ಡಿವೈಎಸ್'ಪಿ ಗಣಪತಿ ಪ್ರಕರಣ: ಸಿಬಿಐಗೆ ದಾಖಲೆಗಳು ಇಂದು ಹಸ್ತಾಂತರ

By Suvarna Web DeskFirst Published Oct 26, 2017, 8:29 AM IST
Highlights

* ಡಿವೈಎಸ್ಪಿ ಗಣಪತಿ ಸಾವು ಪ್ರಕರಣದ ತನಿಖೆ ಸಿಐಡಿಯಿಂದ ಸಿಬಿಐಗೆ ಹಸ್ತಾಂತರ

* ಕೆ.ಜೆ.ಜಾರ್ಜ್, ಎ.ಎಂ.ಪ್ರಸಾದ್, ಐಜಿಪಿ ಪ್ರಣವ್ ಮೊಹಾಂತಿ ವಿರುದ್ಧ ಆರೋಪ ಮಾಡಿದ್ದ ಗಣಪತಿ

* 2016ರಲ್ಲಿ ಮಡಿಕೇರಿಯ ಲಾಡ್ಜ್'ನಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ ಡಿವೈಎಸ್ಪಿ

* ಮೂವರಿಗೆ ಕ್ಲೀನ್ ಚಿಟ್ ನೀಡಿದ್ದ ಸಿಐಡಿ

* ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಸಿಬಿಐಗೆ ಪ್ರಕರಣದ ತನಿಖೆ ಹಸ್ತಾಂತರ

ಬೆಂಗಳೂರು(ಅ. 26): ಡಿವೈಎಸ್ಪಿ ಗಣಪತಿ ಸಾವು ಪ್ರಕರಣದ ಸಂಬಂಧದ ದಾಖಲೆಗಳನ್ನು ಸಿಐಡಿ ಇಂದು ಸಿಬಿಐಗೆ ಹಸ್ತಾಂತರಿಸಲಿದೆ. ಸಿಬಿಐಗೆ ದಾಖಲೆ ಸಲ್ಲಿಕೆ ಸಂಬಂಧ ಸಿಐಡಿ ಡಿಜಿಪಿ ಸಿ.ಎಚ್.ಕಿಶೋರ್'ಚಂದ್ರ ಅವರ ಅನುಮತಿಯನ್ನು ನಿನ್ನೆ ಪಡೆದ ಡಿವೈಎಸ್ಪಿ ಶ್ರೀಧರ್ ಇವತ್ತು ಬೆಳಗ್ಗೆ ವಿಮಾನದಲ್ಲಿ ಚೆನ್ನೈಗೆ ಪ್ರಯಾಣ ಬೆಳೆಸಿ ಸಿಬಿಐ ಅಧಿಕಾರಿಗಳನ್ನು ಭೇಟಿಯಾಗಲಿದ್ದಾರೆ.

ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸರಕಾರದ ನಿರ್ದೇಶನದ ಮೇರೆ ಸಿಐಡಿ ತನಿಖೆ ನಡೆಸಿ ವರದಿಯನ್ನೂ ಸಲ್ಲಿಸಿದೆ. ಡಿವೈಎಸ್ಪಿಯವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿದ್ದ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಗುಪ್ತದಳ ಮುಖ್ಯಸ್ಥ ಎ.ಎಂ.ಪ್ರಸಾದ್ ಹಾಗೂ ಐಜಿಪಿ ಪ್ರಣವ್ ಮೊಹಂತಿ ಅವರಿಗೆ ಸಿಐಡಿ ಕ್ಲೀನ್‌'ಚೀಟ್ ನೀಡಿದೆ. ಈಗ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಸಿಬಿಐ ಈ ಪ್ರಕರಣದ ತನಿಖೆ ನಡೆಸಲಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಕುರಿತ ದಾಖಲೆಗಳ ಸಲ್ಲಿಕೆಗೆ ಸಿಬಿಐ ಮುಖ್ಯಸ್ಥರು ಪತ್ರ ಬರೆದಿದ್ದರು. ಅದರಂತೆ ಗಣಪತಿ ಆತ್ಮಹತ್ಯೆ ಕುರಿತ ತನ್ನ ತನಿಖಾ ವರದಿ, ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರು ಹಾಗೂ ವೈದಕೀಯ ವರದಿಗಳು ಸೇರಿದಂತೆ ಎಲ್ಲ ದಾಖಲೆಗಳನ್ನು ಸಿಬಿಐಗೆ ಸಿಐಡಿ ಹಸ್ತಾಂತರಿಸಲಿದೆ.

2016ರಲ್ಲಿ ಮಡಿಕೇರಿಯ ಲಾಡ್ಜ್'ವೊಂದರಲ್ಲಿ ಡಿವೈಎಸ್'ಪಿ ಗಣಪತಿಯವರು ನೇಣುಬಿಗಿದುಕೊಂಡು ಸಾವನ್ನಪ್ಪಿದ್ದರು. ಆ ದಿನ ಸಾಯುವ ಮುನ್ನ ಅವರು ಸ್ಥಳೀಯ ಟಿವಿ ಚಾನೆಲ್'ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಗೃಹ ಸಚಿವ ಕೆ.ಜೆ.ಜಾರ್ಜ್ ಸೇರಿದಂತೆ ಮೂವರ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದರು. ತಮಗೇನಾದರೂ ಹೆಚ್ಚೂಕಡಿಮೆ ಅದರೆ ಈ ಮೂವರೇ ಹೊಣೆ ಎಂದೂ ಹೇಳಿದ್ದರು. ಕಾಕತಾಳೀಯವೆಂಬಂತೆ, ಅಂದೇ ರಾತ್ರಿ ಅವರು ತಮ್ಮ ಲಾಡ್ಜ್'ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದರು.

click me!