
ಬೆಂಗಳೂರು (ಡಿ.29): ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಾಧನೆಯ ಸಂಭ್ರಮ ಯಾತ್ರೆ ಮುಗಿಸಿ ಬೆಂಗಳೂರಿನಲ್ಲಿ ಬಜೆಟ್ ಸಿದ್ಧತೆಗಳಿಗೆ ತೊಡಗುವ ಸಮಯಕ್ಕೆ ಸರಿಯಾಗಿ ಎಐಸಿಸಿ ನೂತನ ಅಧ್ಯಕ್ಷ ರಾಹುಲ್ ಗಾಂಧಿ ಅವರ ನೇರ ನಿಗಾವಣೆಯಲ್ಲಿರುವ ಎರಡು ಪ್ರತ್ಯೇಕ ತಂಡಗಳು ಕರ್ನಾಟಕಕ್ಕೆ ಕಾಲಿಡಲಿವೆ.
ಈ ಎರಡು ತಂಡಗಳು ರಾಜ್ಯದ ನಾಯಕರ ಹಿಡಿತವಿಲ್ಲದೇ ಮುಕ್ತವಾಗಿ ಕೆಲಸ ಮಾಡಲಿವೆ. ಅಂದಹಾಗೆ ಈ ಎರಡು ತಂಡಗಳ ಕೆಲಸ ಹೀಗಿರುತ್ತದೆ;
1. ಎಐಸಿಸಿ ನಡೆಸಿದ ಸಮೀಕ್ಷೆ ಆಧರಿಸಿ ಚುನಾವಣೆಯಲ್ಲಿ ಗೆಲ್ಲಬಲ್ಲ ಅಭ್ಯರ್ಥಿಗಳ ಬಗ್ಗೆ ತನ್ನದೇ ಆದ ಯಾದಿ ಸಿದ್ಧಪಡಿಸುವುದು ಮತ್ತು ಪ್ರತಿ ಕ್ಷೇತ್ರಕ್ಕೆ ಸೀಮಿತವಾಗಿ ಚುನಾವಣಾ ತಂತ್ರವೇನಾಗಬೇಕು ಎಂಬ ಬಗ್ಗೆ ಹೈಕಮಾಂಡ್ ಗೆ ಸಲಹೆ ನೀಡುವುದು.
2. ರಾಜ್ಯ ನಾಯಕರ ಹಿಡಿತದಲ್ಲಿರುವ ಸೋಷಿಯಲ್ ಮೀಡಿಯಾ ಪ್ರಚಾರಕ್ಕೆ ಬದಲಾಗಿ ತನ್ನದೇ ಆದ ಸೋಷಿಯಲ್ ಮೀಡಿಯಾ ಪ್ರಚಾರಾಂದೋಲನ ಆರಂಭಿಸುವುದು. ಚುನಾವಣಾ ಅಭ್ಯರ್ಥಿಗಳನ್ನು ಗುರುತಿಸಲು ಬರುವ ತಂಡ ವಾಸ್ತವವಾಗಿ ಕಾಂಗ್ರೆಸ್ ಪಕ್ಷದೊಂದಿಗೆ ಸಂಬಂಧವಿಲ್ಲದವರಾಗಿರುವುದಿಲ್ಲ. ಅಷ್ಟೇ ಅಲ್ಲ, ರಾಜ್ಯದಲ್ಲಿ ಗೆಲ್ಲುವ ಅಭ್ಯರ್ಥಿಗಳ ಆಯ್ಕೆ ನಡೆಸಲು ಈಗಾಗಲೇ ನಡೆದಿರುವ ಅಥವಾ ಸಮೀಕ್ಷೆ ನಡೆಸುತ್ತಿರುವ ಕಂಪನಿಗಳಿಗೆ ಸಂಬಂಧಿಸಿದ್ದೂ ಆಗಿರುವುದಿಲ್ಲ. ಬದಲಾಗಿ, ಈ ತಂಡ ಪಕ್ಕಾ ವೃತ್ತಿ ಪರ ತಂಡವಾಗಿರಲಿದ್ದು, ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೆಲಸ ಮಾಡಿದ ಅನುಭವವುಳ್ಳ ಪುಟ್ಟ ಹಾಗೂ ಯುವ ತಂಡವಾಗಿರಲಿದೆ. ಕೆಲವೇ ಸದಸ್ಯರನ್ನು ಹೊಂದಿರುವ ಈ ತಂಡ ರಾಜ್ಯ ಸಂಚಾರ ನಡೆಸಲಿದ್ದು, ತನ್ನದೇ ಆದ ಮೂಲಗಳ ಮೂಲಕ ಪ್ರತಿ ಕ್ಷೇತ್ರದಲ್ಲೂ ಗೆಲ್ಲುವ ಅಭ್ಯರ್ಥಿ ಯಾರಿರಬಹುದು ಮತ್ತು ಕೆಪಿಸಿಸಿ ಹಾಗೂ ರಾಜ್ಯ ನಾಯಕತ್ವ ಸೂಚಿಸುತ್ತಿರುವ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಯಾವ ರೀತಿಯ ವರ್ಚಸ್ಸು ಹೊಂದಿದ್ದಾರೆ ಎಂಬು ದನ್ನು ಹೈಕಮಾಂಡ್‌ಗೆ ತಿಳಿಸಲಿದೆ. ಜತೆಗೆ, ಪ್ರತಿ ಕ್ಷೇತ್ರಕ್ಕೆ ನಿರ್ದಿಷ್ಟವಾಗಬಹುದಾದ ಚುನಾವಣಾ ತಂತ್ರವೇನಾಗಿರಬೇಕು ಎಂಬ ಸಲಹೆಯನ್ನು ಹೈಕಮಾಂಡ್‌ಗೆ ನೀಡಲಿದೆ.
ಎಐಸಿಸಿ ಸೋಷಿಯಲ್ ಮೀಡಿಯಾ ತಂಡ: ಇದು ತಂಡ ಪಕ್ಕಾ ಕಾಂಗ್ರೆಸ್ ತಂಡವಾಗಿರಲಿದ್ದು, ಇದು ಎಐಸಿಸಿಯ ಸೋಷಿಯಲ್ ಮೀಡಿಯಾ ತಂಡದ ಒಂದು ಭಾಗವಾಗಿರಲಿದೆ. ಪ್ರಸ್ತುತ ರಾಜ್ಯದಲ್ಲಿ ಕೆಪಿಸಿಸಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕಚೇರಿಯು ಎರಡು ಪ್ರತ್ಯೇಕ ಸೋಷಿಯಲ್ ಮೀಡಿಯಾ ಪ್ರಚಾರ ತಂಡಗಳನ್ನು ಹೊಂದಿವೆ. ಈ ಎರಡು ತಂಡಗಳು ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುತ್ತಿವೆ. ಈ ತಂಡಗಳ ಕಾರ್ಯಾಚರಣೆ ಬಗ್ಗೆ ಎಐಸಿಸಿಗೆ ಸಮಾಧಾನವಿಲ್ಲ ಎನ್ನಲಾಗಿದೆ. ಹೀಗಾಗಿ, ದೆಹಲಿಯಿಂದ ಆಗಮಿಸಲಿರುವ ಸೋಷಿಯಲ್ ಮೀಡಿಯಾ ತಂಡವು ಈ ಎರಡು ಪ್ರತ್ಯೇಕ ತಂಡಗಳ ಮೇಲುಸ್ತುವಾರಿ ವಹಿಸಿಕೊಳ್ಳಲಿದ್ದು, ಚುನಾವಣೆಗೆ ಕಾಂಗ್ರೆಸ್‌ನ ಸೋಷಿಯಲ್ ಮೀಡಿಯಾ ಪ್ರಚಾರದ ಹೊಣೆ ಯನ್ನು ಹೊತ್ತುಕೊಳ್ಳಲಿದೆ. ಸೋಷಿಯಲ್ ಮೀಡಿಯಾ ಪ್ರಚಾರದಲ್ಲಿ ನುರಿತ ಸುಮಾರು 30 ಜನರನ್ನು ಈ ತಂಡ ಹೊಂದಿರಲಿದೆ ಎಂದು ಎಐಸಿಸಿ ಮೂಲಗಳು ತಿಳಿಸಿವೆ.
ಕನ್ನಡ ಪ್ರಭ ವಿಶೇಷ ವರದಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.