ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್‌ ಚುನಾವಣಾ ಕಣಕ್ಕೆ..?

First Published Jun 12, 2018, 7:24 AM IST
Highlights

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ತೆರವು ಮಾಡಿರುವುದರಿಂದ ನಡೆಯಬೇಕಾಗಿರುವ ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅವರ ಪಕ್ಷದ ವರಿಷ್ಠ ನಾಯಕ ಎಚ್‌.ಡಿ.ದೇವೇಗೌಡರ ಕುಟುಂಬದಲ್ಲಿ ಮತ್ತೊಂದು ಸುತ್ತಿನ ಆಂತರಿಕ ತಿಕ್ಕಾಟಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಅಚ್ಚರಿಯೆಂದರೆ, ಚಿತ್ರನಟನೂ ಆಗಿರುವ ಮುಖ್ಯಮಂತ್ರಿಗಳ ಪುತ್ರ ನಿಖಿಲ್‌ ಹೆಸರು ಇದೇ ಮೊದಲ ಬಾರಿ ಸ್ಪರ್ಧೆಗೆ ಕೇಳಿಬರುತ್ತಿದೆ.
 

ಬೆಂಗಳೂರು :  ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ತೆರವು ಮಾಡಿರುವುದರಿಂದ ನಡೆಯಬೇಕಾಗಿರುವ ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅವರ ಪಕ್ಷದ ವರಿಷ್ಠ ನಾಯಕ ಎಚ್‌.ಡಿ.ದೇವೇಗೌಡರ ಕುಟುಂಬದಲ್ಲಿ ಮತ್ತೊಂದು ಸುತ್ತಿನ ಆಂತರಿಕ ತಿಕ್ಕಾಟಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಅಚ್ಚರಿಯೆಂದರೆ, ಚಿತ್ರನಟನೂ ಆಗಿರುವ ಮುಖ್ಯಮಂತ್ರಿಗಳ ಪುತ್ರ ನಿಖಿಲ್‌ ಹೆಸರು ಇದೇ ಮೊದಲ ಬಾರಿ ಸ್ಪರ್ಧೆಗೆ ಕೇಳಿಬರುತ್ತಿದೆ.

ಕುಮಾರಸ್ವಾಮಿ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರಿಂದ ಚನ್ನಪಟ್ಟಣ ಉಳಿಸಿಕೊಂಡು ರಾಮನಗರ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಅಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದ ಅಭ್ಯರ್ಥಿ ಸ್ಥಾನಕ್ಕೆ ಪತ್ನಿ ಅನಿತಾ ಕುಮಾರಸ್ವಾಮಿ ಮತ್ತು ಪುತ್ರ ನಿಖಿಲ್‌ ಹೆಸರುಗಳು ಬಲವಾಗಿ ಕೇಳಿಬಂದಿವೆ. ಇದನ್ನು ಸ್ವತಃ ಅನಿತಾ ಕುಮಾರಸ್ವಾಮಿ ಅವರೇ ದೃಢಪಡಿಸಿದ್ದಾರೆ.

ಸೋಮವಾರ ಪದ್ಮನಾಭನಗರದಲ್ಲಿನ ದೇವೇಗೌಡ ನಿವಾಸದ ಬಳಿ ಸುದ್ದಿಗಾರರ ಜತೆ ಮಾತನಾಡಿದ ಅನಿತಾ, ರಾಮನಗರ ಕ್ಷೇತ್ರಕ್ಕೆ ನನ್ನ ಮತ್ತು ನಿಖಿಲ್‌ ಹೆಸರು ಸ್ಪರ್ಧೆಯಲ್ಲಿರುವುದು ನಿಜ. ಚುನಾವಣೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಚುನಾವಣೆ ಘೋಷಣೆಯಾದ ಬಳಿಕ ಪಕ್ಷದಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ರಾಮನಗರ ಉಪಚುನಾವಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ರಾಮನಗರ ಕ್ಷೇತ್ರಕ್ಕೆ ಉಪ ಚುನಾವಣೆ ದಿನಾಂಕ ಪ್ರಕಟವಾದ ಬಳಿಕ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚಿಸಿ ನಿರ್ಧಾರ ಮಾಡಲಾಗುತ್ತದೆ. ಪ್ರಸ್ತುತ ಇಂತಹ ಯೋಚನೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

click me!