
ನವದೆಹಲಿ: ಬಜೆಟ್ ವಿಚಾರದಲ್ಲಿ ಕೇಂದ್ರ ಸರಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಒಂಬತ್ತು ದಶಕಗಳ ಸಂಪ್ರದಾಯಕ್ಕೆ ತಿಲಾಂಜಲಿ ಹಾಡಿ ಹೊಸ ದಾರಿ ತುಳಿದಿದೆ. ರೈಲ್ವೆಯ ಆಧುನೀಕರಣದ ಪ್ರಕ್ರಿಯೆ ಭಾಗವಾಗಿ ಕೆಲ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
* ಇನ್ಮುಂದೆ ಪ್ರತ್ಯೇಕ ರೈಲ್ವೇ ಬಜೆಟ್ ಇಲ್ಲ; ಸಾಮಾನ್ಯ ಬಜೆಟ್ ಜೊತೆ ರೈಲ್ವೆ ಮುಂಗಡ ಪತ್ರ ವಿಲೀನ
* ಫೆಬ್ರವರಿ ಬದಲು ಜನವರಿ ತಿಂಗಳಲ್ಲಿಯೇ ಬಜೆಟ್ ಮಂಡನೆ
ಇಂತಹ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬಂದಿದೆ. ಪ್ರತಿವರ್ಷ ರೈಲ್ವೆ ಬಜೆಟ್ ಪ್ರತ್ಯೇಕವಾಗಿ ಮಂಡಿಸುವ ಬಜೆಟ್ ಇನ್ನೂ ಮುಂದೆ ಸಾಮಾನ್ಯ ಬಜೆಟ್ ನೊಂದಿಗೆ ವಿಲೀನಗೊಳಿಸುವ ಬಗ್ಗೆ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಭೆ ಅಂತಿಮ ನಿರ್ಧಾರಕ್ಕೆ ಬಂದಿದೆ.
ಹಣಕಾಸು ವರ್ಷ ಮುಕ್ತಾಯವಾಗುವ ಮಾರ್ಚ್ 31ಕ್ಕೂ ಮುನ್ನ, ಅಂದ್ರೆ ಫೆಬ್ರವರಿಯಲ್ಲಿ ಬಜೆಟ್ ಅಧಿವೇಶನ ನಡೆಯುತ್ತಿತ್ತು. ಆದ್ರೆ ಇನ್ನು ಮುಂದೆ ಫೆಬ್ರವರಿ ಬದಲು ಜನವರಿ ತಿಂಗಳಲ್ಲಿಯೇ ಸಾಮಾನ್ಯ ಬಜೆಟ್ ಮಂಡನೆ ಮಾಡಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ.
ರೈಲ್ವೆ ಸಚಿವರು ಏನಂತಾರೆ?
ಕೇಂದ್ರ ಮುಂಗಡ ಪತ್ರದೊಂದಿಗೆ ರೈಲ್ವೆ ಬಜೆಟನ್ನು ವಿಲೀನಗೊಳಿಸುವುದರಿಂದ ರೈಲ್ವೆ ಇಲಾಖೆಯ ಕಾರ್ಯನಿರ್ವಹಣೆಗೆ ಯಾವುದೇ ಸಂಚಕಾರ ಬರುವುದಿಲ್ಲವೆಂದು ರೈಲ್ವೆ ಸಚಿವ ಸುರೇಶ್ ಪ್ರಭು ಸ್ಪಷ್ಟಪಡಿಸಿದ್ದಾರೆ. ರೈಲ್ವೆ ಇಲಾಖೆಯ ಜನರಲ್ ಮ್ಯಾನೇಜರ್, ಡಿವಿಷನಲ್ ಮ್ಯಾನೇಜರ್'ಗಳ ಜವಾಬ್ದಾರಿಗಳಲ್ಲಿ ಬದಲಾವಣೆ ಇರುವುದಿಲ್ಲ. ರೈಲ್ವೆಯ ಹಣಕಾಸು ವಹಿವಾಟು ಯಥಾಸ್ಥಿತಿಯಲ್ಲಿ ಮುಂದುವರಿಯುತ್ತದೆ. ಆದರೆ, ಕಾರ್ಯನಿರ್ವಹಣೆಯಲ್ಲಿರುವ ಅನಗತ್ಯ ವಿಳಂಬಗಳು ಕಡಿಮೆಯಾಗುತ್ತವೆ ಎಂದು ಸಚಿವರು ತಿಳಿಸಿದ್ದಾರೆ.
ಒಟ್ಟಿನಲ್ಲಿ, ಕಳೆದ 92 ವರ್ಷಗಳಿಂದ ನಡೆದುಕೊಂಡ ಬಂದ ಪರಿಪಾಠ ಅಂತ್ಯಗೊಳಿಸಿ, ಹೊಸ ರೀತಿಯ ಯೋಜನೆ ರೂಪಿಸಲು ಕೇಂದ್ರ ಸರ್ಕಾರ ಪ್ಲಾನ್ ಮಾಡಿಕೊಂಡಿದೆ. ಬೇಗ ಬಜೆಟ್ ಮಂಡನೆ ಮಾಡಿದ್ರೆ, ಅನುದಾನ ಹಂಚಿಕೆ ಹಾಗೂ ಅದನ್ನು ಬಳಕೆ ಮಾಡುವುದಕ್ಕಾಗಿ ಅನುಕೂಲವಾಗುತ್ತೆ ಎಂಬುವುದು ಕೇಂದ್ರ ಸರ್ಕಾರದ ವಾದ.
- ಜೆ. ಎಸ್. ಪೂಜಾರ್, ನ್ಯೂಸ್ ಬ್ಯೂರೋ, ಸುವರ್ಣನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.