
ನವದೆಹಲಿ[ನ.29]: ಅಪನಗದೀಕರಣ ಬಳಿಕ ಬಿಡುಗಡೆಯಾದ 2000 ಹಾಗೂ 500 ರು. ಮುಖಬೆಲೆಯ ನೋಟುಗಳು ಉತ್ತಮ ಗುಣಮಟ್ಟಹೊಂದಿಲ್ಲ, ಹೆಚ್ಚು ದಿನ ಬಾಳಿಕೆ ಬರುವುದಿಲ್ಲ ಎಂಬ ಜನಸಾಮಾನ್ಯರ ಮಾತು ಈಗ ನಿಜವಾಗುತ್ತಿದೆಯೇ?
- ಹೌದು ಎನ್ನುತ್ತಿವೆ ಸರ್ಕಾರಿ ಅಧಿಕಾರಿಗಳನ್ನು ಉಲ್ಲೇಖಿಸಿರುವ ಮಾಧ್ಯಮ ವರದಿಗಳು. 2016ರ ನವೆಂಬರ್ ನಂತರ ಚಲಾವಣೆಗೆ ಬಂದಿರುವ ಹೊಸ ರೂಪ, ಬಣ್ಣದ ನೋಟುಗಳು ಈ ಹಿಂದೆ ಚಲಾವಣೆಯಲ್ಲಿದ್ದ ಹಳೆಯ ನೋಟುಗಳಿಗೆ ಹೋಲಿಸಿದರೆ ಬಹುಬೇಗನೇ ಆಯಸ್ಸು ಕಳೆದುಕೊಳ್ಳುತ್ತಿದ್ದು, ನಿರುಪಯುಕ್ತವಾಗುತ್ತಿವೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಪ್ರಕಟವಾಗಿರುವ ವರದಿಗಳು ತಿಳಿಸಿವೆ.
"
‘ಹಿಂದೆ ಚಲಾವಣೆಯಲ್ಲಿದ್ದ ನೋಟುಗಳಿಗೆ ಹೋಲಿಸಿದರೆ ಹೊಸ ಬಗೆಯ ನೋಟುಗಳು ಉತ್ತಮ ಗುಣಮಟ್ಟದಿಂದ ಕೂಡಿಲ್ಲ ಎಂಬುದು ಹಳೆಯ ದೂರು. ಜನರು ನೋಟುಗಳನ್ನು ಮಡಚುವುದರಿಂದ ಹಾಗೂ ಸೀರೆ ಅಥವಾ ಪಂಚೆಗೆ ಕಟ್ಟಿಕೊಳ್ಳುತ್ತಿರುವುದರಿಂದ ನೋಟು ಬಹುಬೇಗನೆ ನಿರುಪಯುಕ್ತವಾಗುತ್ತಿವೆ’ ಎಂದು ಹಣಕಾಸು ಸಚಿವಾಲಯದ ಬ್ಯಾಂಕ್ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
‘ಒಂದು ವೇಳೆ ನೋಟುಗಳು ನಿರುಪಯುಕ್ತ ವಿಭಾಗಕ್ಕೆ ಸೇರ್ಪಡೆಯಾದರೆ, ಅದನ್ನು ಬ್ಯಾಂಕುಗಳಲ್ಲೂ ಚಲಾವಣೆ ಮಾಡಲಾಗದು. ಏಕೆಂದರೆ, ಎಟಿಎಂಗಳಲ್ಲಿನ ಸೆನ್ಸರ್‌ಗಳು ಈ ನೋಟನ್ನು ಪತ್ತೆ ಮಾಡುವುದು ಕಷ್ಟವಾಗುತ್ತದೆ’ ಎಂದು ಆ ಅಧಿಕಾರಿ ಹೇಳಿದ್ದಾರೆ.
2000 ಹಾಗೂ 500 ರು. ಮುಖಬೆಲೆಯ ನೋಟು ನಿರುಪಯುಕ್ತವಾದರೆ, ಅದೇ ಗುಣಮಟ್ಟಹೊಂದಿದೆ ಎನ್ನಲಾಗಿರುವ ಹಾಗೂ ಈ ವರ್ಷ ಬಿಡುಗಡೆಯಾದ 10 ರು. ಮುಖಬೆಲೆಯ ನೋಟು ಕೂಡ ನಿರುಪಯುಕ್ತವಾಗಲಿದೆ ಎಂದು ವರದಿ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ