
ಬೆಂಗಳೂರು(ಅ.26): ಇಂದಿರಾ ಗಾಂಧಿ ಜನ್ಮ ಶತಮಾನೋತ್ಸವ ಸಮಾರಂಭದ ಹಿನ್ನೆಲೆಯಲ್ಲಿ ನ.19ರಿಂದ ಮೂರು ದಿನಗಳ ಕಾಲ ನಡೆಸಲು ಉದ್ದೇಶಿಸಿದ್ದ ರಾಜ್ಯ ಪ್ರವಾಸವನ್ನು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹಠಾತ್ ರದ್ದುಪಡಿಸಿದ್ದಾರೆ.
ಈ ಹಠಾತ್ ನಿರ್ಧಾರಕ್ಕೆ, ನ.19ರಂದೇ ಎಐಸಿಸಿ ಅಧ್ಯಕ್ಷರಾಗಿ ಅವರು ಪದಗ್ರಹಣ ನಡೆಸಲು ನಿರ್ಧರಿಸಿರುವುದು ಕಾರಣ ಎಂದು ಎಐಸಿಸಿಯ ಉನ್ನತ ಮೂಲಗಳು ತಿಳಿಸಿವೆ. ರಾಹುಲ್ ಗಾಂಧಿ ಈ ಮೊದಲು ನಿಗದಿಯಾದಂತೆ ನವೆಂಬರ್ 19ರಂದು ಚಿಕ್ಕಮಗಳೂರಿನಲ್ಲಿ ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿತ್ತು. ನ.20ರಂದು ಕಡೂರು ಮತ್ತು ಬೀರೂರಿನಲ್ಲಿ ರೋಡ್ ಶೋ ಹಾಗೂ ಶಿವಮೊಗ್ಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಅಲ್ಲದೇ ನ.21ರಂದು ಕುಮಟಾದಲ್ಲಿ ಮೀನುಗಾರರ ಸಮಾವೇಶ ಕೂಡ ಏರ್ಪಡಿಸಲಾಗಿತ್ತು. ಈ ಪ್ರವಾಸದ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರು ಪೂರ್ವಭಾವಿ ಸಭೆಗಳನ್ನು ನಡೆಸಿದ್ದರು. ಆದರೆ, ರಾಹುಲ್ ಗಾಂಧಿ ಅವರು ಪಕ್ಷದ ಅಧ್ಯಕ್ಷರಾಗಿ ಪದಗ್ರಹಣ ಮಾಡಲು ನಿರ್ಧರಿಸಿರುವುದರಿಂದ ಈ ಪ್ರವಾಸ ರದ್ದಾಗಿದೆ ಎಂದು ಮೂಲಗಳು ಹೇಳಿವೆ.
ಅಲ್ಲದೆ, ಕೆಪಿಸಿಸಿಯು ಬೆಂಗಳೂರಿನಲ್ಲಿ ಎಐಸಿಸಿ ಅಧಿವೇಶನ ನಡೆಸಬೇಕು ಎಂಬ ಕೋರಿಕೆಯನ್ನು ಸದ್ಯಕ್ಕೆ ಹೈಕಮಾಂಡ್ ತಳ್ಳಿ ಹಾಕುವ ಸಾಧ್ಯತೆಯಿದೆ. ಏಕೆಂದರೆ, ದೆಹಲಿ ಅಥವಾ ಪಂಜಾಬ್‌ನಲ್ಲಿ ಒಂದು ದಿನದ ಎಐಸಿಸಿ ಅಧಿವೇಶನ ನಡೆಸಲು ತೀರ್ಮಾನಿಸಿದೆ ಎನ್ನಲಾಗಿದೆ. ಇದಾದ ನಂತರ ಮೂರು ದಿನಗಳ ಕಾಲದ ಅಧಿವೇಶನ ಬೆಂಗಳೂರಿನಲ್ಲಿ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.