ಐರೋಪ್ಯ ಸಂಸದರದ್ದು ನಿಯೋಗವೋ, ಪ್ರವಾಸವೋ?: ಆಯೋಜಕರ ಕಚೇರಿ ಬಂದ್!

By Web DeskFirst Published Oct 30, 2019, 5:57 PM IST
Highlights

ಐರೋಪ್ಯ ಸಂಸದರದ್ದು ನಿಯೋಗವೋ, ಪ್ರವಾಸವೋ?| ಸಂಸದರ ನಿಯೋಗದ ಪ್ರವಾಸ ಆಯೋಜಿಸಿದ್ದ ಸಂಸ್ಥೆಯ ಕಚೇರಿಗೆ ಬೀಗ| ಭಾರತ ಸರ್ಕಾರದಿಂದ ಆಯೋಜಿತವಾದ ಅಧಿಕೃತ ಭೇಟಿ ಅಲ್ಲವೇ?| ಇಂಟರ್'ನ್ಯಾಶನಲ್ ಇನ್ಸಿಟ್ಯೂಟ್ ಫಾರ್ ಅಲೈಡ್ ಸ್ಟಡೀಸ್ ಸಂಸ್ಥೆಯ ದೆಹಲಿ ಕಚೇರಿಗೆ ಬೀಗ| 20 ಸಂಸದರಿಗೆ ಭಾರತ ಪ್ರವಾಸಕ್ಕೆ ಆಹ್ವಾನ ನೀಡಿದ್ದ ಮಾದಿ ಶರ್ಮಾ ಯಾರು?| 20 ಸಂಸದರು ಬಂದಿದ್ದು ಪ್ರವಾಸಕ್ಕೋ ಅಥವಾ ಕಣಿವೆ ಪರಿಸ್ಥಿತಿಯ ಅವಲೋಕನಕ್ಕೋ?|

ನವದೆಹಲಿ(ಅ.30): ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಭಾರತದ ಕ್ರಮ ಹಾಗೂ ಕಣಿವೆಯ ಪರಿಸ್ಥಿತಿ ಅವಲೋಕನಕ್ಕಾಗಿ ಬಂದಿರುವ ಐರೋಪ್ಯ ಒಕ್ಕೂಟದ ಸಂಸದರ ನಿಯೋಗದ ಅಧಿಕೃತತೆ ಕುರಿತು ಪ್ರಶ್ನೆ ಎದ್ದಿದೆ.

ಐರೋಪ್ಯ ಒಕ್ಕೂಟದ ಸಂಸದರಿಗೆ ದೆಹಲಿ ಮೂಲದ ಖಾಸಗಿ ಸಂಸ್ಥೆಯೊಂದು ಪ್ರವಾಸ ಅಧ್ಯಯನಕ್ಕೆ ಆಹ್ವಾನ ನೀಡಿದ್ದು, ಇದು ಭಾರತ ಸರ್ಕಾರದಿಂದ ಆಯೋಜಿತವಾದ ಅಧಿಕೃತ ಭೇಟಿ ಅಲ್ಲ ಎಂಬುದು ಸ್ಪಷ್ಟವಾಗಿದೆ.
ಕಣಿವೆ ನೋಡುವುದೇ ಸುಯೋಗ: ಕಣಿವೆಗೆ ಭೇಟಿ ನೀಡಿದ ಯೂರೋಪಿಯನ್ ನಿಯೋಗ!

ಅಲ್ಲದೇ ಐರೋಪ್ಯ ಒಕ್ಕೂಟದ 20 ಸಂಸದರಿಗೆ ಭಾರತಕ್ಕೆ ಅಧ್ಯಯನ ಪ್ರವಾಸಕ್ಕೆ ಆಹ್ವಾನ ನೀಡಿದ್ದ ಇಂಟರ್'ನ್ಯಾಶನಲ್ ಇನ್ಸಿಟ್ಯೂಟ್ ಫಾರ್ ಅಲೈಡ್ ಸ್ಟಡೀಸ್ ಸಂಸ್ಥೆಯ ದೆಹಲಿ ಕಚೇರಿಗೆ ಬೀಗ ಹಾಕಲಾಗಿದೆ.

ಇಂಟರ್'ನ್ಯಾಶನಲ್ ಇನ್ಸಿಟ್ಯೂಟ್ ಫಾರ್ ಅಲೈಡ್ ಸ್ಟಡೀಸ್ ಸಂಸ್ಥೆಯ ಪರವಾಗಿ ಮಾದಿ ಶರ್ಮಾ ಎಂಬ ಮಹಿಳೆ 20 ಐರೋಪ್ಯ ಒಕ್ಕೂಟದ ಸಂಸದರಿಗೆ ಇ-ಮೇಲ್ ಮೂಲಕ ಭಾರತ ಪ್ರವಾಸದ ಆಹ್ವಾನ ನೀಡಿದ್ದರು.

ಇ-ಮೇಲ್‌ನಲ್ಲಿ ಎರಡು ದಿನಗಳ ಭಾರತ ಪ್ರವಾಸ, ಪ್ರಧಾನಿ ಮೋದಿ ಭೇಟಿ ಹಾಗೂ ಜಮ್ಮು ಮತ್ತು ಕಾಶ್ಮೀರದ ಪ್ರವಾಸದ ಉಲ್ಲೇಖವಿದೆಯೇ ಹೊರತು ಆರ್ಟಿಕಲ್ 370 ರದ್ದತಿ ಬಳಿಕ ಕಣಿವೆ ಪರಿಸ್ಥಿತಿಯ ಅವಲೋಕನ ಕುರಿತು ಉಲ್ಲೇಖವೇ ಇಲ್ಲ.

'ನಾಜಿ ಲವರ್ಸ್'ಗಳಿಂದ ಕಣಿವೆ ಭೇಟಿ: ಮೋದಿ ವಿರುದ್ಧ ಒವೈಸಿ ಕಿಡಿ!

ಇಷ್ಟೇ ಅಲ್ಲದೇ ಈ ಹಿಂದೆ ಕಾಶ್ಮೀರ ವಿಚಾರವಾಗಿ ಮೋದಿ ಸರ್ಕಾರದ ನಿಲುವನ್ನು ಟೀಕಿಸಿದ್ದ ಲಿಬರಲ್ ಡೆಮೊಕ್ರ್ಯಾಟ್ ಪಕ್ಷದ ಸಂಸದ ಕ್ರಿಸ್ ಡೆವಿಸ್ ಅವರನ್ನು ನಿಯೋಗದಿಂದ ಕೈಬಿಟ್ಟಿರುವುದು ಕೂಡ ಅನುಮಾನಕ್ಕೆ ಕಾರಣವಾಗಿದೆ. ಡೆವಿಸ್ ತಮ್ಮ ಹಾಗೂ ಮಾದಿ ಶರ್ಮಾ ನಡುವೆ ನಡೆದ ಇ-ಮೇಲ್ ಸಂಭಾಷಣೆಯನ್ನು ಇದೀಗ ಬಹಿರಂಗಗೊಳಿಸಿದ್ದಾರೆ.

ಐರೋಪ್ಯ ಒಕ್ಕೂಟದ ನಿಯೋಗ ಭಾರತಕ್ಕೆ ಬಂದು ಪ್ರಧಾನಿ ಮೋದಿ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರನ್ನು ಭೇಟಿ ಮಾಡಿತ್ತು. ಈ ವೇಳೆ ಮಾದಿ ಶರ್ಮಾ ಕೂಡ ಉಪಸ್ಥಿತರಿದ್ದರು.

ಭಾರತಕ್ಕೆ ಫುಲ್ ಸಪೋರ್ಟ್: ಐರೋಪ್ಯ ಒಕ್ಕೂಟ ನಿಯೋಗದ ಘೋಷಣೆ!

ಆದರೆ ಸದ್ಯ ಇಂಟರ್'ನ್ಯಾಶನಲ್ ಇನ್ಸಿಟ್ಯೂಟ್ ಫಾರ್ ಅಲೈಡ್ ಸ್ಟಡೀಸ್ ಸಂಸ್ಥೆಯ ದೆಹಲಿ ಕಚೇರಿಗೆ ಬೀಗ ಹಾಕಲಾಗಿದ್ದು, ಸಂಸ್ಥೆಗೆ ಸೇರಿದ ಯಾರೋಬ್ಬರೂ ಸಂಪರ್ಕಕ್ಕೆ ಸಿಗುತ್ತಿಲ್ಲ.

click me!