
ಜೈಪುರ (ಸೆ.11): ಸಾಲವಾಗಿ ಕೊಟ್ಟವಸೂಲಾಗದೇ ಕಂಗೆಟ್ಟಲೇವಾದೇವಿದಾರನೊಬ್ಬ, ತನ್ನ ಕೊಲೆಗೆ ತಾನೇ ಸುಪಾರಿ ಕೊಟ್ಟು ದುರಂತ ಅಂತ್ಯ ಕಂಡ ಘಟನೆ ರಾಜಸ್ಥಾನದ ಬಿಲ್ವಾರದಲ್ಲಿ ನಡೆದಿದೆ. ಪ್ರಕರಣ ಸಂಬಂಧ ಹತ್ಯೆಗೈದ ಇಬ್ಬರನ್ನು ಬಂಧಿಸಲಾಗಿದೆ.
ಬಲ್‌ಬಿರ್ ಎಂಬಾತ ಲೇವಾದೇವಿ ವೃತ್ತಿ ಮಾಡುತ್ತಿದ್ದ. ಬೇರೆಯವರಿಂದ 20 ಲಕ್ಷ ರು. ಹಣ ಪಡೆದು, ಅದನ್ನು ಹೆಚ್ಚಿನ ಬಡ್ಡಿಗೆ ಬೇರೆಯವರಿಗೆ ಸಾಲವಾಗಿ ನೀಡಿದ್ದ. ಆದರೆ ಕಳೆದ 6 ತಿಂಗಳಿನಿಂದ ಹಣ ವಸೂಲಿ ಆಗಿರಲಿಲ್ಲ. ಇದರಿಂದ ಕಂಗೆಟ್ಟ ಬಲಬೀರ್, ಪರಿಸ್ಥಿತಿ ಹೀಗೆಯೇ ಮುಂದುವರೆದು ತನ್ನ ಕುಟುಂಬ ಸದಸ್ಯರು ಸಂಕಷ್ಟ ಪಡಬೇಕಾಗಿ ಬರುತ್ತದೆ ಎಂಬ ಚಿಂತೆಗೆ ಗುರಿಯಾಗಿದ್ದ.
ಇದಕ್ಕೆ ಪರಿಹಾರದ ರೂಪದಲ್ಲಿ ಆತ ಕಳೆದ ತಿಂಗಳು 50 ಲಕ್ಷ ರು.ನ ಅಪಘಾತ ವಿಮೆ ಮಾಡಿಸಿದ್ದ. ಇದರ ಮೊದಲ ಕಂತಾಗಿ 8 ಲಕ್ಷ ರು. ಹಣವನ್ನೂ ನೀಡಿದ್ದ. ಬಳಿಕ ಅಪಘಾತ ಮಾಡಿಕೊಂಡು ಸಾವನ್ನಪ್ಪುವುದು. ಹೀಗಾದಲ್ಲಿ ಕುಟುಂಬ ಸದಸ್ಯರಿಗೆ 50 ಲಕ್ಷ ರು. ಹಣ ಸಿಕ್ಕು ಅವರು ನೆಮ್ಮದಿಯಾಗಿ ಬದುಕಬಲ್ಲರು ಎಂದು ಯೋಜನೆ ರೂಪಿಸಿದ್ದ. ಆದರೆ ಅಪಘಾತದಲ್ಲಿ ಬದುಕುಳಿದರೆ ಸಮಸ್ಯೆ ಇನ್ನಷ್ಟುಹೆಚ್ಚಾಗುತ್ತದೆ ಎಂದು ಹೆದರಿದ ಬಲಬೀರ್, ಇಬ್ಬರು ಹಂತಕರಿಗೆ ತನ್ನನ್ನು ಕೊಲ್ಲಲು 80000 ರು. ಸುಪಾರಿ ಕೊಟ್ಟಿದ್ದ. ಮುಂಗಡವಾಗಿ ಅವರಿಗೆ 10000 ರು. ನೀಡಿದ್ದ.
ಇತ್ತೀಚೆಗೊಂದು ದಿನ ನಿಗದಿಯಾದಂತೆ ಹಂತಕರು ಬಲಬೀರ್‌ನನ್ನು ಹತ್ಯೆಗೈದಿದ್ದರು. ಏಕಾಏಕಿ ನಡೆದ ಕೊಲೆ ಬೆನ್ನುಹತ್ತಿದ್ದ ಪೊಲೀಸರು ಬಲಬೀರ್‌ನ ಮೊಬೈಲ್ ಕರೆ ಮತ್ತು ಸಿಸಿಟೀವಿ ದೃಶ್ಯಗಳನ್ನು ಆಧರಿಸಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಬಲಬೀರ್ ಹತ್ಯೆಗೆ ಆತನೇ ಸುಪಾರಿ ಕೊಟ್ಟಿದ್ದ ವಿಷಯವನ್ನು ಹಂತಕರು ಬಾಯಿಬಿಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.