ಮಡಿಕೇರಿಯಲ್ಲಿ ನಿಂತಿಲ್ಲ ಭೂ ಕುಸಿತ : ಸೃಷ್ಟಿಯಾಗುತ್ತಿವೆ ಪ್ರಪಾತ

By Web DeskFirst Published Aug 26, 2018, 10:19 AM IST
Highlights

ಜೋಡುಪಾಲದಿಂದ ಮದೆನಾಡು ಮಧ್ಯೆ ಸುಮಾರು 5 ಕಿ.ಮೀ. ದೂರ ಹೆದ್ದಾರಿ ಅಲ್ಲಲ್ಲಿ ಕೊಚ್ಚಿಕೊಂಡು ಹೋಗಿದೆ. ಜೋಡುಪಾಲ, ಮಣ್ಣೆಂಗೇರಿ-2 ಹಾಗೂ ಮಣ್ಣೆಂಗೇರಿ-1 ಮತ್ತು ಮದೆನಾಡು ಈ 3 ಕಡೆಗಳಲ್ಲಿ ಹೆದ್ದಾರಿ ಮಧ್ಯೆ ಪ್ರಪಾತ ದೊಡ್ಡ ಪ್ರಮಾಣದಲ್ಲಿ ಸೃಷ್ಟಿಯಾಗಿದೆ. 

 ಮಂಗಳೂರು :  ‘ಪಶ್ಚಿಮಘಟ್ಟದ ಸಾಲಿನ ಪುಷ್ಪಗಿರಿ ಬೆಟ್ಟದಿಂದ ಇಬ್ಭಾಗವಾಗಿ ಹೆದ್ದಾರಿಯನ್ನು ಸೀಳಿಕೊಂಡು ಹರಿಯುತ್ತಿರುವ ಪಯಸ್ವಿನಿ ಹೊಳೆ, ಇಬ್ಬನಿ ತುಂಬಿ ಮೋಡ ಮುಸುಕಿದಂತೆ ಕಂಡುಬರುವ ವಾತಾವರಣದ ಮಧ್ಯೆ ಆಗಾಗ ಸುರಿಯುತ್ತಿರುವ ತುಂತುರು ಮಳೆ, ಒಂದು ಕಡೆ ಭೋರ್ಗರೆಯುತ್ತಿರುವ ಹೊಳೆ, ಇನ್ನೊಂದು ಕಡೆ ಸಣ್ಣ ಪ್ರಮಾಣದಲ್ಲಿ ಈಗಲೂ ಕುಸಿಯುತ್ತಿರುವ ಬೆಟ್ಟ...’’

-ಕಳೆದ 10 ದಿನಗಳ ಹಿಂದಿನ ಪ್ರಕೃತಿಯ ರುದ್ರನರ್ತನ ದ.ಕ. ಜಿಲ್ಲೆಯ ಗಡಿಭಾಗ ಸುಳ್ಯದ ಜೋಡುಪಾಲದಿಂದ ಮದೆನಾಡುವರೆಗೆ ಶನಿವಾರ ‘ಕನ್ನಡಪ್ರಭ’ ಪ್ರತಿನಿಧಿ ಸಾಗಿದಾಗ ಕಂಡುಬಂದ ಭಯಭೀತಿಯ ದೃಶ್ಯಗಳಿವು. ಈ ಪ್ರತಿಕೂಲ ಪರಿಸ್ಥಿತಿಯಲ್ಲಿ ಪರಿಸರದ ಮರುಸ್ಥಾಪನೆ, ರಸ್ತೆ ಮರು ನಿರ್ಮಾಣ ಕಾರ್ಯಗಳು ಅಕ್ಷರಶಃ ಸವಾಲೆನಿಸಿವೆ.

Latest Videos

ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ಜೋಡುಪಾಲಕ್ಕೆ ಸುಳ್ಯದಿಂದ ಸುಮಾರು 15 ಕಿ.ಮೀ. ದೂರ ಇದೆ. ಜೋಡುಪಾಲದಿಂದ ಮಣ್ಣೆಂಗೇರಿ-2, ಮಣ್ಣೆಂಗೇರಿ-1 ಹಾಗೂ ಮದೆನಾಡು ಪ್ರದೇಶ ಸಂಪೂರ್ಣ ಸಂಪರ್ಕವನ್ನೇ ಕಡಿದುಕೊಂಡಿದೆ.

ಪ್ರಪಾತ ಸೃಷ್ಟಿ:  ಜೋಡುಪಾಲದಿಂದ ಮದೆನಾಡು ಮಧ್ಯೆ ಸುಮಾರು 5 ಕಿ.ಮೀ. ದೂರ ಹೆದ್ದಾರಿ ಅಲ್ಲಲ್ಲಿ ಕೊಚ್ಚಿಕೊಂಡು ಹೋಗಿದೆ. ಜೋಡುಪಾಲ, ಮಣ್ಣೆಂಗೇರಿ-2 ಹಾಗೂ ಮಣ್ಣೆಂಗೇರಿ-1 ಮತ್ತು ಮದೆನಾಡು ಈ 3 ಕಡೆಗಳಲ್ಲಿ ಹೆದ್ದಾರಿ ಮಧ್ಯೆ ಪ್ರಪಾತ ದೊಡ್ಡ ಪ್ರಮಾಣದಲ್ಲಿ ಸೃಷ್ಟಿಯಾಗಿದೆ. ಮಣ್ಣೆಂಗೇರಿ-2ರಲ್ಲಿ ಬೃಹತ್‌ ಬೆಟ್ಟಭಾರಿ ಪ್ರಮಾಣದಲ್ಲಿ ಕುಸಿದು ಹೆದ್ದಾರಿಗೆ ಬಿದ್ದಿದೆ. ಇದರ ಜೊತೆ ಕಲ್ಲುಬಂಡೆಗಳು, ಭಾರಿ ಗಾತ್ರದ ಮರ, ಗಿಡಗಳೂ ಸೇರಿವೆ. ಧಾರಾಕಾರ ಮಳೆ ಬಂದರೆ ಗುಡ್ಡದಿಂದ ಪ್ರವಾಹದಂತೆ ನೀರು ಇಳಿಯುತ್ತಿದೆ. ಹೆದ್ದಾರಿಯ ಇನ್ನೊಂದು ಬದಿಯನ್ನು ಹೊಳೆ ಆಪೋಶನ ತೆಗೆದುಕೊಂಡಿದೆ. ಪ್ರಪಾತಕ್ಕೆ ಇಳಿದರೆ ಮೊಣಕಾಲುವರೆಗೆ ಕೆಸರು ಮಣ್ಣು, ಹುದುಗಿದರೆ ಆಳದ ಅರಿವು ಇರುವುದಿಲ್ಲ. ಜಿಟಿ ಜಿಟಿ ಮಳೆಗೆ ಮಣ್ಣು ಮೆದುವಾಗಿ ಅಲ್ಲಲ್ಲಿ ಕುಸಿಯುವ ಭೀತಿಯನ್ನು ತಂದೊಡ್ಡುತ್ತದೆ.

ಮನೆ, ರೆಸಾರ್ಟ್‌ ಜಲಸಮಾಧಿ:

ಜೋಡುಪಾಲದಿಂದ ಮುಂದಕ್ಕೆ ಸಾಗುವಾಗ ಕೆಳಗೆ ಸಣ್ಣದಾಗಿ ಹರಿಯುತ್ತಿದ್ದ ಹೊಳೆ ಈಗ ಅಗಲವಾದ ನದಿಯ ಸ್ವರೂಪ ಪಡೆದುಕೊಂಡಿದೆ. ಜಾರಪ್ಪ ಪೂಜಾರಿ ಎಂಬವರ ಮನೆ, ಕೊಟ್ಟಿಗೆ ಜಲಸಮಾಧಿಯಾಗಿದೆ. ಮನೆಯ ಮಾಡು ಮಾತ್ರವೇ ಕಾಣುತ್ತಿದೆ. ಅವರ ಎರಡು ಜಾನುವಾರು ಹುದುಗಿಹೋಗಿದೆ ಎನ್ನುತ್ತಾರೆ ಸ್ಥಳೀಯರು. ಅಲ್ಲಿಂದ ಮುಂದೆ ಮಣ್ಣೆಂಗೇರಿ-2 ಕಡೆಗೆ ದಾರಿಯುದ್ದಕ್ಕೂ ವಿದ್ಯುತ್‌ ಕಂಬಗಳು ಮುರಿದು ಬಿದ್ದಿವೆ. ಹೆದ್ದಾರಿಯ ಅಂಚು ಬಿರುಕು ಬಿಟ್ಟಿದ್ದು, ಯಾವಾಗ ಬೇಕಾದರೂ ಕುಸಿಯುವ ಆತಂಕವನ್ನು ತೋರಿಸುತ್ತಿತ್ತು. ಮೇಲ್ಭಾಗದಲ್ಲಿ ಬೆಟ್ಟಗುಡ್ಡಗಳೂ ಬಾಯ್ದೆರೆದು ನಿಂತಿದ್ದು, ಕ್ಷಣಕ್ಷಣಕ್ಕೂ ಕುಸಿಯುವ ಭೀತಿಯನ್ನು ತಂದೊಡ್ಡುತ್ತಿವೆ.

ಮಣ್ಣೆಂಗೇರಿ ಶಾಲೆ ಬಳಿ ಕಾರೊಂದು ಅರ್ಧದಲ್ಲೇ ಬಾಕಿಯಾಗಿದೆ. ಮದೆನಾಡಿನಲ್ಲಿ ನಾಸೀರ್‌ ಎಂಬವರಿಗೆ ಸೇರಿದ 8 ಎಕರೆಯಲ್ಲಿದ್ದ ಖಾಸಗಿ ರೆಸಾರ್ಟ್‌ ಸಂಪೂರ್ಣ ಪ್ರವಾಹಕ್ಕೆ ನಾಶಗೊಂಡಿದೆ. ಅಲ್ಲಿಗೆ ಸಮೀಪ ಮಣ್ಣೆಂಗೇರಿ-1 ಗುಡ್ಡದಲ್ಲಿ ನಾಗಾರ್ಜುನ ಕಂಪನಿಗೆ ಸೇರಿದ ಕೋಟಿಗಟ್ಟಲೆ ರು. ವೆಚ್ಚದ ಬೃಹತ್‌ ರೆಸಾರ್ಟ್‌ ಕಾಮಗಾರಿ ಅರ್ಧದಲ್ಲೇ ಸ್ಥಗಿತಗೊಂಡಿದೆ. ಅಲ್ಲಿ ಕೂಡ ಭೂಕುಸಿತದ ಆತಂಕ ಎದುರಾಗಿದೆ.

ಕವಲೊಡೆದ ಹೊಳೆ:

ಪುಷ್ಪಗಿರಿ ಅರಣ್ಯದಿಂದ ಕೆಳಗೆ ಸುಳ್ಯವನ್ನು ಸೇರುವ ಪಯಸ್ವಿನಿ ನದಿ ಮದೆನಾಡಿನಿಂದಲೇ ಹೆದ್ದಾರಿಯನ್ನು ಸೀಳಿಕೊಂಡು ಇಬ್ಭಾಗವಾಗಿ ಹರಿಯುತ್ತಿದೆ. ಮಡಿಲಲ್ಲಿ ರಾಶಿ ರಾಶಿ ಬೆಟ್ಟದ ಮಣ್ಣು, ಮರ, ಗಿಡಗಳನ್ನು ನದಿ ಹೊದ್ದುಕೊಂಡಿದೆ. ಈಗಲೂ ಬೆಟ್ಟಕುಸಿಯುವುದು ನಿಲ್ಲದ ಕಾರಣ ಮಳೆ ಕಡಿಮೆಯಾದರೂ ನದಿಯಲ್ಲಿ ಕೆಂಪು ನೀರು ಹರಿಯುವುದು ನಿಂತಿಲ್ಲ.

ರಸ್ತೆ ಮರು ನಿರ್ಮಾಣವೇ ಸವಾಲು

ಪ್ರಸಕ್ತ ಸಂಪಾಜೆಯ ಜೋಡುಪಾಲ ಕಡೆಯಿಂದ 3 ಹಿಟಾಚಿ ನೆರವಿನಲ್ಲಿ ಹೆದ್ದಾರಿಗೆ ಬಿದ್ದ ಮಣ್ಣು, ಮರಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಅಲ್ಲಿಂದ ಮಣ್ಣೆಂಗೇರಿ-2ವರೆಗೆ ಕೆಲಸ ಸಾಗಿದೆ. ಅತ್ತ ಮಡಿಕೇರಿಯ ಮದೆನಾಡು ಕಡೆಯಿಂದಲೂ 3 ಹಿಟಾಚಿಗಳು ಹೆದ್ದಾರಿಯನ್ನು ಸರಿಪಡಿಸುವ ಕಾರ್ಯ ನಡೆಸುತ್ತಿವೆ. ಎರಡೂ ಕಡೆಗಳಲ್ಲಿ ಹೆದ್ದಾರಿಯ ಪ್ರಪಾತಕ್ಕೆ ಮಣ್ಣು ಹಾಕಲಾಗುತ್ತಿದೆ. ಆದರೆ ಮಳೆ ಬಂದರೆ ತಡೆಗೋಡೆ ಇಲ್ಲದೆ ಮತ್ತೆ ನದಿ ಪಾಲಾಗುವ ಸಾಧ್ಯತೆ ಇಲ್ಲದಿಲ್ಲ. ಉಳಿದ ಎರಡು ಕಡೆಗಳಲ್ಲಿ ಬೆಟ್ಟಜರಿದುಬಿದ್ದು ಹೆದ್ದಾರಿಯೇ ಗುಡ್ಡೆಯಂತೆ ಆಗಿದ್ದು, ಆದನ್ನು ತೆರವುಗೊಳಿಸುವುದು ಕೂಡ ಸುಲಭದ ಮಾತಲ್ಲ. ಒಂದು ಕಡೆ ನದಿ, ಇನ್ನೊಂದು ಕಡೆ ಹೆದ್ದಾರಿಗೆ ಕುಸಿದುಬಿದ್ದ ಬೆಟ್ಟ. ಇವುಗಳ ಮಧ್ಯೆ ಹೆದ್ದಾರಿಯನ್ನು ಪುರ್ನ ರೂಪಿಸುವುದು ಸರ್ಕಾರಕ್ಕೆ ತಾಂತ್ರಿಕ ಸವಾಲಾಗಿ ಪರಿಣಮಿಸಿದೆ.

click me!