ರೈಲಿನ ಬಾಗಿಲ ಬಳಿ ನಿಂತರೆ ಮೊಬೈಲ್ ಮಾಯ

By Web DeskFirst Published Jul 28, 2019, 8:58 AM IST
Highlights

ರೈಲಿನ ಬಾಗಿಲ ಬಳಿ ನಿಂತರೆ ನಿಮ್ಮಮೊಬೈಲ್ ಮಾಯವಾಗುತ್ತೆ. ಇದೀಗ ಮೊಬೈಲ್ ಕಳ್ಳರ ಸಂಖ್ಯೆ ಹೆಚ್ಚಿದ್ದು, ಈ ನಿಟ್ಟಿನಲ್ಲಿ ಪೊಲೀಸರು ಹೈ ಅಲರ್ಟ್  ಘೋಷಿಸಿದ್ದಾರೆ. 

ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು [ಜು.28]:  ಹೌದು ಇದುವರೆಗೆ ಕಲ್ಲುಗಳನ್ನು ತೂರಿ ಮೊಬೈಲ್‌ ಎಗರಿಸುತ್ತಿದ್ದ ಕಿಡಿಗೇಡಿಗಳು, ಈಗ ಚಲಿಸುವ ರೈಲಿನ ಬಾಗಿಲಿನಲ್ಲಿ ನಿಂತವರ ಜೇಬಿಗೆ ಕೈ ಹಾಕುತ್ತಿದ್ದಾರೆ. ಇದರ ಪರಿಣಾಮ ಚೋರರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ರೈಲಿನಿಂದ ಬಿದ್ದು ಪ್ರಯಾಣಿಕರು ಸಂಕಷ್ಟದ ಕೂಪಕ್ಕೆ ಬೀಳುತ್ತಿದ್ದಾರೆ. ಈಗಂತೂ ಮೊಬೈಲ್‌ ಕಳ್ಳರ ಹಾವಳಿ ಪ್ರಯಾಣಿಕರಲ್ಲಿ ಭೀತಿ ಹುಟ್ಟಿಸಿದೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಮೆಜೆಸ್ಟಿಕ್‌), ಕೆಂಗೇರಿ, ಬೈಯಪ್ಪನಹಳ್ಳಿ, ಕೆ.ಆರ್‌.ಪುರ, ಬಾಣವಾರ, ಕಂಟೋನ್ಮೆಂಟ್‌ ಹಾಗೂ ಬಾಣವಾಡಿ ಸೇರಿದಂತೆ ನಗರ ವ್ಯಾಪ್ತಿ ರೈಲು ನಿಲ್ದಾಣ ಸಮೀಪದಲ್ಲೇ ಮೊಬೈಲ್‌ ಕಳ್ಳರ ಗುಂಪುಗಳು ಸಕ್ರಿಯವಾಗುತ್ತಿವೆ. ಈ ಕಳ್ಳರ ಕಾಟದ ಹಿನ್ನೆಲೆಯಲ್ಲಿ ಎಚ್ಚೆತ್ತ ರೈಲ್ವೆ ಪೊಲೀಸರು, ನಿಲ್ದಾಣಗಳಲ್ಲಿ ಗಸ್ತು ಹೆಚ್ಚಳ ಮಾಡಿದ್ದಾರೆ. ಆದರೆ ರೈಲು ಹಳಿಗಳ ಬಳಿ ನಿಂತು ದುಷ್ಕರ್ಮಿಗಳು ನಡೆಸುತ್ತಿರುವ ದುಷ್ಕೃತ್ಯಗಳಿಗೆ ಕಡಿವಾಣ ಹಾಕುವುದು ರಾಜ್ಯ ಹಾಗೂ ಕೇಂದ್ರ ರೈಲ್ವೆ ಭದ್ರತಾ ಪಡೆಗಳಿಗೆ ತಲೆನೋವು ತಂದಿದ್ದಾರೆ.

ಮೆಜೆಸ್ಟಿಕ್‌ ಸೇರಿದಂತೆ ಪ್ರಮುಖ ರೈಲ್ವೆ ನಿಲ್ದಾಣಗಳ ಸಮೀಪದ ಹಳಿಗಳ ಬಳಿ ದುಷ್ಕರ್ಮಿಗಳು ನಿಲ್ಲುತ್ತಾರೆ. ಆ ವೇಳೆ ನಿಲ್ದಾಣ ದಾಟಿ ನಿಧಾನವಾಗಿ ಸಾಗುವ ರೈಲಿನ ಬಾಗಿಲಿನಲ್ಲಿ ನಿಲ್ಲುವ ಪ್ರಯಾಣಿಕರನ್ನೇ ಕಳ್ಳರ ಗುರಿಯಾಗುತ್ತಾರೆ. ರೈಲು ವೇಗ ಹೆಚ್ಚಿಸಿಕೊಳ್ಳುವ ಮುನ್ನವೇ ಲಭಿಸುವ ಅಲ್ಪಾವಧಿಯಲ್ಲೇ ಕಳ್ಳರು, ಪ್ರಯಾಣಿಕರ ಜೇಬಿಗೆ ಕೈ ಹಾಕಿ ಮೊಬೈಲ್‌ ಎಗರಿಸುತ್ತಾರೆ. ಈ ಹಂತದಲ್ಲಿ ಕೆಲವರು ಪ್ರತಿರೋಧ ತೋರಿದಾಗ ಜಗ್ಗಾಟ ನಡೆದು ಕೊನೆಗೆ ಪ್ರಯಾಣಿಕರು ಅಪಾಯಕ್ಕೆ ಸಿಲುಕುತ್ತಾರೆ ಎಂದು ರೈಲ್ವೆ ಪೊಲೀಸರು ಹೇಳುತ್ತಾರೆ.

ಮೊದಲೆಲ್ಲಾ ರೈಲಿನ ಬಾಗಿಲಿನಲ್ಲಿ ನಿಂತು ಮೊಬೈಲ್‌ ಸಂಭಾಷಣೆ ನಡೆಸುವರಿಗೆ ದುಷ್ಕರ್ಮಿಗಳು ಕಲ್ಲೆಸೆಯುತ್ತಿದ್ದರು. ಆಗ ಕಲ್ಲೇಟು ತಿಂದ ಪ್ರಯಾಣಿಕರ ಕೈಯಿಂದ ಜಾರುವ ಮೊಬೈಲ್‌ಗಳನ್ನು ಅವರು ದೋಚುತ್ತಿದ್ದರು. ಈ ಕೃತ್ಯಗಳ ಸಂಬಂಧ ಕೆಲವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಈಗಲೂ ಕೆಲವು ಕಡೆ ಕಲ್ಲು ತೂರುವ ಗುಂಪುಗಳು ಸಕ್ರಿಯವಾಗಿವೆ. ಆದರೆ ಇತ್ತೀಚೆಗೆ ಚಲಿಸುವ ರೈಲುಗಳ ಪ್ರಯಾಣಿಕರ ಜೇಬಿಗೆ ಕೈ ಹಾಕಿ ಕಳ್ಳತನಕ್ಕೆ ಯತ್ನಿಸುವ ಕೃತ್ಯವು ಅಪಾಯಕಾರಿಯಾಗಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸುತ್ತಾರೆ.

 ರೈಲಿನಿಂದ ಬಿದ್ದು ಕಾಲು ಮುರಿತ

ತುಮಕೂರು ಜಯನಗರದ 2ನೇ ಕ್ರಾಸ್‌ ನಿವಾಸಿ ಬಿ.ಆರ್‌.ಸತೀಶ್‌, ಬೆಂಗಳೂರಿನಲ್ಲಿ ಸರ್ಕಾರಿ ಸೇವೆಯಲ್ಲಿದ್ದಾರೆ. ಪ್ರತಿದಿನ ರೈಲಿನಲ್ಲಿ ಓಡಾಡುತ್ತಾರೆ. ಎಂದಿನಂತೆ ಜು.22ರಂದು ಸಂಜೆ 6.30ರಲ್ಲಿ ಕೆಲಸ ಮುಗಿಸಿ ಮನೆಗೆ ಬೆಂಗಳೂರು-ಅರಸಿಕೆರೆ ಮಾರ್ಗದ ಪ್ಯಾಸೆಂಜರ್‌ ರೈಲಿನಲ್ಲಿ ಹೊರಟ್ಟಿದ್ದರು.

ಆಗ ಕೊನೆಯ ಬೋಗಿಯಲ್ಲಿ ಹತ್ತಿದ್ದ ಅವರು, ಮಲ್ಲೇಶ್ವರದ ರೈಲು ನಿಲ್ದಾಣದಲ್ಲಿ ಇಳಿದು ಮುಂದಿನ ಬೋಗಿಗೆ ಹೋಗುವ ಸಲುವಾಗಿ ಬಾಗಿಲ ಬಳಿ ನಿಂತಿದ್ದರು. ಆಗ ಮೆಜೆಸ್ಟಿಕ್‌ ರೈಲು ನಿಲ್ದಾಣವನ್ನು ಬಿಟ್ಟು ಹತ್ತು ನಿಮಿಷಗಳ ನಂತರ ರೈಲು ನಿಧಾನವಾಗಿ ಚಲಿಸುತ್ತಿತ್ತು. ಆ ವೇಳೆ ಸಿಗ್ನಲ್‌ ಕಂಬದ ಮೇಲೆ ಸುಮಾರು 20-25 ವರ್ಷದ ಇಬ್ಬರು ಕಿಡಿಗೇಡಿಗಳು ನಿಂತಿದ್ದರು. ಅದರಲ್ಲಿ ಒಬ್ಬಾತ ಸತೀಶ್‌ ಅವರ ಶರ್ಟ್‌ನ ಜೇಬಿನಲ್ಲಿದ್ದ .14 ಸಾವಿರ ಮೌಲ್ಯದ ಸ್ಯಾಮ್‌ಸಂಗ್‌ ಮ್ಯಾಕ್ಸ್‌ ಹಾಗೂ .1 ಸಾವಿರ ಬೆಲೆಯ ಲಾವಾ ಮೊಬೈಲ್‌ಗಳ ಕಿತ್ತುಕೊಳ್ಳಲು ಯತ್ನಿಸಿದ್ದರು. ತಕ್ಷಣವೇ ಸತೀಶ್‌ ಅವರು, ತಮ್ಮ ಜೇಬಿಗೆ ಕೈ ಹಾಕಿದ್ದವನ್ನು ಎಳೆದರು. ಬಲಗೈನಿಂದ ಜೇಬನ್ನು ಹಿಡಿದುಕೊಂಡಾಗ ಮತ್ತೊಬ್ಬ ಸತೀಶ್‌ ಕೈಯನ್ನು ಹಿಡಿದು ಎಳೆದಿದ್ದಾನೆ. ಇದರಿಂದ ಆಯ ತಪ್ಪಿ ರೈಲಿನಿಂದ ಕೆಳಗೆ ಬಿದ್ದು ಸತೀಶ್‌, ಉರುಳಿಕೊಂಡು ರೈಲ್ವೆ ಬ್ರಿಡ್ಜ್‌ನಿಂದ ಕೆಳಗೆ ಬಿದ್ದಿದ್ದಾರೆ. ಘಟನೆಯಲ್ಲಿ ಅವರ ಕಾಲಿಗೆ ಗಂಭೀರ ಸ್ವರೂಪದ ಪೆಟ್ಟಾಗಿದೆ.

ಜೇಬಿನಲ್ಲಿದ್ದ ಮೊಬೈಲ್‌ ನಾಪತ್ತೆ: ಖಾಸಗಿ ಕಂಪನಿ ಉದ್ಯೋಗಿ ಪವನ್‌, ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ನೆಲೆಸಿದ್ದಾರೆ. ಜು.15ರಂದು ತಮ್ಮೂರು ಊರು ಬೀದರ್‌ಗೆ ತೆರಳುತ್ತಿದ್ದರು. ಸಿಟಿ ರೈಲ್ವೆ ನಿಲ್ದಾಣದಲ್ಲಿ ಕೆ.ಕೆ.ಎಕ್ಸ್‌ಪ್ರೆಸ್‌ ರೈಲಿಗೆ ಹತ್ತಿದ್ದರು. ಆ ವೇಳೆ ಅವರ ಮೊಬೈಲ್‌ ಕಳ್ಳತನವಾಗಿದೆ. ದಂಡು ರೈಲ್ವೆ ನಿಲ್ದಾಣದಲ್ಲಿ ರೈಲು ನಿಲುಗಡೆ ಮಾಡಿದಾಗ ಪವನ್‌, ತಮ್ಮ ಪಾಂಟಿನ ಜೇಬಿನಲ್ಲಿ .20 ಸಾವಿರ ಮೌಲ್ಯದ ಮೊಬೈಲ್‌ ಕಳ್ಳತನವಾಗಿರುವುದು ಗೊತ್ತಾಗಿದೆ.

ಸೈನಿಕರ ಸೋಗಿನಲ್ಲಿ ವಂಚನೆ

ಒಂದೆಡೆ ಮೊಬೈಲ್‌ ಕಳ್ಳರ ಹಾವಳಿಯಾದರೆ ಮತ್ತೊಂದೆಡೆ ಗಮನ ಬೇರೆಡೆ ಸೆಳೆದು ರೈಲಿನಲ್ಲಿ ಚಿನ್ನಾಭರಣ ದೋಚುವ ಕೃತ್ಯಗಳು ಅವ್ಯಾಹತವಾಗಿ ಸಾಗಿದೆ.

ಇತ್ತೀಚಿಗೆ ಸೈನಿಕರ ಸೋಗಿನಲ್ಲಿ ಯಮಾರಿಸಿ ಮಹಿಳೆಯೊಬ್ಬರಿಂದ .3.75 ಲಕ್ಷ ಮೌಲ್ಯದ ಆಭರಣ ಕಳ್ಳತನ ಮಾಡಿರುವ ಘಟನೆ ಯಶವಂತಪುರ ರೈಲ್ವೆ ನಿಲ್ದಾಣ ಬಳಿ ನಡೆದಿದೆ.

ತಮಿಳುನಾಡು ಮೂಲದ ಪ್ರಿಯಾ ಶಿವ ಮುರುಗನ್‌ ಅವರು, ಮಾಗಡಿಯಲ್ಲಿರುವ ತವರು ಮನೆಗೆ ಬರುತ್ತಿದ್ದಾಗ ಈ ಕೃತ್ಯ ನಡೆದಿದೆ.

ರೈಲು ಹೆಬ್ಬಾಳ ನಿಲ್ದಾಣ ದಾಟಿದ ಬಳಿಕ ಸೈನಿಕನಂತೆ ಉಡುಪು ಧರಿಸಿದ್ದ ಒಬ್ಬಾತ, ಪ್ರಿಯಾ ಅವರ ಬಳಿ ಬಂದು. ‘ನಾವು ಮಿಲ್ಟಿ್ರಯವರು ನಮ್ಮ ಸಾಮಾನುಗಳನ್ನು ಇಳಿಸಬೇಕಿದೆ. ನೀವು ಸ್ಪಲ್ಪ ಬಾಗಿಲ ಬಳಿ ತೆರಳುವಂತೆ’ ಹೇಳಿದ್ದರು. ಇದಾದ ನಂತರ ಮತ್ತೊಬ್ಬ ಬಂದು ಅದೇ ರೀತಿ ಹೇಳಿದ್ದ. ಈ ಮಾತಿನಿಂದ ಪ್ರಿಯಾ ಅವರು, ಬಾಗಿಲ ಬಳಿ ತೆರಳಿದ್ದಾರೆ. ಆ ವೇಳೆ ಅವರ ಬ್ಯಾಗಿನಲ್ಲಿದ್ದ ಚಿನ್ನಾಭರಣಗಳನ್ನು ಕಳವಾಗಿತ್ತು. ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಇಳಿದು ಅವರು, ತಮ್ಮ ತವರು ಮನೆಗೆ ಹೋಗಿ ಬ್ಯಾಗ್‌ ಪರಿಶೀಲಿಸಿದಾಗ ಕಳ್ಳತನ ಗೊತ್ತಾಗಿದೆ.

ಮೊಬೈಲ್‌ ಕಳ್ಳತನ ನಿಯಂತ್ರಣಕ್ಕೆ ಕ್ರಮ ಜರುಗಿಸಲಾಗಿದೆ. ರೈಲ್ವೆ ನಿಲ್ದಾಣಗಳಲ್ಲಿ ಗಸ್ತು ಹೆಚ್ಚಿಸಲಾಗಿದ್ದು, ಹಳಿಗಳ ಮೇಲೂ ಸಹ ನಿಗಾ ವಹಿಸಲಾಗಿದೆ. ಈ ಕೃತ್ಯದಲ್ಲಿ ತೊಡಗಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

-ಅಶೋಕ್‌, ಡಿವೈಎಸ್ಪಿ, ರಾಜ್ಯ ರೈಲ್ವೆ ಪೊಲೀಸ್‌

click me!