ಚುನಾವಣೆಯಲ್ಲಿ ಟಿಕೆಟ್ ಕೊಡಿಸುವುದಾಗಿ ಸಚಿವ ರಾಮಲಿಂಗಾ ರೆಡ್ಡಿ ಹೆಸರಲ್ಲಿ ಸುಲಿಗೆ

By Suvarna Web DeskFirst Published Mar 2, 2018, 9:10 AM IST
Highlights

ವಿಧಾನಸಭಾ ಚುನಾವಣೆ ಸಮೀಪ ಇರುವಾಗ ವ್ಯಕ್ತಿಯೊಬ್ಬ ತನ್ನ ಹೆಸರು ಬಳಸಿಕೊಂಡು ಟಿಕೆಟ್ ಕೊಡಿಸುವುದಾಗಿ ಕಾಂಗ್ರೆಸ್ ಕಾರ್ಯಕರ್ತರ ಬಳಿ ಸುಲಿಗೆಗೆ ಇಳಿದಿದ್ದಾನೆ ಎಂದು ಖುದ್ದು ಗೃಹ ಸಚಿವರೇ ಬೆಂಗಳೂರು ಪೊಲೀಸರಿಗೆ ದೂರು ನೀಡಿರುವ ಸಂಗತಿ ಬೆಳಕಿಗೆ ಬಂದಿದೆ.

ಎನ್. ಲಕ್ಷ್ಮಣ್ , ಬೆಂಗಳೂರು

ಬೆಂಗಳೂರು : ವಿಧಾನಸಭಾ ಚುನಾವಣೆ ಸಮೀಪ ಇರುವಾಗ ವ್ಯಕ್ತಿಯೊಬ್ಬ ತನ್ನ ಹೆಸರು ಬಳಸಿಕೊಂಡು ಟಿಕೆಟ್ ಕೊಡಿಸುವುದಾಗಿ ಕಾಂಗ್ರೆಸ್ ಕಾರ್ಯಕರ್ತರ ಬಳಿ ಸುಲಿಗೆಗೆ ಇಳಿದಿದ್ದಾನೆ ಎಂದು ಖುದ್ದು ಗೃಹ ಸಚಿವರೇ ಬೆಂಗಳೂರು ಪೊಲೀಸರಿಗೆ ದೂರು ನೀಡಿರುವ ಸಂಗತಿ ಬೆಳಕಿಗೆ ಬಂದಿದೆ.

ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ನೀಡಿದ ದೂರಿನ ಮೇರೆಗೆ ಕೋರಮಂಗಲ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಚಾಮರಾಜರೆಡ್ಡಿ ಅಲಿಯಾಸ್ ಸುಧೀಂದ್ರರೆಡ್ಡಿ ಎಂಬುವರ ವಿರುದ್ಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ ಪ್ರಕಾರ ಸುಲಿಗೆ (385) ಹಾಗೂ ಬೆದರಿಕೆ (504) ಅಡಿ ಎಫ್‌ಐಆರ್ ದಾಖಲಿಸಲಾಗಿದೆ. ತಲೆಮರೆಸಿಕೊಂಡಿರುವ ಚಾಮರಾಜರೆಡ್ಡಿಗಾಗಿ ಪೊಲೀಸರು ಬಲೆ ಬೀಸಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಏನಿದು ಘಟನೆ?: ಎಚ್‌ಎಸ್‌ಆರ್ ಲೇಔಟ್ ಮೊದಲ ಸೆಕ್ಟರ್ ನಿವಾಸಿಯಾಗಿರುವ ಚಾಮರಾಜರೆಡ್ಡಿ ಹದಿನೈದು ವರ್ಷಗಳಿಂದ ಸಕ್ರಿಯ ಕಾಂಗ್ರೆಸ್ ಕಾರ್ಯಕರ್ತರಾಗಿದ್ದರು. ಗೃಹ ಸಚಿವ ರಾಮಲಿಂಗಾರೆಡ್ಡಿ ಅವರ ಆಪ್ತ ವಲಯದಲ್ಲಿ ಹೆಚ್ಚು ಗುರುತಿಸಿಕೊಂಡಿದ್ದ ಚಾಮರಾಜರೆಡ್ಡಿ ಅವರ ಬೆಂಬಲಿಗರಾಗಿದ್ದರು. ರಾಮಲಿಂಗಾರೆಡ್ಡಿ ಅವರ ವಿಶ್ವಾಸಗಳಿಸಿ ಅವರಿಗೆ ಹೆಚ್ಚು ಆಪ್ತರಾಗಿದ್ದರು.

ಹೀಗಾಗಿ ಸುಧೀಂದ್ರರೆಡ್ಡಿ ಕೋರಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಹುದ್ದೆಯನ್ನು ಅಲಂಕರಿಸಿದ್ದರು. ರಾಮಲಿಂಗಾರೆಡ್ಡಿ ಅವರ ಜತೆ ಗುರುತಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಪ್ರಭಾವ ಹೊಂದಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡು ಕಾಂಗ್ರೆಸ್ ಕಾರ್ಯಕರ್ತರಿಗೆ ಟಿಕೆಟ್ ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ತನ್ನ ಬೆಂಬಲಿಗ ಹೆಸರು ದುರ್ಬಳಕೆ ಮಾಡಿಕೊಂಡು ಸುಲಿಗೆಗೆ ಇಳಿದಿದ್ದರಿಂದ ಕೋಪಗೊಂಡಿದ್ದ ರಾಮಲಿಂಗಾರೆಡ್ಡಿ ಅವರು ಚಾಮರಾಜ ರೆಡ್ಡಿಯನ್ನು ಕೋರಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುದ್ದೆಯಿಂದ ಕೆಳಗೆ ಇಳಿಯುವಂತೆ ನೋಡಿಕೊಂಡಿದ್ದರು. ಹುದ್ದೆ ಕೈತಪ್ಪಿದ್ದರಿಂದ ಅವಮಾನಗೊಂಡಿದ್ದ ಆರೋಪಿ ಗೃಹ ಸಚಿವರ ವಿರುದ್ಧ ದ್ವೇಷ ಸಾಧಿಸುತ್ತಿದ್ದ. ರಾಮಲಿಂಗಾರೆಡ್ಡಿ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ಸಾರ್ವಜನಿಕವಾಗಿ ಸುಳ್ಳು ಆರೋಪಗಳನ್ನು ಮಾಡುತ್ತಾ ಅವಮಾನಕಾರಿಯಾಗಿ ನಿಂದಿಸುತ್ತಿದ್ದ. ಅಲ್ಲದೆ, ಕೆಲ ಸುಳ್ಳು ದಾಖಲೆಗಳನ್ನು ತೋರಿಸಿ ಸುಲಿಗೆ ಮಾಡುತ್ತಿದ್ದಾನೆ ಎನ್ನಲಾಗಿದೆ.

ತನ್ನ ಬೆಂಬಲಿಗರಿಗೆ ಬ್ಲಾಕ್‌ಮೇಲ್ ಮಾಡಿ ಅವರಿಂದ 2 ಕೋಟಿ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದಾನೆ. ವಿಧಾನಸಭಾ ಚುನಾವಣೆ ಸಮೀಪ ಇರುವ ಹಿನ್ನೆಲೆಯಲ್ಲಿ ಉದ್ದೇಶ ಪೂರ್ವಕವಾಗಿ ನನ್ನ ಹೆಸರಿಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ತೆಜೋವಧೆ ಮಾಡಲು ಕೃತ್ಯವನ್ನು ಎಸಗುತ್ತಿದ್ದಾನೆ. ಈತನ ವಿರುದ್ಧ ಕ್ರಮಕೈಗೊಳ್ಳುವಂತೆ ಗೃಹ ಸಚಿವರು ದೂರಿನಲ್ಲಿ ಮನವಿ ಮಾಡಿದ್ದಾರೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

click me!