
ನವದೆಹಲಿ(ಅ. 27): ರಾಹುಲ್ ಗಾಂಧಿ ಇತ್ತೀಚಿನ ದಿನಗಳಲ್ಲಿ ಹೆಚ್ಚೆಚ್ಚು ಜನಪ್ರಿಯರಾಗುತ್ತಿದ್ದಾರೆಂಬ ಸುದ್ದಿ ಇದೆ. ಸೋಷಿಯಲ್ ಮೀಡಿಯಾದಲ್ಲಿ ಅವರ ಫಾಲೋಯರ್ಸ್ ಹೆಚ್ಚಾಗಿದ್ದಾರೆ. ಗಾಂಧಿ ಕುಟುಂಬದ ಸದಸ್ಯ ಹಾಗೂ ಅವಿವಾಹಿತ ಎಂಬ ವಿಚಾರ ಬಿಟ್ಟು ಅವರ ಬೇರೆ ವೈಯಕ್ತಿಕ ವಿಷಯಗಳು ಸಾರ್ವಜನಿಕರಿಗೆ ಹೆಚ್ಚಾಗಿ ಗೊತ್ತಿಲ್ಲ. ಹಾರ್ವರ್ಡ್ ಮತ್ತು ಕೇಂಬ್ರಿಡ್ಜ್ ವಿವಿಗಳಲ್ಲಿ ಓದಿದ ಅವರು ಕಾಂಗ್ರೆಸ್'ನ ಮುಂದಿನ ಭವಿಷ್ಯವೆನಿಸಿದ್ದಾರೆ. ಇಂತಿಪ್ಪ ರಾಹುಲ್ ಗಾಂಧಿ ಬಗೆಗಿನ ವೈಯಕ್ತಿಕ ವಿಚಾರಗಳು ಈಗ ದುತ್ತನೆ ಗರಿಗೆದರಿವೆ. ನಿನ್ನೆ ನಡೆದ ಪಿಎಚ್'ಡಿ ವಾಣಿಜ್ಯ ಮಂಡಳಿಯ ವಾರ್ಷಿಕ ಸಭೆಯಲ್ಲಿ ಬಾಕ್ಸರ್ ವಿಜೇಂದರ್ ಅವರ ಪ್ರಶ್ನೆಗಳಿಗೆ ಉತ್ತರಿಸುವ ವೇಳೆ ರಾಹುಲ್ ಗಾಂಧಿಯವರೇ ಸ್ವತಃ ಅವರ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ರಾಜಕಾರಣಿಗಳು ಯಾಕೆ ಕ್ರೀಡೆಗಳಲ್ಲಿ ಪಾಲ್ಗೊಳ್ಳೋದಿಲ್ಲ ಎಂದು ವಿಶ್ವ ಬಾಕ್ಸಿಂಗ್ ಚಾಂಪಿಯನ್ ವಿಜೇಂದರ್ ಸಿಂಗ್ ಕೇಳಿದ ಸಹಜ ಪ್ರಶ್ನೆಗೆ ರಾಹುಲ್ ಗಾಂಧಿ ತಮ್ಮನ್ನು ತಾವು ಕ್ರೀಡಾಪಟು ಎಂದು ಹೇಳಿಕೊಂಡಿದ್ದಾರೆ. ಐಕಿಡೋ ಎಂಬ ಜಪಾನೀ ಮಾರ್ಷಲ್ ಆರ್ಟ್ಸ್'ನಲ್ಲಿ ಬ್ಲ್ಯಾಕ್'ಬೆಲ್ಟ್ ಹೊಂದಿದ್ದೇನೆಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ, ಪ್ರತೀ ದಿನ ತಾನು 1 ತಾಸನ್ನು ಆಟಕ್ಕಾಗಿ ಮೀಸಲಿಟ್ಟಿರುತ್ತೇನೆಂದೂ, ರನ್ನಿಂಗ್, ಸ್ವಿಮ್ಮಿಂಗ್ ತಪ್ಪದೇ ಮಾಡುತ್ತೇನೆಂದೂ ತಿಳಿಸಿದ್ದಾರೆ. ಶೀಘ್ರದಲ್ಲೇ ತಾನು ವ್ಯಾಯಾಮ ಮತ್ತು ಆಟ ಆಡುತ್ತಿರುವ ವಿಡಿಯೋಗಳನ್ನು ಇಂಟರ್ನೆಟ್'ಗೆ ಪೋಸ್ಟ್ ಮಾಡುವುದಾಗಿಯೂ ಅವರು ಭರವಸೆ ನೀಡಿದ್ದಾರೆ.
ರಾಹುಲ್'ಗೆ ಬೇರೆ ವಿದ್ಯೆಗಳೂ ಗೊತ್ತು: ಗುರು
ಜಪಾನೀ ಮಾರ್ಷಲ್ ಆರ್ಟ್ ಐಕಿಡೋದಲ್ಲಿ ರಾಹುಲ್ ಗಾಂಧಿ ಗುರುವಾಗಿರುವವರು ಸೇನ್ಸೇ ಪಾರಿಟೋಸ್ ಕಾರ್. ತಮ್ಮ ಶಿಷ್ಯನ ಶಿಸ್ತನ್ನು ಇವರು ಬಹಳ ಮೆಚ್ಚಿಕೊಳ್ಳುತ್ತಾರೆ. ರಾಹುಲ್ ಗಾಂಧಿ ಐಕಿಡೋ ಮಾತ್ರವಲ್ಲ, ಬ್ರೆಜಿಲ್'ನ ಜಿಯು-ಜಿಟ್ಸು ಕಲೆಯನ್ನೂ ಕಲಿತಿದ್ದಾರಂತೆ. ಅಷ್ಟೇ ಅಲ್ಲ, ಕತ್ತಿವರಸೆಯಲ್ಲೂ ರಾಹುಲ್ ಎಕ್ಸ್'ಪರ್ಟ್ ಎಂದು ಅವರ ಗುರುಗಳು ಹೇಳುತ್ತಾರೆ.
ರಾಹುಲ್ ಗಾಂಧಿ ತಮ್ಮ ಮನೆಯಲ್ಲಿ ಇತರ ಇಬ್ಬರು ಸ್ನೇಹಿತರ ಜೊತೆ ಐಕಿಡೋ ಅಭ್ಯಾಸ ನಡೆಸುತ್ತಾರಂತೆ. ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಆಗಾಗ್ಗೆ ಬಂದು ರಾಹುಲ್'ರ ಅಭ್ಯಾಸವನ್ನು ನೋಡಿಕೊಂಡು ಹೋಗತ್ತಾರೆ. 2009ರಿಂದಲೂ ರಾಹುಲ್ ಈ ಜಪಾನೀ ಮಾರ್ಷಲ್ ಆರ್ಟ್ ಪ್ರಾಕ್ಟೀಸ್ ಮಾಡುತ್ತಿದ್ದಾರೆ.
ರಾಹುಲ್ ಮದುವೆ ಯಾವಾಗ?
ರಾಹುಲ್ ಗಾಂಧಿ ಯಾವಾಗ ಮದುವೆಯಾಗ್ತಾರೆ? ಬ್ಯಾಚುಲರ್ ಲೈಫ್'ನಿಂದ ಯಾವಾಗ ಹೊರಗೆ ಬರ್ತಾರೆ? ಎಂಬುದು ತೀರಾ ಕಾಮನ್ ಆಗಿ ಕೇಳಲಾಗುತ್ತಿರುವ ಪ್ರಶ್ನೆ. ದೇಶದ ಅತ್ಯಂತ ಪವರ್'ಫುಲ್ ವ್ಯಕ್ತಿಗಳಲ್ಲೊಬ್ಬರಾದ ರಾಹುಲ್ ಗಾಂಧಿ ಸದ್ಯ ಭಾರತದ ಮೋಸ್ಟ್ ಎಲಿಜಬಲ್ ಬ್ಯಾಚಲರ್ ಆಗಿದ್ದಾರೆ. ಆದರೂ ಅವರ್ಯಾಕೆ ಮದುವೆ ಆಗಿಲ್ಲ ಎಂಬ ಪ್ರಶ್ನೆ ತೀರಾ ಸಹಜ. ಬಾಕ್ಸರ್ ವಿಜೇಂದರ್ ಕೂಡ ಇದೇ ಪ್ರಶ್ನೆಯನ್ನು ಜನಸಾಮಾನ್ಯರ ಪರವಾಗಿ ಕೇಳಿದ್ದಾರೆ. ಸಾಕಷ್ಟು ಪೀಡಿಸಿದ ಬಳಿಕ ರಾಹುಲ್ ಗಾಂಧಿ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. "ಹಣೆ ಬರಹದಲ್ಲಿ ನನಗೆ ನಂಬಿಕೆ ಇದೆ. ಏನಾಗಬೇಕೋ ಅದಾಗುತ್ತದೆ ಬಿಡಿ," ಎಂದು ರಾಹುಲ್ ಗಾಂಧಿ ಉತ್ತರಿಸಿದ್ದಾರೆ.
ಕೆಲ ವರ್ಷಗಳ ಹಿಂದೆ, ರಾಹುಲ್ ಗಾಂಧಿಯವರು ತಮಗೆ ಸ್ಪೇನ್ ಮೂಲದ ಗರ್ಲ್'ಫ್ರೆಂಡ್'ವೊಬ್ಬಳಿದ್ದಾಳೆಂದು ಹೇಳಿದ್ದರು. ಆದರೆ, ತಾನು ಆಕೆಯನ್ನು ವಿವಾಹವಾಗುತ್ತಿಲ್ಲವೆಂದೂ ಅದೇ ಉಸುರಿನಲ್ಲಿ ಸ್ಪಷ್ಟಪಡಿಸಿದ್ದರು. ಆ ಬಳಿಕ ರಾಹುಲ್ ಗಾಂಧಿ ಮದುವೆ ವಿಚಾರವು ಒಂದು ರೀತಿಯಲ್ಲಿ ಯಕ್ಷ ಪ್ರಶ್ನೆಯಾಗಿ ಉಳಿದುಕೊಂಡುಬಿಟ್ಟಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.