
ನವದೆಹಲಿ : 2019ರ ಲೋಕಸಭೆ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆಗೇರದಂತೆ ಬಿಜೆಪಿಯನ್ನು ಕಟ್ಟಿಹಾಕುವ ಯತ್ನದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಈ ನಿಟ್ಟಿನಲ್ಲಿ ಸಂಯುಕ್ತ ರಂಗ ಸ್ಥಾಪನೆಗಾಗಿ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರನ್ನು ಭೇಟಿ ಮಾಡಿ, ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬುಧವಾರವಷ್ಟೇ ಹೊರಬಿದ್ದ ಉತ್ತರ ಪ್ರದೇಶ ಮತ್ತು ಬಿಹಾರ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ಬೆನ್ನಲ್ಲೇ, ಬುಧವಾರ ರಾತ್ರಿಯೇ ಶರದ್ ಪವಾರ್ ಅವರನ್ನು ರಾಹುಲ್ ಗಾಂಧಿ ಅವರು ಭೇಟಿ ಮಾಡಿದ್ದಾರೆ.
ಈ ಉಭಯ ನಾಯಕರ ಭೇಟಿ ಸಂದರ್ಭದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೇಸರಿ(ಬಿಜೆಪಿ) ಪಕ್ಷದ ಗೆಲುವಿನ ನಾಗಾಲೋಟವನ್ನು ತಡೆಯಲು ಪ್ರತಿಪಕ್ಷಗಳ ಜಂಟಿ ಕೂಟ ರಚನೆ ಕುರಿತು ಚರ್ಚಿಸಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಶೀಘ್ರ ಮಮತಾ ಭೇಟಿ: ಬಿಜೆಪಿ ವಿರುದ್ಧ ಮೊದಲಿನಿಂದಲೂ ಏರು ಧ್ವನಿಯಲ್ಲೇ ಮಾತನಾಡುತ್ತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರನ್ನು ರಾಹುಲ್ ಶೀಘ್ರವೇ ಭೇಟಿ ಮಾಡಲಿದ್ದು, ಮಾ.28ರಂದು ಶರದ್ ಪವಾರ್ ಏರ್ಪಡಿಸಲಿರುವ ಪ್ರತಿಪಕ್ಷಗಳ ಜಂಟಿ ಕೂಟಕ್ಕೆ ಬ್ಯಾನರ್ಜಿ ಹಾಜರಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಈ ನಡುವೆ, ಬಿಎಸ್‌ಪಿ ಸಂಸ್ಥಾಪಕ ಕಾನ್ಶೀ ರಾಮ್ ಅವರನ್ನು ಕೊಂಡಾಡಿರುವ ರಾಹುಲ್ ಗಾಂಧಿ, ತುಳಿತಕ್ಕೊಳಗಾದ ಸಮುದಾಯ ಮತ್ತು ಕೆಳ ಜಾತಿ ಸಮುದಾಯವರನ್ನು ರಾಜಕೀಯದ ಮುಖ್ಯವಾಹಿನಿಗೆ ಕರೆತಂದ ಕೀರ್ತಿ ಕಾನ್ಶೀ ರಾಮ್ ಅವರಿಗೆ ಸಲ್ಲಬೇಕು. ಕಾನ್ಶೀ ರಾಮ್ ಸಾಮಾಜಿಕ ಸುಧಾರಕ ಎಂದು ರಾಹುಲ್ ಗಾಂಧಿ ಶ್ಲಾಘಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.