ಮತ್ತೆ ಮಳೆ, ಮಳೆ...ಕೆಲವೆಡೆ ಶಾಲಾ ಕಾಲೇಜುಗಳಿಗೆ ರಜೆ

First Published Jul 7, 2018, 9:17 AM IST
Highlights

ಎಲ್ಲಿಯೋ ತುಸು ಬಿಡುವು ಪಡೆದಂತೆ ಕಂಡಿದ್ದ ಮಳೆರಾಯ ತನ್ನ ಆರ್ಭಟವನ್ನು ಮತ್ತೆ ಶುರು ಮಾಡಿದ್ದಾನೆ. ದಕ್ಷಿಣ ಕನ್ನಡದಲ್ಲಿ ವರುಣನ ನರ್ತನಕ್ಕೆ ಇಬ್ಬರು ಬಲಿಯಾಗಿದ್ದಾರೆ. ಮಲೆನಾಡಲ್ಲೂ ವರುಣನ ಆರ್ಭಟ ಜೋರಾಗುತ್ತಿದೆ.

ಬೆಂಗಳೂರು: ತುಸು ಬಿಡುವು ತೆಗೆದುಕೊಂಡಿದ್ದ ವರುಣ ಮತ್ತೆ ತನ್ನ ಆರ್ಭಟ ಆರಂಭಿಸಿದ್ದು, ಕರಾವಳಿ, ಮಲೆನಾಡಿನಲ್ಲಿ ಬಿಡದೇ ಸುರಿಯುತ್ತಿದ್ದಾನೆ. ಅತ್ತ ದಕ್ಷಿಣ ಕನ್ನಡದಲ್ಲಿ ಮನೆಯ ಕಾಂಪೌಂಡ್ ಕುಸಿದು ಇಬ್ಬರು ಬಲಿಯಾದರೆ, ಇತ್ತ ಮಲೆನಾಡಿನಲ್ಲಿಯೂ ಎಡಬಿಡದೇ ಸುರಿಯುತ್ತಿದೆ ಮಳೆ.

ಕಳೆದ ರಾತ್ರಿ ಪುತ್ತೂರಿನ ಸಮೀಪದ ಹೆಬ್ಬಾರ್‌ಬೈಲಿನಲ್ಲಿ ಮನೆಯೊಂದರ ಕಾಂಪೌಂಡ್ ಕುಸಿದು, ಇಬ್ಬರು ಅಸುನೀಗಿದ್ದಾರೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪುತ್ತೂರು ಮತ್ತು ಸುಳ್ಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಜಲಾವೃತಗೊಂಡಿದ್ದು, ವಿಟ್ಲ-ಸಾಲೆತ್ತೂರು ಸಂಪರ್ಕ ರಸ್ತೆ ಕುಡ್ತಮುಗೇರಿನಲ್ಲಿ ಮುಳುಗಿದೆ. ಕೆಲವೆಡೆ ನದಿ ಭಾಗದ ಮಣ್ಣು ಕುಸಿದಿದ್ದು, ಹಲವು ನದಿಗಳು ತುಂಬಿ ಹರಿಯುತ್ತಿವೆ.

ಗೋಡೆ ಕುಸಿದು ಎರಡು ಸಾವು:

ಮನೆಯ ತಡೆಗೋಡೆ ಕುಸಿದು ಅಜ್ಜಿ ಹಾಗೂ ಮೊಮ್ಮಗ ಅಸುನೀಗಿದ್ದಾರೆ. ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಹೆಬ್ಬಾರಬೈಲಿನ ಪಾರ್ವತಿ (65) ಹಾಗೂ ಮೊಮ್ಮಗ ಧನುಶ್ (11) ಮೃತಪಟ್ಟವರು. ಜು.6ರ ತಡರಾತ್ರಿ ಘಟನೆ ನಡೆದಿದ್ದು, ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತುಂಬುತ್ತಿವೆ ಜಲಾಶಯಗಳು:

ಹಾಸನದ ಹೇಮಾವತಿ, ಉತ್ತರ ಕರ್ನಾಟಕದ ಆಲಮಟ್ಟಿ,  ಕೆಆರ್‌ಎಸ್‌ ಸೇರಿ ರಾಜ್ಯದ ಹಲವೆಡೆ ಇರುವ ಜಲಾಶಯಗಳು ತುಂಬುತ್ತಿವೆ.

ಕೊಡಗಲ್ಲೂ ಆರ್ಭಟ:

ಕಳೆದೊಂದು ವಾರದಿಂದ ಕೊಡಗು ಜಿಲ್ಲೆಯಲ್ಲಿ ಶಾಂತನಾಗಿದ್ದ ವರುಣ ನಿನ್ನೆಯಿಂದ ಮತ್ತೆ ತನ್ನ ಆರ್ಭಟ ಶುರು ಮಾಡಿದ್ದಾನೆ. ನಿನ್ನೆ ಬೆಳೆಗ್ಗೆಯಿಂದ ಸಾಧಾರಣವಾಗಿಯೇ ಸುರಿಯುತ್ತಿದ್ದ ಮಳೆ ಸಂಜೆಯಾಗುತ್ತಲೇ ಬಿರುಸುಗೊಂಡಿದ್ದು, ಜಿಲ್ಲೆಯಾಧ್ಯಂತ ಧಾರಾಕಾರವಾಗಿ ಸುರಿಯುತ್ತಿದೆ.

ರಾತ್ರಿಯಿಡಿ ಎಡೆಬಿಡದೆ ಸುರಿದ ಮಳೆ ಈಗಲೂ ತನ್ನ ಅಬ್ಬರ ಮುಂದುವರಿಸಿದೆ. ಇನ್ನು ಮಳೆ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಅಂಗನವಾಡಿಗಳು ಸೇರಿದಂತೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆ ಒಂದು ದಿನದ ಮಟ್ಟಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಪಿ.ಐ ಶ್ರೀವಿದ್ಯಾ ಆದೇಶ ಹೊರಡಿಸಿದ್ದಾರೆ.

click me!