ನು ಒಳಗೊಂಡ ಅಡುಗೆ ಸಾಮಗ್ರಿಗಳ ಕಿಟ್ ತಯಾರಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಈ ಆಹಾರ ಪದಾರ್ಥಗಳ ವೆಚ್ಚ ಸುಮಾರು 21 ಲಕ್ಷ ರು. ಎಂದು ಅಂದಾಜಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ಹಾನಿಗೊಳಗಾಗಿರುವ ಎರಡು ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಖುದ್ದಾಗಿ ಆ ಕುಟುಂಬಗಳಿಗೆ ಆಹಾರ ಪದಾರ್ಥಗಳನ್ನು ವಿತರಣೆ ಮಾಡುವ ಉದ್ದೇಶವನ್ನು ಬಿಡದಿ ಸ್ನೇಹಿತರು ಹೊಂದಿದ್ದಾರೆ. 

ಈ ಬಗ್ಗೆ ಮಾತನಾಡಿದ ತಾಪಂ ಸದಸ್ಯ ಗಾಣಕಲ್ ನಟರಾಜು ಮಾತನಾಡಿ, ವಿವಿಧ ಸಂಘ ಸಂಸ್ಥೆಗಳು, ಸ್ನೇಹಿತರ ಸಹಕಾರದಿಂದ ಕೊಡಗಿನ ಜನತೆಯ ನೆರವಿಗಾಗಿ ಸುಮಾರು ₹21 ಲಕ್ಷ ವೆಚ್ಚದ ಆಹಾರ ಪದಾರ್ಥಗಳನ್ನು ವಿತರಣೆ ಮಾಡಲು ಸಿದ್ಧತೆ ಮಾಡಲಾಗುತ್ತಿದೆ ಎಂದರು.

ಈ ಕಾರ್ಯದಲ್ಲಿ ಜ್ಞಾನ ವಿಕಾಸ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಸ್ವಯಂ ಸೇವಕ ರಾಗಿ ಕೆಲಸ ಮಾಡುತ್ತಿದ್ದಾರೆ. ನಾವು ನೀಡುವ ನೆರವು ಒಂದು ಕುಟುಂಬಕ್ಕೆ ತಕ್ಷಣ ಜೀವನ ನಡೆಸುವಷ್ಟು ಕಿಟ್‌ನಲ್ಲಿ ಸಾಮಗ್ರಿ ಗಳನ್ನು ಪ್ಯಾಕ್ ಮಾಡಲಾಗುತ್ತಿದೆ. ಇದು ಅರ್ಹ ನೆರೆ ಸಂತ್ರಸ್ತರಿಗೆ ತಲುಪಿಸುವ ಉದ್ದೇಶದಿಂದ ನಾವೇ ಸ್ಥಳಕ್ಕೆ ತೆಗದುಕೊಂಡು ಹೋಗಿ ವಿತರಣೆ ಮಾಡುತ್ತೇವೆ ಎಂದು ತಿಳಿಸಿದರು. 

ಕಿಟ್‌ನಲ್ಲಿರುವ ಸಾಮಗ್ರಿಗಳು: ಪ್ರತಿ ಮನೆ ಗೊಂದು ನೀಡುವ ಅಡುಗೆ ಸಾಮಗ್ರಿಗಳ ಕಿಟ್‌ನಲ್ಲಿ 7 ಕೆ.ಜಿ ಅಕ್ಕಿ, ಅರ್ಧ ಕೆ.ಜಿ ಸಕ್ಕರೆ, 1 ಕೆ.ಜಿ ರವೆ, ಅರ್ಧ ಕೆ.ಜಿ ಬೇಳೆ, ಒಂದು ಕೆ.ಜಿ ಅವಲಕ್ಕಿ, ಅರ್ಧ ಕೆ.ಜಿ ಸಾಂಬಾರ್ ಪುಡಿ, ಒಂದು ಲೀಟರ್ ಅಡುಗೆ ಎಣ್ಣೆ, ಒಂದು ಕೆ.ಜಿ ರಸಂ ಪೌಡರ್, ಬಿಸ್ಕೆಟ್, ಬಟ್ಟೆ ಸೋಪು, ಉಪ್ಪು, ತಟ್ಟೆ, ಲೋಟ, ಸೌಟ್, ಮೇಣದ ಬತ್ತಿ, ಕಂಬಳಿ, ಒಂದು ಜೊತೆ ಮಹಿಳೆಯರಿಗೆ ಮತ್ತು ಪುರುಷರಿಗೆ ಬಟ್ಟೆ, ಚಾಪೆ, ಪೇಸ್ಟ್, ಬ್ರೆಶ್, ಮೈಸೋಪು, ಶ್ಯಾಂಪೂ, ಬೆಂಕಿ ಪೊಟ್ಟಣ.

click me!